ಮುಂಬೈ: ಮಿನಿ ಬಸ್ಸಿನ ಚಾಲಕನಿಗೇ ಪೀಡ್ಸ್ ಬಂದು ಬಸ್ಸು ನಿಲ್ಲಿಸಿದಾಗ, ಅದರಲ್ಲಿದ್ದ ಮಹಿಳೆಯೇ ಸುಮಾರು 10 ಕಿ.ಮೀ ಬಸ್ಸು ಚಲಾಯಿಸಿ, ಪ್ರಯಾಣಿಕರೆಲ್ಲರನ್ನು ಸುರಕ್ಷಿತವಾಗಿ ಮನೆಗೆ ತಲುಪಿಸಿರುವ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದೆ.
ಜ.7ರಂದು ಯೋಗಿತಾ ಸತಾವ್ ಹಲವು ಮಹಿಳೆಯರು ಮತ್ತು ಮಕ್ಕಳೊಂದಿಗೆ ಪುಣೆ ಸನಿಹದಲ್ಲಿರುವ ಶಿರೂರಿಗೆ ಪಿಕ್‌ನಿಕ್‌ಗೆಂದು ತೆರಳಿದ್ದರು.
ಅಲ್ಲಿಂದ ವಾಪಸು ಬರುವಾಗ ಚಾಲಕನಿಗೆ ಏಕಾ ಏಕಿ ಪೀಡ್ಸ್ ಬಂದಿದೆ. ಆತ ಬಸ್ಸನ್ನು ರಸ್ತೆ ಮಧ್ಯದಲ್ಲೇ ನಿಲ್ಲಿಸಿಬಿಟ್ಟಿದ್ದಾನೆ.
ತಕ್ಷಣ ಎಚ್ಚೆತ್ತುಕೊಂಡ ಯೋಗಿತಾ, ತಾನೇ ಚಾಲಕಿಯಾಗಿ, 10ಕಿ.ಮೀಗಳಷ್ಟು ದೂರ ಆ ಬಸ್ಸನ್ನು ಚಲಾಯಿಸಿಕೊಂಡು ಬಂದಿದ್ದಾಳೆ. ಎಲ್ಲ ಮಹಿಳೆಯರನ್ನು ಮತ್ತು ಮಕ್ಕಳನ್ನು ಅವರವರ ಮನೆಗೆ ಬಿಟ್ಟು, ಚಾಲಕನನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾಳೆ.
ಕಾರು ಚಲಾಯಿಸಿ ಅಭ್ಯಾಸವಿದ್ದ ಹಿನ್ನೆಲೆ ಧೈರ್ಯದಿಂದ ಬಸ್ಸು ಚಲಾಯಿಸಿದ್ದಾಗಿ ಆಕೆ ಹೇಳಿಕೊಂಡಿದ್ದಾಳೆ. ಆಕೆಯ ಬಸ್ ಡ್ರೈವಿಂಗ್ ವಿಡಿಯೋ ವೈರಲ್ ಆಗಿದೆ.