Advertisement

ಸಹೋದರನ ಕೊಲೆಗೆ ಮಹಿಳೆ ಸುಪಾರಿ

12:31 PM Jun 28, 2019 | Team Udayavani |

ಬೆಂಗಳೂರು: ಮಗಳ ಮದುವೆ ವಿಚಾರದಲ್ಲಿ ಮಧ್ಯಪ್ರವೇಶಿಸಿದ ಸಹೋದರನನ್ನೇ ಸುಪಾರಿ ಕೊಟ್ಟು ಬರ್ಬರವಾಗಿ ಕೊಲೆ ಮಾಡಿಸಿದ ಸಹೋದರಿ ಸೇರಿ ಐವರು ಕೆಂಗೇರಿ ಪೊಲೀಸರ ಬಲೆಗೆ ಬಿದ್ದಿದ್ದಾರೆ.

Advertisement

ಕೆಂಗೇರಿಯ ಮಾರುತಿನಗರ ನಿವಾಸಿ ಗೌರಮ್ಮ (45) ರಾಯಚೂರು ಮೂಲದ ಮಹಿಳೆ ಮಮ್ತಾಜ್‌ (28), ಮುನ್ನಾ (22), ಪಶ್ಚಿಮ ಬಂಗಾಳ ಮೂಲದ ಅರ್ಜು (19) ಮತ್ತು ಸಾಕೀಬ್‌ (19) ಬಂಧಿತರು.

ಆರೋಪಿ ಗೌರಮ್ಮ ತನ್ನ ದ್ವಿತೀಯ ಪುತ್ರಿಯ ಮದುವೆ ವಿಚಾರದಲ್ಲಿ ಮಧ್ಯಪ್ರವೇಶಿಸಿದ ಸಹೋದರ ರಾಜಶೇಖರ್‌(55)ರನ್ನು ಕೊಲೆಗೈಯಲು ಮೂರು ಲಕ್ಷ ರೂ.ಗೆ ಮಮ್ತಾಜ್‌ಗೆ ಸುಪಾರಿ ಕೊಟ್ಟಿದ್ದರು. ಈ ಸಂಬಂಧ ಆರೋಪಿಗಳು ಜೂನ್‌ 22ರಂದು ಕೆಂಗೇರಿಯ ವಿಶ್ವೇಶ್ವರಯ್ಯ ಲೇಔಟ್‌ನ ಪಾಳು ಮನೆಯೊಂದಕ್ಕೆ ಕರೆಸಿಕೊಂಡು ಚಾಕುವಿನಿಂದ ಕತ್ತು ಕೊಯ್ದು ಹತ್ಯೆಗೈದಿದ್ದರು ಎಂದು ಪೊಲೀಸರು ಹೇಳಿದರು.

ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ರಾಜಶೇಖರ್‌ ಹಲವು ವರ್ಷಗಳಿಂದ ಪೇಟಿಂಗ್‌ ಕೆಲಸ ಮಾಡುತ್ತಿದ್ದು, ಕುಟುಂಬದಿಂದ ದೂರವಾಗಿ ಪ್ರತ್ಯೇಕವಾಗಿ ಮಾರುತಿನಗರದಲ್ಲಿ ವಾಸವಾಗಿದ್ದರು. ರಾಜಶೇಖರ್‌ಗೆ ಇಬ್ಬರು ಸಹೋದರಿಯರಿದ್ದಾರೆ. ಆ ಪೈಕಿ ಗೌರಮ್ಮ ಮಾರುತಿನಗರದಲ್ಲೇ ವಾಸವಾಗಿದ್ದಾರೆ.

ಕೆಲ ತಿಂಗಳ ಹಿಂದೆ ಗೌರಮ್ಮ ತಮ್ಮ ದ್ವಿತೀಯ ಪುತ್ರಿಗೆ ಪರಿಚಯಸ್ಥ ಯುವಕನ ಜತೆ ಮದುವೆ ನಿಶ್ಚಯ ಮಾಡಿದ್ದು, ನಿಶ್ಚಿತಾರ್ಥ ಕೂಡ ಮಾಡಿದ್ದರು. ಅನಂತರ ಭಾವಿ ಅಳಿಯನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದ ಗೌರಮ್ಮ, ಪುತ್ರಿಯ ಮದುವೆ ನಿಲ್ಲಿಸಲು ಸಿದ್ದತೆ ನಡೆಸಿದ್ದರು. ಆದರೆ, ಇದಕ್ಕೆ ಒಪ್ಪದ ಪುತ್ರಿ ಆತನೊಂದಿಗೇ ಮದುವೆ ಆಗುವುದಾಗಿ ಪಟ್ಟು ಹಿಡಿದಿದ್ದರು. ಅಲ್ಲದೆ, ಈ ವಿಚಾರವನ್ನು ಮಾವ ರಾಜಶೇಖರ್‌ಗೆ ತಿಳಿಸಿ, ಹಿರಿಯರೆಲ್ಲ ಒಪ್ಪಿ ನಿಶ್ಚಿಯಿಸಿದ ಮದುವೆ ಇದು. ಇದೀಗ ಏಕಾಏಕಿ ಮದುವೆ ಬೇಡ ಎಂದರೆ ಹೇಗೆ? ತಾನೂ ಆ ಯುವಕನನ್ನು ಬಹಳ ಪ್ರೀತಿಸುತ್ತಿದ್ದೇನೆ. ಆತನನ್ನು ಬಿಟ್ಟು ಬೇರೆ ಯಾರನ್ನು ಮದುವೆ ಮಾಡಿಕೊಳ್ಳುವುದಿಲ್ಲ ಎಂದಿದ್ದರು.

Advertisement

ಹೀಗಾಗಿ ರಾಜಶೇಖರ್‌, ಆಕೆಯನ್ನು ತನ್ನ ಇನ್ನೊಬ್ಬ ಸಹೋದರಿ ಮನೆಯಲ್ಲಿಟ್ಟು ನಿಶ್ಚಿತಾರ್ಥವಾಗಿದ್ದ ಯುವಕನ ಜತೆ ಮದುವೆ ಮಾಡಲು ಸಿದ್ದತೆ ನಡೆಸಿದ್ದರು. ಈ ವಿಚಾರ ತಿಳಿದ ಗೌರಮ್ಮ ಸಹೋದರ ರಾಜಶೇಖರ್‌ ಜತೆ ವಾಗ್ವಾದ ನಡೆಸಿದ್ದು, ಕೊನೆಗೆ ಕೊಲ್ಲುವುದಾಗಿಯೂ ಬೆದರಿಕೆ ಹಾಕಿದ್ದರು ಎಂದು ಪೊಲೀಸರು ಹೇಳಿದರು.

ಮೂರು ಲಕ್ಷಕ್ಕೆ ಸುಪಾರಿ: ಎಷ್ಟೇ ಪ್ರಯತ್ನಿಸಿದರೂ ಮದುವೆ ನಿಲ್ಲಿಸಲು ಸಾಧ್ಯವಾಗದ ಗೌರಮ್ಮ, ಕೊನೆಗೆ ಸಹೋದರನನ್ನು ಕೊಲ್ಲಲು ನಿರ್ಧರಿಸಿದ್ದರು. ತನ್ನ ಮನೆ ಮುಂಭಾಗದಲ್ಲಿ ವಾಸವಾಗಿದ್ದ ಗಾರೆ ಕೆಲಸ ಮಾಡುವ ಮಮ್ತಾಜ್‌ಗೆ ರಾಜಶೇಖರ್‌ ಕೊಲ್ಲುವಂತೆ ಮೂರು ಲಕ್ಷ ರೂ.ಗೆ ಸುಪಾರಿ ಕೊಟ್ಟಿದ್ದರು. ಈ ಹಿನ್ನೆಲೆಯಲ್ಲಿ ಸಂಚು ರೂಪಿಸಿದ ಮಮ್ತಾಜ್‌, ತನ್ನೊಂದಿಗೆ ಕೆಲಸ ಮಾಡುವ ಮುನ್ನಾ, ಅರ್ಜು ಮತ್ತು ಸಾಕೀಬ್‌ಗ ತಲಾ ಇಂತಿಷ್ಟು ಹಣ ಕೊಡುವುದಾಗಿ ಹೇಳಿ ಕೃತ್ಯಕ್ಕೆ ಸಹಕಾರ ನೀಡುವಂತೆ ಕೇಳಿಕೊಂಡಿದ್ದಳು ಎಂದು ಪೊಲೀಸರು ಹೇಳಿದರು.

ಪೇಟಿಂಗ್‌ ಕೆಲಸಕ್ಕೆಂದು ಕರೆಸಿ ಕೊಲೆ: ರಾಜಶೇಖರ್‌ ಪೇಟಿಂಗ್‌ ಕೆಲಸ ಮಾಡುತ್ತಿದ್ದನ್ನು ಅರಿತಿದ್ದ ಮಮ್ತಾಜ್‌, ಕೆಂಗೇರಿಯ ವಿಶ್ವೇಶ್ವರಯ್ಯ ಲೇಔಟ್ ಬಳಿ ತನ್ನ ಹಳೇ ಮನೆಯಿದ್ದು, ಪೇಟಿಂಗ್‌ ಮಾಡಬೇಕಿದೆ ಎಂದು ರಾಜಶೇಖರ್‌ನನ್ನು ಜೂನ್‌ 22ರಂದು ತನ್ನೊಂದಿಗೆ ಕರೆದೊಯ್ದಿದ್ದಳು. ರಾಜಶೇಖರ್‌ ಮನೆಯೊಳಗೆ ಹೋಗುತ್ತಿದ್ದಂತೆ ಅವರ ಕೈ, ಕಾಲು ಹಿಡಿದುಕೊಂಡು ಆರೋಪಿಗಳು ಚಾಕುವಿನಿಂದ ಕೊತ್ತು ಕೊಯ್ದು ಕೊಲೆಗೈದು ಪರಾರಿಯಾಗಿದ್ದರು.

ಹೊಸ ಸಿಮ್‌, ಮನೆ ಖಾಲಿಗೆ ಸಿದ್ದತೆ: ಕೃತ್ಯ ಎಸಗುತ್ತಿದ್ದಂತೆ ಮಮ್ತಾಜ್‌ ತನ್ನ ಮೊಬೈಲ್ ಮತ್ತು ಸಿಮ್‌ಕಾರ್ಡ್‌ನ್ನು ಬಿಸಾಡಿ ಹೊಸ ಸಿಮ್‌ ಖರೀದಿ ಮಾಡಿದ್ದಳು. ತನ್ನ ಮನೆಯನ್ನು ಖಾಲಿ ಮಾಡಿ ಬೇರೆಡೆ ಹೋಗಲು ಸಿದ್ದತೆ ನಡೆಸಿದ್ದಳು. ಅಲ್ಲದೆ, ತನ್ನ ಸಹಚರರಿಗೆ ಕೆಲ ದಿನಗಳ ಕಾಲ ತಲೆಮರೆಸಿಕೊಳ್ಳುವಂತೆ ಒಂದಿಷ್ಟು ಹಣ ಕೊಟ್ಟು ಕಳುಹಿಸಿದ್ದಳು.

ಈ ಮಧ್ಯೆ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದ ಕೆಂಗೇರಿ ಪೊಲೀಸ್‌ ಠಾಣಾಧಿಕಾರಿ ರಾಮಪ್ಪ ಬಿ. ಗುತ್ತೇರ್‌, ರಾಜಶೇಖರ್‌ ಮೊಬೈಲ್ನ ಸಿಡಿಆರ್‌ ಪರಿಶೀಲಿಸಿದಾಗ, ಮಮ್ತಾಜ್‌ ಮೊಬೈಲ್ ನಂಬರ್‌ ಪತ್ತೆಯಾಗಿತ್ತು. ಜತೆಗೆ ಗೌರಮ್ಮರನ್ನು ವಿಚಾರಣೆಗೊಳಪಡಿಸಿದಾಗ, ಆಕೆ ಕೂಡ ಗೊಂದಲದ ಹೇಳಿಕೆ ನೀಡಿದ್ದರು. ಈ ಸಂಬಂಧ ರಾಜಶೇಖರ್‌ ಮತ್ತು ಮಮ್ತಾಜ್‌ನ ಸಿಡಿಆರ್‌ ಪರಿಶೀಲಿಸಿದಾಗ ಇಡೀ ಪ್ರಕರಣ ಬಯಲಿಗೆ ಬಂದಿದ್ದು, ಗೌರಮ್ಮ ಸೇರಿ ಎಲ್ಲರನ್ನು ಬಂಧಿಸಲಾಯಿತು ಎಂದು ಪೊಲೀಸರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next