ಕೋಯಿಕ್ಕೋಡ್ : ಸಿಪಿಎಂ ನಾಯಕನೋರ್ವ ಗರ್ಭಿಣಿಯೊಬ್ಬಳ ಹೊಟ್ಟೆಗೆ ಒದ್ದ ಪರಿಣಾಮವಾಗಿ ಆಕೆ ಬಲವಂತದ ಗರ್ಭಪಾತಕ್ಕೆ ಗುರಿಯಾದ ಪ್ರಕರಣ ವರದಿಯಾಗಿದೆ. ಪೊಲೀಸರು ಈ ಘಟನೆಯ ಬಗ್ಗೆ ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಸಿಪಿಎಂ ನಾಯಕನಿಂದ ಹೊಟ್ಟೆಗೆ ಒದೆತ ತಿಂದ 30ರ ಹರೆಯದ ಮಹಿಳೆಯು ನಾಲ್ಕು ತಿಂಗಳ ಗರ್ಭಿಣಿಯಾಗಿದ್ದಳು ಎನ್ನಲಾಗಿದೆ.
ಘಟನೆಯ ವಿವರ ಹೀಗಿದೆ : ಮಹಿಳೆಯ ಪತಿ ಮತ್ತು ಪಕ್ಕದ ಮನೆಯ ಪುರುಷನೋರ್ವನ ನಡುವೆ ಮಾತಿನ ಜಟಾಪಟಿ ನಡೆದಿತ್ತು. ಆಗ ಇನ್ನಿಬ್ಬರು ಪುರುಷರು ಅಲ್ಲಿಗೆ ಬಂದ ಮಹಿಳೆಯ ಪತಿಯ ಮೇಲೆ ಹಲ್ಲೆ ನಡೆಸತೊಡಗಿದರು. ತಡೆಯಲು ಬಂದ ಮಹಿಳೆಯನ್ನು ಹಲ್ಲೆಕೋರ ಪುರುಷರಲ್ಲಿ ಒಬ್ಬನಾದ ಸ್ಥಳೀಯ ಸಿಪಿಎಂ ನಾಯಕರು ಮಹಿಳೆಯ ಹೊಟ್ಟೆಗೆ ಒದ್ದ. ಪರಿಣಾಮವಾಗಿ ಆಕೆಗೆ ಒಡನೆಯೇ ರಕ್ತಸ್ರಾವ ಆರಂಭವಾಯಿತು. ಆಕೆಯನ್ನು ಕೂಡಲೇ ಆಸ್ಪತ್ರೆಗೆ ಒಯ್ಯಲಾಯಿತು; ಅಲ್ಲಿ ಆಕೆಯ ಗಂಭೀರ ಪರಿಸ್ಥಿತಿಯನ್ನು ಅನುಲಕ್ಷಿಸಿ ಆಕೆಗೆ ಅನಿವಾರ್ಯವಾಗಿ ಗರ್ಭಪಾತ ಮಾಡಲಾಯಿತು.
ಪೊಲೀಸರು ಈ ಪ್ರಕರಣಕ್ಕೆ ಸಂಬಂಧಿಸಿ ಒಬ್ಬ ಆರೋಪಿಯನ್ನು ಬಂಧಿಸಿದ್ದಾರೆ. ಆದರೆ ಮಹಿಳೆಯ ಹೊಟೆಗೆ ಒದ್ದ ಮುಖ್ಯ ಆರೋಪಿ ತಲೆತಪ್ಪಿಸಿಕೊಂಡಿದ್ದಾನೆ. ಹೊಟ್ಟೆಗೆ ಒದ್ದು ಬಲವಂತದ ಗರ್ಭಪಾತಕ್ಕೆ ಕಾರಣನಾದ ಸ್ಥಳೀಯ ಸಿಪಿಎಂ ನಾಯಕನ ಗುರುತು ಬಹಿರಂಗ ಮಾಡದಂತೆ ತಮ್ಮ ಮೇಲೆ ಒತ್ತಡ ಹೇರಲಾಗುತ್ತಿದೆ ಎಂದು ಸಂತ್ರಸ್ತ ಮಹಿಳೆಯ ಕುಟುಂಬದವರು ಹೇಳಿದ್ದಾರೆ. ಮಾತ್ರವಲ್ಲ, ಕೇಸನ್ನು ಕೂಡ ಹಿಂಪಡೆಯುವಂತೆ ಅವರು ಒತ್ತಾಯಿಸುತ್ತಿದ್ದಾರೆ.
ಆದರೆ ಸಂತ್ರಸ್ತ ಮಹಿಳೆಯ ಮನೆಯವರು ಧೈರ್ಯದಿಂದ ತಮ್ಮ ನಿಲುವಿಗೆ ದೃಢವಾಗಿ ಬದ್ಧರಾಗಿ ನಿಂತಿದ್ದಾರೆ. ಅವರು ಪೊಲೀಸ್ ಠಾಣೆಯ ಮುಂದೆ ಪ್ರತಿಭಟನೆ ನಡೆಸಿ ಕೇಸಿನ ತನಿಖೆಯನ್ನು ಚುರುಕುಗೊಳಿಸುವಂತೆ ಆಗ್ರಹಿಸುತ್ತಿದ್ದಾರೆ ಎಂದು ವರದಿಯಾಗಿದೆ.
ಈ ನಡುವೆ ಸಿಪಿಎಂ ಕಾರ್ಯಕರ್ತರು ಈ ರೀತಿಯ ಯಾವುದೇ ಘಟನೆ ನಡೆದೇ ಇಲ್ಲ ಎಂದು ಹೇಳುತ್ತಿದ್ದಾರೆ !