ಬೆಳಗಾವಿ: ದೇಶದ ಮೊದಲ ಮಹಿಳಾ ಸೈನ್ಯ ಪೊಲೀಸ್ ಭರ್ತಿಗೆ ದೈಹಿಕ ಹಾಗೂ ವೈದ್ಯಕೀಯ ಪರೀಕ್ಷೆಗಳಲ್ಲಿ ಆಯ್ಕೆಗೊಂಡ ಅಭ್ಯರ್ಥಿಗಳನ್ನು ಬೆಳಗಾವಿಯಲ್ಲಿಯೇ ಅಕ್ಟೋಬರ್ 27ರಂದು ನಡೆಯಲಿರುವ ಲಿಖೀತ ಪರೀಕ್ಷೆಗೆ ಆಹ್ವಾನಿಸಲಾಗುಗುವುದು ಎಂದು ನೇಮಕಾತಿ ವಿಭಾಗದ ಉಪ ಮಹಾನಿರ್ದೇಶಕ ದೀಪೇಂದ್ರ ರಾವತ್ ತಿಳಿಸಿದರು.
ಇಲ್ಲಿಯ ಮರಾಠಾ ಲಘು ಪದಾತಿದಳ (ಎಂಎಲ್ಐಆರ್‌ಸಿ) ಕೇಂದ್ರದ ಶಿವಾಜಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಯುವತಿಯರ ದೈಹಿಕ ಪರೀಕ್ಷೆ ಬಳಿಕ ರವಿವಾರ ಮಾಧ್ಯಮದವರಿಗೆ ಮಾಹಿತಿ ನೀಡಿದ ಅವರು, ದೈಹಿಕ, ವೈದ್ಯಕೀಯ ಪರೀಕ್ಷೆಗಳು ಬಹುತೇಕ ಪೂರ್ಣಗೊಂಡಿವೆ. ಸುಮಾರು 1000 ಪೈಕಿ 200 ಅಭ್ಯರ್ಥಿಗಳು ಆಯ್ಕೆಗೊಂಡಿದ್ದಾರೆ ಎಂದರು.
ಇದೇ ಮೊದಲ ಬಾರಿಗೆ ಮಹಿಳಾ ಭರ್ತಿ ಹಮ್ಮಿಕೊಂಡಿದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಆಕಾಂಕ್ಷಿಗಳಿದ್ದಾರೆ. ಮೆರಿಟ್ ಆಧಾರದ ಮೇಲೆ ಮೂರು ಸಾವಿರ ಜನರನ್ನು ಆಹ್ವಾನಿಸಲಾಗಿತ್ತು. ಈ ಪೈಕಿ ಬೆಳಗಾವಿ ಕೇಂದ್ರಕ್ಕೆ ಸಾವಿರ ಜನರ ಪರೀಕ್ಷೆ ನಡೆಸಲಾಗಿದೆ. ಕರ್ನಾಟಕ, ಕೇರಳ, ತಮಿಳುನಾಡು, ತೆಲಂಗಾಣ, ಆಂಧ್ರ ಪ್ರದೇಶ ರಾಜ್ಯಗಳ ಅಭ್ಯರ್ಥಿಗಳ ಪರೀಕ್ಷೆ ನಡೆಸಲಾಗಿದೆ ಎಂದು ಹೇಳಿದರು.
ದೈಹಿಕ ಪರೀಕ್ಷೆಗಳಾದ ಓಟ, ಎತ್ತರ ಜಿಗಿತ, ಉದ್ದ ಜಿಗಿತದಲ್ಲಿ ಪಾಸಾದವರನ್ನು ದೇಹದ ಅಳತೆ ನಡೆಸಲಾಗುತ್ತದೆ. ಕನಿಷ್ಠ 152 ಸೆಂ.ಮೀ. ಎತ್ತರ, ಕನಿಷ್ಠ 41 ಕೆ.ಜಿ. ತೂಕ ಕಡ್ಡಾಯವಾಗಿ ಇರಬೇಕಾಗುತ್ತದೆ. ಎದೆ ಸುತ್ತಳತೆ ಸಾಮಾನ್ಯಕ್ಕಿಂತ ವಿಸ್ತೀರ್ಣ ಮಾಡಿದಾಗ ಕನಿಷ್ಠ 5 ಸೆಂ.ಮೀ. ಹಿಗ್ಗಬೇಕಾಗುತ್ತದೆ. ಇದರಲ್ಲಿ ಉತ್ತೀರ್ಣಗೊಂಡವರನ್ನು ವೈದ್ಯಕೀಯ ಪರೀಕ್ಷೆ ನಡೆಸಿ ಬಳಿಕ ಲಿಖೀತ ಪರೀಕ್ಷೆಗೆ ಆಹ್ವಾನಿಸಲಾಗುತ್ತದೆ ಎಂದು ಹೇಳಿದರು.
ದೇಶಾದ್ಯಂತ 100 ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು. ಬೆಳಗಾವಿ ಕೇಂದ್ರದಲ್ಲಿ ಎಷ್ಟು ಅಭ್ಯರ್ಥಿಗಳು ಆಯ್ಕೆಯಾಗುತ್ತಾರೆ ಎಂಬುದು ಕೊನೆಯಲ್ಲಿಯೇ ಗೊತ್ತಾಗಲಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸದೇ ಅನೇಕ ಅಭ್ಯರ್ಥಿಗಳು ನೇಮಕಾತಿಗಾಗಿ ಬಂದಿದ್ದರು. ಆದರೆ ಮೊದಲು ಅರ್ಜಿ ಸಲ್ಲಿಸಿ ಪ್ರವೇಶ ಪತ್ರಗಳನ್ನು ಪಡೆದವರಿಗೆ ಮಾತ್ರ ಅವಕಾಶ ಇತ್ತು. ಯಾರೂ ನಿರಾಸೆ ಆಗುವುದು ಬೇಡ. ಮತ್ತೆ ಮುಂದಿನ ದಿನಗಳಲ್ಲಿ ಅರ್ಜಿ ಆಹ್ವಾನಿಸಿದಾಗ ಸಲ್ಲಿಸಬಹುದು ಎಂದು ಸ್ಪಷ್ಟಪಡಿಸಿದರು.
ನೇಮಕಾತಿ ನಿರ್ದೇಶಕ ಪ್ರನೀತ ದಂಗವಾಲ್, ನೇಮಕಾತಿ ವಿಭಾಗದ ಹಿಮ್ಕಾ ಕಲ್ಯಾಣಿ ಸೇರಿದಂತೆ ಇತರರಿದ್ದರು.