ಲಕ್ನೋ : ದೀರ್ಘಕಾಲದ ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಉತ್ತರಪ್ರದೇಶದ ಅಂಗನವಾಡಿ ಕಾರ್ಯಕರ್ತೆಯರು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಹೊಸ ಸರಕಾರಕ್ಕೆ ನಾಲ್ಕು ತಿಂಗಳ ಗಡುವು ನೀಡಿದ್ದರು. ಯೋಗಿ ಸರಕಾರ ಅಧಿಕಾರಕ್ಕೆ ಬಂದು ಎಂಟು ತಿಂಗಳಾದರೂ ಅಂಗನವಾಡಿ ಕಾರ್ಯಕರ್ತೆಯರ ಬೇಡಿಕೆಗಳು ಇನ್ನೂ ಈಡೇರಿಲ್ಲ.
ಯೋಗಿ ಸರಕಾರದ ನಿರ್ಲಕ್ಷ್ಯ ಹಾಗೂ ನಿಷ್ಕ್ರಿಯತೆಯನ್ನು ಪ್ರತಿಭಟಿಸಲು ಸೀತಾಪುರದ ಅಂಗನವಾಡಿ ಕಾರ್ಯಕರ್ತೆಯೊಬ್ಬರು “ವರ’ ಸಿಎಂ ಆದಿತ್ಯನಾಥ್ ಅವರ ಫೋಟೋಗೆ ಹಾರ ಹಾಕಿ “ವಧು’ವಾಗಿ ಅವರನ್ನು ವರಿಸಿದಳು. ನೆರೆದ ಅಂಗನವಾಡಿ ಕಾರ್ಯಕರ್ತೆಯರು ಮದುವೆ ಶುಭ ಮುಹೂರ್ತದಲ್ಲಿ ವೇದ ಮಂತ್ರ ಘೋಷ ಗೈದು ಗಟ್ಟಿ ಮೇಳ ಬಾರಿಸಿದರು.
ವರನಾಗಿ ಸಿಎಂ ಆದಿತ್ಯನಾಥ್ ರನ್ನು ವರಿಸುವ ಮೂಲಕವಾದರೂ ನಮ್ಮ ದೀರ್ಘಕಾಲದ ಬೇಡಿಕೆಗಳನ್ನು ಪತಿ ಮಹಾಶಯರ ಸರಕಾರ ಇನ್ನಾದರೂ ಬೇಗನೆ ಈಡೇರಿಸಲಿ ಎಂಬುದೇ ಈ ಫೋಟೋ “ಮದುವೆ’ ಆಶಯವಾಗಿದೆ ಎಂದು ಸಿಎಂ ರನ್ನು ವರಿಸಿದ ಅಂಗನವಾಡಿ ಕಾರ್ಯಕರ್ತೆ ಹೇಳಿದರು.
ಒಂದೊಮ್ಮೆ ಪತಿರಾಯ ಸಿಎಂ ಇನ್ನೂ ನಮ್ಮ ಬೇಡಿಕೆಗಳ ಈಡೇರಿಕೆಯನ್ನು ವಿಳಂಬಿಸಿದರೆ “ನಾನು ಕುದುರೆಯೇರಿ ರಾಜಧಾನಿಗೆ ಹೋಗಿ “ಪತಿರಾಯರನ್ನು ನೇರವಾಗಿ ಕಾಣುತ್ತೇನೆ” ಎಂದು ಸೀತಾಪುರದ “ಸಿಎಂ ವಿವಾಹಿತ’ ಅಂಗನವಾಡಿ ಕಾರ್ಯಕರ್ತೆ ಹೇಳಿದರು.
ಸಿಎಂ ಯೋಗಿ ಆದಿತ್ಯನಾಥರನ್ನು ಹೀಗೆ ಪ್ರತಿಭಟನಾರ್ಥವಾಗಿ ಅವರ ಪೋಟೋಗೆ ಮಾಲೆ ಹಾಕುವ ಮೂಲಕ ವರಿಸಿದಾಕೆ ಮಹಿಳಾ ಕರ್ಮಚಾರಿ ಸಂಘದ ಜಿಲ್ಲಾಧ್ಯಕ್ಷೆ ನೀತು ಸಿಂಗ್ ಅವರು. ಇದು ನಮ್ಮ ವಿಶಿಷ್ಟವೂ ಅನನ್ಯವೂ ಆದ ಪ್ರತಿಭಟನೆಯಾಗಿದೆ; ಸಿಎಂ ಇನ್ನಾದರೂ ನಮ್ಮತ್ತ ಕೃಪೆ ತೋರಲಿ’ ಎಂದಾಕೆ ಹೇಳಿದರು.