ಚೆನ್ನೈ: ಒಂದು ವೇಳೆ, ಮೊದಲ ಹೆರಿಗೆಯಲ್ಲಿ ಅವಳಿ ಮಕ್ಕಳು ಜನಿಸಿ, ಎರಡನೇ ಹೆರಿಗೆಯಲ್ಲಿ ಮಗು ಪಡೆದರೆ ಹೆರಿಗೆ ರಜೆ ಮತ್ತು ಇತರ ಸವಲತ್ತುಗಳು ಸಿಗಲಾರವು ಎಂದು ಮದ್ರಾಸ್ ಹೈಕೋರ್ಟ್ ತೀರ್ಪು ನೀಡಿದೆ. ಇದರ ಜತೆಗೆ ಎರಡನೇ ಹೆರಿಗೆಯಲ್ಲಿ ಜನಿಸಿದ ಮಗುವನ್ನು ಮೂರನೇಯದ್ದು ಎಂದು ಪರಿಗಣಿಸಬೇಕು ಎಂದು ಅದು ಪ್ರತಿಪಾದಿಸಿದೆ.
ಕೇಂದ್ರೀಯ ಕೈಗಾರಿಕೆ ಭದ್ರತಾ ಪಡೆ (ಸಿಐಎಸ್‌ಎಫ್) ಉದ್ಯೋಗಿಯಾಗಿರುವ ತಮಿಳುನಾಡಿನ ಮಹಿಳೆಯೊಬ್ಬರು ಮೊದಲ ಹೆರಿಗೆಯಲ್ಲಿ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದರು. ಎರಡನೇ ಹೆರಿಗೆಗೆ ತಾಯ್ತನ ಸೌಲಭ್ಯ ನೀಡಲು 2019ರ ಜೂ.18ರಂದು ಮದ್ರಾಸ್ ಹೈಕೋರ್ಟ್‌ನ ಏಕ ಸದಸ್ಯ ಪೀಠ ಅನುಮತಿ ನೀಡಿತ್ತು. ಇದನ್ನು ಪ್ರಶ್ನಿಸಿ ಕೇಂದ್ರ ಗೃಹ ಸಚಿವಾಲಯ ಮೇಲ್ಮನವಿ ಸಲ್ಲಿಸಿತ್ತು.
ಈ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾ.ಎ.ಪಿ.ಸಹಿ ಹಾಗೂ ನ್ಯಾ. ಸುಬ್ರಹ್ಮಣಿಯಮ್ ಪ್ರಸಾದ್, ಏಕಸದಸ್ಯ ಪೀಠದ ತೀರ್ಪನ್ನು ಅನೂರ್ಜಿತಗೊಳಿಸಿದೆ.
ಎರಡು ಮಗು ಪಡೆಯುವ ಮಹಿಳೆಗೆ ಮಾತ್ರ ತಾಯ್ತನ ಸೌಲಭ್ಯ ಸಿಗಲಿದೆ. ಮೊದಲ ಹೆರಿಗೆಯಲ್ಲಿ ಅವಳಿ ಮಕ್ಕಳು ಜನಿಸಿ, ಎರಡನೇ ಹೆರಿಗೆಯಲ್ಲಿ ಜನಿಸುವ ಮಗು ತಾಂತ್ರಿಕವಾಗಿ ಮೂರನೇ ಮಗು ಆಗಿರುತ್ತದೆ. ಕಾನೂನಿನ್ವಯ ಇದನ್ನು ಎರಡು ಮಗು ಎಂದು ಪರಿಗಣಿಸಲು ಸಾಧ್ಯವಿಲ್ಲ. ಅವಳಿ ಮಕ್ಕಳು ಕ್ರಮಬದ್ಧವಾಗಿ ಒಂದು ಮಗು ಜನಿಸಿದ ಬಳಿಕ ಎರಡನೇ ಮಗು ಜನಿಸಲಿದೆ. ಈ ಮಧ್ಯೆ ಸಮಯ ಇರುತ್ತದೆ. ಹೀಗಾಗಿ ಈ ಅವಳಿ ಜನನವನ್ನು ಎರಡು ಮಗು ಎಂದು ನಿರ್ಧರಿಸಲಾಗುವುದು. ಹೀಗಾಗಿ ಎರಡಕ್ಕಿಂತ ಹೆಚ್ಚು ಮಗು ಪಡೆದರೆ ತಾಯ್ತನ ಸೌಕರ್ಯ ನೀಡಲಾಗದು ಎಂದು ಪೀಠ ತಿಳಿಸಿದೆ.
ಪ್ರಸ್ತುತ ಕಾನೂನಿನ್ವಯ, 180 ದಿನಗಳ ಕಾಲ ಪ್ರಸೂತಿ ರಜೆ ಪಡೆಯಲು ಅವಕಾಶ ಇದೆ. ಈ ಹಿಂದೆ 12 ವಾರ ಮಾತ್ರ ತಾಯ್ತನ ರಜೆ ದೊರೆಯುತ್ತಿತ್ತು. 2017ರಲ್ಲಿ ಕಾಯ್ದೆಗೆ ತಿದ್ದುಪಡಿ ತಂದ ಬಳಿಕ 12 ವಾರ ರಜೆಯನ್ನು 26 ವಾರಕ್ಕೆ ಏರಿಸಲಾಗಿದೆ.