Advertisement
ಕುರಿಯ ಗ್ರಾಮದ ಮಲಾರು ನಿವಾಸಿ, ಪುತ್ತೂರಿನ ಸೈಂಟ್ ವಿಕ್ಟರ್ನ ಅಡುಗೆ ಸಹಾಯಕಿ ಅಗ್ನೇಸ್ ಪ್ರಮೀಳಾ ಡಿ’ಸೋಜಾ (37) ಮೃತಪಟ್ಟವರು. ಮೃತರು ಪುತ್ರಿ, ಪುತ್ರನನ್ನು ಅಗಲಿದ್ದಾರೆ.ಅಗ್ನೇಸ್ ಪ್ರಮೀಳಾ ಅವರು ಬಿಸಿಯೂಟದ ಸಾಂಬಾರು ಬಿದ್ದು ಸಾವನ್ನಪ್ಪಿಲ್ಲ, ವಿಪರೀತ ಮದ್ಯ ಸೇವನೆಯೇ ಸಾವಿಗೆ ಕಾರಣ ಎಂದು ಶಾಲೆಯವರು ಪ್ರತಿಕ್ರಿಯಿಸಿದ್ದಾರೆ.
ಮೇ 30ರಂದು ಶಾಲೆಯಲ್ಲಿ ಮಕ್ಕಳಿಗೆ ಬಿಸಿಯೂಟದ ಅಡುಗೆ ಕೆಲಸ ನಿರ್ವಹಿಸುತ್ತಿದ್ದ ವೇಳೆ ಅಡುಗೆ ಮನೆಯ ಬಾಗಿಲು ಬಳಿ ತಯಾರು ಮಾಡಿ ಇಟ್ಟಿದ್ದ ಬಿಸಿ ಸಾಂಬಾರಿನ ಪಾತ್ರೆಗೆ ಕಾಲು ಜಾರಿ ಬಿದ್ದ ಪರಿಣಾಮ ಪಾತ್ರೆಯಲ್ಲಿದ್ದ ಸಾಂಬಾರು ಅಗ್ನೇಸ್ ಪ್ರಮೀಳಾ ಅವರ ಮೈ ಮೇಲೆ ಬಿದ್ದಿದೆ. ಸುಟ್ಟ ಗಾಯಗೊಂಡ ಅವರನ್ನು ಪುತ್ತೂರು ಆದರ್ಶ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಅಲ್ಲಿನ ವೈದ್ಯರು ಪರೀಕ್ಷಿಸಿ ಹೆಚ್ಚಿನ ಚಿಕಿತ್ಸೆ ಬಗ್ಗೆ ಮಂಗಳೂರಿಗೆ ಕರೆದುಕೊಂಡು ಹೋಗುವಂತೆ ತಿಳಿಸಿದ ಮೇರೆಗೆ ಮಂಗಳೂರು ವೆನ್ಲಾಕ್ ಆಸ್ಪತ್ರೆಯಲ್ಲಿ ವೈದ್ಯರು ಪರೀಕ್ಷಿಸಿ ಒಳರೋಗಿಯಾಗಿ ದಾಖಲಿಸಿದ್ದರು. ಅಲ್ಲಿ ಚಿಕಿತ್ಸೆಯಲ್ಲಿದ್ದ ಅಗ್ನೆಸ್ ಪ್ರಮೀಳಾ ಡಿ’ಸೋಜಾ ಅವರು ಜೂ. 12ರಂದು ಸಂಜೆ ಮೃತಪಟ್ಟಿದ್ದಾರೆ ಎಂದು ಮೃತರ ಸಹೋದರ ನೀಡಿದ ದೂರಿನಲ್ಲಿ ತಿಳಿಸಲಾಗಿದೆ. ಶಾಲೆಯಿಂದ ನಿರಾಕರಣೆ
ಅಗ್ನೇಸ್ ಪ್ರಮೀಳಾ ಅವರು ಮೇ 30ರಂದು ಬೆಳಗ್ಗೆ 11 ಗಂಟೆಗೆ ಶಾಲೆಗೆ ಬಂದಿದ್ದರು. ಅವರು ಕೆಲಸಕ್ಕೆ ಹಾಜರಾಗಿರಲಿಲ್ಲ. ಪಾನಮತ್ತರಾಗಿದ್ದ ಅವರನ್ನು ಅಡುಗೆ ಕೊಠಡಿಗೆ ಕಡೆಗೆ ಹೋಗದಂತೆ ಸೂಚಿಸಿದ್ದು ಪಾತ್ರೆ ತೊಳೆಯುವ ಕೆಲಸ ಆಗಿರುವುದಾಗಿಯು ತಿಳಿಸಲಾಗಿತ್ತು. ಅದಾಗ್ಯೂ ಅಡುಗೆ ಮನೆ ಪಕ್ಕದ ಮೈದಾನದ ಬಳಿ ಕುಳಿತಿದ್ದ ಅವರು ಗಂಜಿ ಬೇಕೆಂದು ಅಡುಗೆ ಕೊಠಡಿಯತ್ತ ತೆರಳಲು ಮುಂದಾಗಿದ್ದಾರೆ. ಜತೆಗೆ ಸಿಬಂದಿಯು ಹೋಗಿದ್ದಾರೆ. ಈ ವೇಳೆ ಅರ್ಧ ತಾಸು ಮೊದಲೇ ತಯಾರು ಮಾಡಿ ಇಟ್ಟಿದ್ದ, 50 ಮಂದಿ ವಿದ್ಯಾರ್ಥಿಗಳಿಗೆ ಸಾಂಬಾರು ಮಾಡುವ ಪಾತ್ರೆಗೆ ಅವರ ಕಾಲು ತಗಲಿ ಬಿದ್ದಿದ್ದು ಅವರ ದೇಹದ ಎರಡು ಕಡೆಗೆ ಗಾಯ ಉಂಟಾಗಿತ್ತು. ಪ್ರಮೀಳಾ ಅವರು ಸ್ವತಃ ಆಸ್ಪತ್ರೆಗೆ ಹೋಗುವುದು ಬೇಡ ಎಂದು ಹೇಳಿದ್ದರೂ ಒತ್ತಾಯಪೂರ್ವಕವಾಗಿ ತಾಲೂಕು ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಅಲ್ಲಿಂದ ಬರ್ನಿಂಗ್‌ಗೆ ಹೆಚ್ಚಿನ ಚಿಕಿತ್ಸೆಗೋಸ್ಕರ ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
Related Articles
Advertisement
ವರದಿ ಸಂಗ್ರಹಶಾಲೆಯವರಿಂದ ಪ್ರಾಥಮಿಕ ಮಾಹಿತಿ ಪಡೆಯಲಾಗಿದೆ. ಅವರ ಹೇಳಿಕೆಯ ಪ್ರಕಾರ ಘಟನೆಯ ದಿನ ಅಡುಗೆ ಸಹಾಯಕಿ ಕೆಲಸ ಮಾಡಿರಲಿಲ್ಲ. ಅಂದು ಮದ್ಯ ಸೇವಿಸಿ ಬಂದಿದ್ದರು. ಅಡುಗೆ ಕೋಣೆ ಬಳಿಗೆ ತೆರಳಿದ ವೇಳೆ ಸಾಂಬಾರು ಪಾತ್ರ ಬಿದ್ದು ಶೇ.18 ರಷ್ಟು ಗಾಯ ಸಂಭವಿಸಿದೆ. ಇದು ವಿಪರೀತ ಮದ್ಯ ಸೇವನೆಯಿಂದ ಉಂಟಾದ ಸಾವು ಎನ್ನುವ ಉತ್ತರ ಸಿಕ್ಕಿದೆ. ಘಟನೆಯ ಬಗ್ಗೆ ಸಮಗ್ರ ವಿವರ ಪಡೆದು ವರದಿಯನ್ನು ಮೇಲಧಿಕಾರಿಗಳಿಗೆ ಕಳುಹಿಸಲಾಗುವುದು ಎಂದು ಅಕ್ಷರ ದಾಸೋಹ ಅಧಿಕಾರಿ ವಿಷ್ಣುಪ್ರಸಾದ್ ಉದಯವಾಣಿಗೆ ತಿಳಿಸಿದ್ದಾರೆ.