ಬೆಂಗಳೂರು: ಕೌಟುಂಬಿಕ ವಿಚಾರಕ್ಕೆ ಪತಿ ಮತ್ತು ಆತನ ಗೆಳತಿಯ ವಿರುದ್ಧ ಡೆತ್‌ನೋಟ್ ಬರೆದಿಟ್ಟು ಮಹಿಳೆಯೊಬ್ಬರು ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೆಂಗೇರಿ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಎಸ್‌ಎಂವಿ ಲೇಔಟ್‌ನ ಪವಿತ್ರಾ (35) ಆತ್ಮಹತ್ಯೆ ಮಾಡಿಕೊಂಡವರು. ವಾಟ್ಸ್‌ಆ್ಯಪ್ ಸ್ಟೇಟಸ್‌ನಲ್ಲಿ ಡೆತ್ ನೋಟ್ ಹಾಕಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಜುಲೈ 2ರಂದು ಘಟನೆ ನಡೆದಿದೆ. ಹೆಗ್ಗನಹಳ್ಳಿ ನಿವಾಸಿ ಪವಿತ್ರಾಗೆ ಇದು 2ನೇ ಮದುವೆಯಾಗಿದ್ದು, ಮೊದಲ ಪತಿಯೊಂದಿಗೆ ಕೌಟುಂಬಿಕ ಕಲಹ ಏರ್ಪಟ್ಟಿದ್ದರಿಂದ ಇಬ್ಬರೂ 2019ರಲ್ಲಿ ಪರಸ್ಪರ ಸಮ್ಮತಿಯೊಂದಿಗೆ ವಿಚ್ಛೇದನ ಪಡೆದುಕೊಂಡಿದ್ದರು. ಪವಿತ್ರಾಗೆ 17 ವರ್ಷ ವಯಸ್ಸಿನ ಮಗಳಿದ್ದು, ಬಳಿಕ ಪವಿತ್ರ ಖಾಸಗಿ ಕಂಪನಿಯೊಂದರಲ್ಲಿ ಮ್ಯಾನೇಜರ್ ಆಗಿ ಕೆಲಸ ಆರಂಭಿಸಿದ್ದರು. ಈ ವೇಳೆ ಅದೇ ಕಂಪನಿಯ ಮಾಲೀಕ ಚೇತನ್ ಗೌಡ ಎಂಬಾತನನ್ನು ಪ್ರೀತಿಸಿ ವಿವಾಹವಾಗಿದ್ದಳು. ಆದರೆ, ಇತ್ತೀಚೆಗೆ ಪತಿ ಪೂಜಾಗೌಡ ಎಂಬ ಮತ್ತೂಬ್ಬ ಯುವತಿ ಜತೆ ಅಕ್ರಮ ಸಂಬಂಧ ಹೊಂದಿದ್ದಾನೆ. ಆಕೆಯಿಂದ ದೂರವಿರುವಂತೆ ಪತಿಗೆ ಬುದ್ದಿವಾದ ಹೇಳಿದರೂ ಆತ, ಆಕೆಯನ್ನು ಬಿಟ್ಟಿರಲಿಲ್ಲ. ಪತಿಯ ನಿರ್ಧಾರದಿಂದ ತೀವ್ರವಾಗಿ ಮನನೊಂದಿದ್ದ ಪವಿತ್ರಾ ಜುಲೈ 2ರಂದು ಗಂಡನೊಂದಿಗಿನ ಜಗಳದ ದೃಶ್ಯಗಳು ಮತ್ತು ತನ್ನ ಸಾವಿಗೆ ಚೇತನ್ ಗೌಡ, ಪೂಜಾಗೌಡ ಕಾರಣವೆಂದು ಆರೋಪಿಸಿ ಬರೆದ ಡೆತ್ ನೋಟ್ ಫೋಟೋಗಳನ್ನು ವಾಟ್ಸ್‌ಆ್ಯಪ್ ಸ್ಟೇಟಸ್‌ನಲ್ಲಿ ಪ್ರಕಟಿಸಿದ್ದರು. ಸ್ಟೇಟಸ್ ನೋಡಿದ್ದ ತಾಯಿ ಪದ್ಮಮ್ಮ ಆತಂಕಗೊಂಡು ಮಗಳ ಮನೆಗೆ ಬಂದು ನೋಡಿದಾಗ ಆಕೆ ನೇಣಿಗೆ ಶರಣಾಗಿರುವುದು ಪತ್ತೆಯಾಗಿದೆ.
ಸದ್ಯ ಮೃತಳ ತಾಯಿ ಪದ್ಮಮ್ಮ ನೀಡಿರುವ ದೂರಿನನ್ವಯ ಚೇತನ್ ಗೌಡ ಹಾಗೂ ಪೂಜಾಗೌಡ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಪರಿಶೀಲನೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದರು.