ಬೆಂಗಳೂರು: ಊಬರ್ ಕ್ಯಾಬ್ ಚಾಲಕನೊಬ್ಬ ಅನುಚಿತವಾಗಿ ವರ್ತಿಸದ ಕುರಿತು ಮಹಿಳಾ ಪ್ರಯಾಣಿಕರೊಬ್ಬರು ಸಾಮಾಜಿಕ ಜಾಲತಾಣ ಟ್ವಿಟರ್‌ನಲ್ಲಿ ಬರೆದುಕೊಂಡಿದ್ದು, ಅದನ್ನು ಗಮನಿಸಿದ ನಗರ ಪೊಲೀಸ್ ಆಯುಕ್ತ ಭಾಸ್ಕರ್‌ರಾವ್ ಅವರು ಘಟನೆ ಬಗ್ಗೆ ವಿಷಾದವ್ಯಕ್ತಪಡಿಸಿ ಕೂಡಲೇ ಚಾಲಕನನ್ನು ಬಂಧಿಸಲು ಸಂಬಂಧಪಟ್ಟ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಲಾಗುವುದು ಎಂದು ಪ್ರತಿಕ್ರಿಯಿಸಿದ್ದಾರೆ.
ಶನಿವಾರ ರಾತ್ರಿ ಖಾಸಗಿ ಕಂಪನಿ ಉದ್ಯೋಗಿ ಸಂತ್ರಸ್ತೆ ಎಚ್‌ಎಎಲ್‌ನಿಂದ ರಿಚ್‌ಮಂಡ್ ಸರ್ಕಲ್‌ಗೆ ಊಬರ್ ಕ್ಯಾಬ್‌ನಲ್ಲಿ ಹೋಗುತ್ತಿದ್ದರು. ಮಾರ್ಗಮಧ್ಯೆ ಏಕಾಏಕಿ ಕಾರು ಚಾಲಕ ಸಂತ್ರಸ್ತೆ ಕಡೆ ತಿರುಗಿ ವಿದ್ಯಾವಂತ ಹೆಣ್ಣು ಮಕ್ಕಳು ಸಂಜೆ 7 ಗಂಟೆಯೊಳಗೆ ಕೆಲಸ ಮುಗಿಸಿ ಮನೆಗೆ ಹೋಗಬೇಕು. 9 ಗಂಟೆ ನಂತರವೂ ಸ್ನೇಹಿತರ ಜತೆ ಕುಡಿಯುತ್ತಾ ಕೂರಬಾರದು ಎಂದು ಹೇಳಿದ್ದಾನೆ. ಅದಕ್ಕೆ ಉತ್ತರಿಸಿದ ಸಂತ್ರಸ್ತೆ, ನಾನು ಕುಡಿದಿಲ್ಲ. ಅಷ್ಟಕ್ಕೂ ಆ ವಿಷಯವೆಲ್ಲಾ ನಿಮಗ್ಯಾಕೆ. ನಿಮ್ಮ ಕೆಲಸ ನೀವು ನೋಡಿಕೋಳಿ ಎಂದಿದ್ದಾರೆ. ಅದಕ್ಕೆ ಕುಪಿತಗೊಂಡ ಆರೋಪಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ.
ಅದರಿಂದ ವಿಚಲಿತಗೊಂಡ ಸಂತ್ರಸ್ತೆ, ಊಬರ್ ಆ್ಯಪ್‌ನಲ್ಲಿರುವ “ಸುರಕ್ಷತೆ’ ಬಟನ್ ಒತ್ತಿದ್ದಾರೆ. ತಕ್ಷಣ ಚಾಲಕನಿಗೆ ಕಂಪನಿಯಿಂದ ಕರೆ ಬಂದಿದ್ದು, ಉತ್ತರಿಸಿದ ಚಾಲಕ ಯುವತಿ ವಿಪರೀತ ಕುಡಿದಿದ್ದಾರೆ’ ಎಂದಿದ್ದಾನೆ. ಹೆದರಿದ ಮಹಿಳೆ ಕುಡಿದಿಲ್ಲ ಎಂದು ಜೋರಾಗಿ ಕೂಗಿದ್ದಾಳೆ. ಬಳಿಕ ಊಬರ್‌ನ ಕಂಟ್ರೋಲ್ ರೂಮಿನಿಂದ ಸಂತ್ರಸ್ಥೆ ಜತೆ ಮಾತನಾಡಿದ ಮಹಿಳೆ, “ನೀವು ತಕ್ಷಣ ಆ ಕ್ಯಾಬ್‌ನಿಂದ ಕೆಳಗೆ ಇಳಿಯಿರಿ. ನಿಮಗೆ ಬೇರೊಂದು ಕ್ಯಾಬ್‌ನ ವ್ಯವಸ್ಥೆ ಮಾಡಿಕೊಡಲಾಗುವುದು’ ಎಂದು ಪ್ರತಿಕ್ರಿಯಿಸಿದರು ಎಂದು ಸಂತ್ರಸ್ತೆ ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ.
ಸಂತ್ರಸ್ತೆಯನ್ನು ಕಾರಿನಿಂದ ಕೆಳಗಿಳಿಸಿದ ಬಳಿಕ ಆರೋಪಿ ಪರಾರಿಯಾಗಿದ್ದಾನೆ. ಜನರೇ ಓಡಾಡದ ರಸ್ತೆಯಲ್ಲಿ ರಾತ್ರಿ 11.15ಕ್ಕೆ ಇಳಿಸಿದ್ದಾರೆ. 15ನಿಮಿಷವಾದರೂ ಬೇರೆ ಕ್ಯಾಬ್ ಬರಲಿಲ್ಲ.ಬಳಿಕ ಸ್ನೇಹಿತರ ಸಹಾಯದಿಂದ ಮನೆ ಸೇರಿದೆ. ಊಬರ್‌ನವರು ನನ್ನ ಹಣವನ್ನು ನನಗೆ ವಾಪಸ್ ನೀಡಿದರು. ಆದರೆ ನನಗೆ ಹಣ ಬೇಕಿರಲಿಲ್ಲ’ ಎಂದು ಸಂತ್ರಸ್ತೆ ಬರೆದುಕೊಂಡಿದ್ದಾರೆ.
ಆದರೆ, ಸಂತ್ರಸ್ತೆ ಅದನ್ನು ಬೆಂಗಳೂರು ಪೊಲೀಸ್ ಕಮಿಷನರ್‌ಗಾಗಲಿ ಅಥವಾ ಇತರೆ ಯಾವುದೇ ಪೊಲೀಸ್ ಅಧಿಕಾರಿಗಳ ಖಾತೆಗಾಗಲಿ ಟ್ಯಾಗ್ ಮಾಡಿರಲಿಲ್ಲ. ಸಂತ್ರಸ್ತೆಯ ಟ್ವಿಟ್‌ಗೆ ಬರುತ್ತಿದ್ದ ಪ್ರತಿಕ್ರಿಯೆಗಳನ್ನು ಗಮನಿಸಿದ ನಗರ ಪೊಲೀಸ್ ಆಯುಕ್ತರು, ಕೂಡಲೇ ಸಂತ್ರಸ್ತೆಗೆ ಪ್ರತಿಕ್ರಿಯಿಸಿ, ಘಟನೆ ಬಗ್ಗೆ ವಿಷಾದವ್ಯಕ್ತಪಡಿಸುತ್ತೇನೆ. ಹಾಗೆಯೇ ಕೇಂದ್ರ ಅಪರಾಧ ವಿಭಾಗ(ಸಿಸಿಬಿ)ದ ಹೆಚ್ಚುವರಿ ಪೊಲೀಸ್ ಆಯುಕ್ತರು ಮತ್ತು ಡಿಸಿಪಿ ಅವರಿಗೆ ಈ ಬಗ್ಗೆ ಕ್ರಮಕೈಗೊಳ್ಳಲು ಸೂಚನೆ ನೀಡುತ್ತೇನೆ ಎಂದು ಉತ್ತರಿಸಿದ್ದಾರೆ.