ಉಳ್ಳಾಲ: ನೇತ್ರಾವತಿ ನದಿ ತೀರವನ್ನು ಮಾಲಿನ್ಯ ಮಾಡುವ ಕಾರ್ಯ ಕಳೆದ ಹಲವು ವರ್ಷಗಳಿಂದ ಎಗ್ಗಿಲ್ಲದೆ ನಡೆಯುತ್ತಿದೆ. ಅದರಲ್ಲೂ ರಾಷ್ಟ್ರೀಯ ಹೆದ್ದಾರಿ 66ರ ಆಡಂಕುದ್ರು ಬಳಿ ಇರುವ ನೇತ್ರಾವತಿ ಸೇತುವೆ ಜನರಿಗೆ ಕಸ, ತ್ಯಾಜ್ಯ ಎಸೆಯಲು ಅತ್ಯಂತ ಸುಲಭ ಜಾಗವಾಗಿತ್ತು. ನೇತ್ರಾವತಿ ಸೇತುವೆಯಲ್ಲಿ ಸರಣಿ ಆತ್ಮಹತ್ಯೆ ಬಳಿಕ ಸೇತುವೆಗೆ ಎತ್ತರದ ತಂತಿ ಬೇಲಿ ಹಾಕಿದ ಬಳಿಕ ಆತ್ಮಹತ್ಯೆ ಪ್ರಮಾಣ ಕಡಿಮೆಯಾದರೂ ಸೇತುವೆ ಮೂಲಕ ನದಿಗೆ ಕಸ ಎಸೆಯುವುದು ಮಾತ್ರ ಇನ್ನೂ ನಿಂತಿಲ್ಲ. ಸಿಸಿಟಿವಿ ಇದ್ದರೂ ಇಲ್ಲೊಂದು ಕಾರಿನಲ್ಲಿ ಬಂದ ಸುಶಿಕ್ಷಿತರಂತೆ ಕಾಣುವ ಮಹಿಳೆಯರಿಬ್ಬರು ಕಸ ಎಸೆಯುವ ದೃಶ್ಯ ಹಿಂಬದಿಯಲ್ಲಿದ್ದ ಕಾರಿನಲ್ಲಿದ್ದ ಕ್ಯಾಮರದಲ್ಲಿ ಸೆರೆಯಾಗಿದ್ದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಈ ಇಬ್ಬರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಜಾಲತಾಣದಲ್ಲಿ “ನಮ್ಮ ನೇತ್ರಾವತಿ ನಮ್ಮ ಜವಾಬ್ದಾರಿ’ ಸ್ಲೋಗನ್ ಮೂಲಕ ಅಕ್ರೋಶ ವ್ಯಕ್ತವಾಗುತ್ತಿದೆ.
ಬೆಂಗಳೂರು ನೋಂದಾಯಿತ ಕೆಂಪು ಕಾರಿನಲ್ಲಿ ಬಂದಿದ್ದ ಇಬ್ಬರು ಮಹಿಳೆಯರು ತ್ಯಾಜ್ಯವನ್ನೊಳಗೊಂಡ ಪ್ಲಾಸ್ಟಿಕ್ ಚೀಲವನ್ನು ತಂತಿ ಬೇಲಿ ಮೇಲಿನಿಂದ ನದಿಗೆ ಎಸೆಯುವ 15 ಸೆಕೆಂಡ್‌ಗಳ ದೃಶ್ಯ ಇದೀಗ ವೈರಲ್ ಆಗುತ್ತಿದೆ. ನೇತ್ರಾವತಿ ನದಿಗೆ ತ್ಯಾಜ್ಯ ಎಸೆಯುವವರ ವಿಡಿಯೋವನ್ನು ಸಂಬಂಧಿತ ಅಧಿಕಾರಿಗಳಿಗೆ ತಲುಪುವ ವರೆಗೆ ಶೇರ್ ಮಾಡಿ ಎಂದು ಸಾಮಾಜಿಕ ಜಾಲತಾಣದಲ್ಲಿ ಪರಿಸರಾಸಕ್ತರು ಮನವಿ ಮಾಡುತ್ತಿದ್ದಾರೆ.
ಎರಡು ತಿಂಗಳ ಅಭಿಯಾನದ ಬಳಿಕ ತ್ಯಾಜ್ಯ ಮುಕ್ತವಾಗಿತ್ತು: ರಾಷ್ಟ್ರೀಯ ಹೆದ್ದಾರಿ 66 ರ ಉಳ್ಳಾಲ ಸೇತುವೆಯ ದಕ್ಷಿಣ ತುದಿಯ ಹೆದ್ದಾರಿ ಬದಿ ತ್ಯಾಜ್ಯ ವಸ್ತುಗಳ ತಿಪ್ಪೆ ಗುಂಡಿ ಆಗಿತ್ತು. ಮಂಗಳೂರು ಮಹಾನಗರ ಪಾಲಿಕೆ ಮತ್ತು ಕಂಕನಾಡಿ ಪೊಲೀಸ್ ಠಾಣೆ ವ್ಯಾಪ್ತಿಗೆ ಬರುವ ಈ ಪ್ರದೇಶ ಒಂದು ರೀತಿಯ ಡಂಪಿಂಗ್ ಯಾರ್ಡ್ ಆಗಿ ಪರಿವರ್ತನೆಯಾಗಿತ್ತು. ಕೇರಳ ಭಾಗದಿಂದ ಮಂಗಳೂರು ಕಡೆಗೆ ಬರುವ ಪ್ರಯಾಣಿಕರನ್ನು ಸೇತುವೆ ಪ್ರವೇಶಿಸುತ್ತಿದ್ದಂತೆ ಕೊಳೆತ ಮೀನು, ಮಾಂಸ ಮತ್ತು ಇತರ ತ್ಯಾಜ್ಯ ವಸ್ತುಗಳ ಘಾಟು ವಾಸನೆ ಘಮ್ಮನೆ ಮೂಗಿಗೆ ಬಡಿದು ಸ್ವಾಗತಿಸುತ್ತಿತ್ತು.
ಇದನ್ನೂ ಓದಿ:ಉಡುಪಿ : ದಂಡ ಕಟ್ಟಲು ಹೇಳಿದ ಕಾರಣಕ್ಕೆ ಟ್ರಾಫಿಕ್ ಎಸ್ ಐಗೆ ಆವಾಜ್ ಹಾಕಿದ ಮಹಿಳೆ.!
ಮಂಗಳೂರಿನಿಂದ ತೊಕ್ಕೊಟ್ಟು, ಉಳ್ಳಾಲ, ಕೊಣಾಜೆ, ಕಾಸರಗೋಡು ಕಡೆಗೆ ಪ್ರಯಾಣಿಸುವ ಜನರಿಗೆ ಉಳ್ಳಾಲ ಸೇತುವೆಯ ತುದಿ ತಲಪುತ್ತಿದ್ದಂತೆ ಈ ದುರ್ಗಂಧದ ಅನುಭವವಾಗುತ್ತಿತ್ತು. ಇದು ಕಳೆದ ಹಲವು ವರ್ಷಗಳಿಂದ ಸಮಸ್ಯೆಯಾಗಿಯೇ ಉಳಿದಿತ್ತು. ಆದರೆ ಸೇತುವೆಗೆ ತಂತಿ ಬೇಲಿ ಹಾಕಿದ ಬಳಿಕ ನದಿಗೆ ಕಸ ಎಸೆಯುವವರ ಪ್ರಮಾಣ ಕಡಿಮೆಯಾಗಿ ಇದೇ ಪ್ರದೇಶದಲ್ಲಿ ಕಸ ಎಸೆಯುವವರ ಸಂಖ್ಯೆ ಹೆಚ್ಚಾಗಿ ಡಂಪಿಂಗ್ ಯಾರ್ಡ್ ಆಗಿ ಮಾರ್ಪಾಡಾಗಿತ್ತು. ಹಲವು ಬಾರಿ ಮಹಾನಗರ ಪಾಲಿಕೆಯಿಂದ ಕಸವನ್ನು ತೆಗೆದರೂ ಈ ಪ್ರದೇಶದಲ್ಲಿ ತ್ಯಾಜ್ಯ ಹಾಕುವವರ ಸಂಖ್ಯೆ ಕಡಿಮೆಯಾಗಿರಲಿಲ್ಲ. ಕಳೆದ ಎರಡು ತಿಂಗಳ ಹಿಂದೆ ಮಂಗಳೂರು ಸೇರಿದಂತೆ ವಿವಿದೆಡೆಯ ಪರಿಸರಾಸಕ್ತ ಸಂಘಟನೆಗಳು, ಪ್ರತೀ ದಿನ ಬೆಳಗ್ಗಿನಿಂದ ಈ ಪ್ರದೇಶದಲ್ಲಿ ಅಭಿಯಾನ ನಡೆಸಿ ತ್ಯಾಜ್ಯ ಹಾಕುವುದನ್ನು ತಡೆಯುವ ಕಾರ್ಯ ಮಾಡಿದ್ದು, ಪ್ರತೀ ದಿನ ಬೆಳಗ್ಗೆ ಮೂರರಿಂದ ನಾಲ್ಕು ಗಂಟೆಗಳ ಕಾಲ ಫಲಕಗಳನ್ನು ಹಿಡಿದ ಪರಿಸರಾಸಕ್ತರ ಜಂಟಿ ಹೋರಾಟದ ಬಳಿಕ ಈ ಸಮಸ್ಯೆ ತಕ್ಕಮಟ್ಟಿಗೆ ಪರಿಹಾರವಾಗಿತ್ತು.
ಮಹಾನಗರ ಪಾಲಿಕೆ ಮತ್ತು ಪರಿಸರಾಸಕ್ತ ಸಂಘಟನೆಗಳು ಇಲ್ಲಿ ತ್ಯಾಜ್ಯ ಹಾಕುವುದನ್ನು ತಡೆಯುವ ಕಾರ್ಯ ಮಾಡಿದರೂ ಸೇತುವೆಯ ಮೇಲಿನಿಂದ ಎತ್ತರದ ತಂತಿ ಬೇಲಿಯನ್ನು ಸೀಳಿಕೊಂಡು ಕಸ ಎಸೆಯುತ್ತಿರುವ ಈ ಘಟನೆಯನ್ನು ಸಂಬಂಧಿತ ಇಲಾಖೆ ಕಠಿಣ ಕ್ರಮ ಕೈಗೊಳ್ಳುವುದರೊಂದಿಗೆ ಮುಂದೆ ಯಾರು ಇಂತಹ ದುಸ್ಸಾಹಸ ಮಾಡದಂತೆ ಇತರರಿಗೂ ಈ ಘಟನೆ ಪಾಠವಾಗಬೇಕು ಎನ್ನುತ್ತಾರೆ ಪರಿಸರಾಸಕ್ತ ಸಂಘಟನೆಯ ಮುಖಂಡರೊಬ್ಬರು.
ಇದನ್ನೂ ಓದಿ: ಮದುವೆಯಾದ ಮೂರೇ ದಿನಕ್ಕೆ ಕೋವಿಡ್‍ಗೆ ಬಲಿಯಾದ ಯುವಕ