ವಾಷಿಂಗ್ಟನ್ : ಜೇನುಸಾಕಣೆ ಮಾಡುತ್ತಿದ್ದ ವ್ಯಕ್ತಿಯೊಬ್ಬರು ತಮ್ಮ ಮಕ್ಕಳಿಗೆ ಬರೆದ ಪತ್ರವೊಂದು ಅವರು ಸತ್ತ ಒಂಬತ್ತು ವರ್ಷಗಳ ಬಳಿಕ ದೊರೆತಿದ್ದು, ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಈ ಪತ್ರ ವೈರಲ್ ಆಗಿದೆ.
ಆಮಿ ಕ್ಲೂಕಿ ಎಂಬಾಕೆ ತನ್ನ ತಂದೆ ರಿಕ್ ಸುಮಾರು ಒಂಬತ್ತು ವರ್ಷಗಳ ಹಿಂದೆ ಮಕ್ಕಳಿಗೆ ಬರೆದ ಪತ್ರವೊಂದನ್ನು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದು ಇದೀಗ ಭಾರಿ ಸುದ್ದಿ ಮಾಡುತ್ತಿದೆ.
ರಿಕ್ ಅವರು ಶ್ವಾಸಕೋಶದ ಕ್ಯಾನ್ಸರ್‌ನಿಂದಾಗಿ 9 ವರ್ಷಗಳ ಹಿಂದೆ ನಿಧನರಾಗಿದ್ದರು. ಆದರೆ, ಸಾವನ್ನಪ್ಪುವ ಮುನ್ನ ಜೇನು ಸಾಕಾಣಿಕೆಯ ಸಲಕರಣೆಯೊಂದರಲ್ಲಿ ಮಕ್ಕಳಿಗೆ ಪತ್ರವೊಂದನ್ನು ಬರೆದಿಟ್ಟಿದ್ದರು. ಒಂದಿಲ್ಲೊಂದು ದಿನ ತಮ್ಮ ಮಕ್ಕಳಿಗೆ ಈ ಪತ್ರ ಲಭ್ಯವಾಗುತ್ತದೆ ಎಂಬ ಆಶಾಭಾವನೆ ಹೊಂದಿದ್ದರು. ಕಡೆಗೂ ಈ ಪತ್ರ 16 ವರ್ಷದ ತನ್ನ ತಮ್ಮ ಜೇನು ಸಾಕಾಣಿಕೆ ಕೃಷಿಯಲ್ಲಿ ತೊಡಗಿಕೊಂಡಾಗ ಲಭ್ಯವಾಗಿದೆ ಎಂದು ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
ಟಿಪ್ಪಣಿಯು ಹೀಗೆ ಹೇಳಿದೆ: “ಜೇನುಸಾಕಣೆಯ ಬಗ್ಗೆ ಕುತೂಹಲ ಹೊಂದಿರುವ ನನ್ನ ಮಕ್ಕಳಲ್ಲಿ ಒಬ್ಬರು ಈ ಪತ್ರವನ್ನು ಕಂಡುಕೊಂಡಿದ್ದಾರೆ ಎಂದು ನಾನು ಭಾವಿಸುತ್ತೇನೆ. ಜೇನುಸಾಕಣೆಯು ವಾಸ್ತವವಾಗಿ ತುಂಬಾ ಸುಲಭ ಮತ್ತು ನೀವು ಆನ್‌ಲೈನ್‌ನಲ್ಲಿ ಎಲ್ಲವನ್ನೂ ಕಲಿಯಬಹುದು. ಜೇನುನೊಣಗಳು ಕೇವಲ ಜೇನುತುಪ್ಪಕ್ಕಿಂತ ಹೆಚ್ಚಿನ ಉತ್ಪನ್ನಗಳನ್ನು ತಯಾರಿಸುತ್ತವೆ ಮತ್ತು ಹವ್ಯಾಸವಾಗಿ, ಇದು ಹೆಚ್ಚುವರಿ ಆದಾಯದ ಮೂಲವಾಗಿದೆ. ಆದ್ದರಿಂದ ಭಯಪಡಬೇಡಿ, ಧೈರ್ಯದಿಂದಿರಿ. ತಂದೆಯನ್ನು ಪ್ರೀತಿಸಿ.” ಎಂದು ಪತ್ರದಲ್ಲಿ ಬರೆದಿದ್ದಾರೆ.
ಇದನ್ನೂ ಓದಿ: ಸಿದ್ದರಾಮಯ್ಯ ಕಾರಿನ ಮೇಲೆ ಮೊಟ್ಟೆ ಎಸೆದ 9 ಮಂದಿ ಹಿಂದೂ ಕಾರ್ಯಕರ್ತರ ವಿರುದ್ದ ಎಫ್‌ಐಆರ್
ಈ ನೋಟ್ ಅನ್ನು ಮಿಸ್ ಕ್ಲೂಕಿ ತಮ್ಮ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ ಮತ್ತು “ನನ್ನ ತಂದೆ ಬರೆದ ಪತ್ರ ಅವರ ಸಾವಿನ ಒಂಬತ್ತು ವರ್ಷಗಳ ನಂತರ ಜೇನುನೊಣಗಳನ್ನು ಸಾಕುವ ಉಪಕರಣಗಳಲ್ಲಿ ಕಂಡುಬಂದಿದೆ. ಆದರೆ ಇವತ್ತು ನಮ್ಮೊಂದಿಗೆ ಅವರಿಲ್ಲ” ಎಂದು ಶೀರ್ಷಿಕೆಯಲ್ಲಿ ಮಗಳು ಬರೆದಿದ್ದಳು. ನಂತರ, ಅದೇ ಟ್ವೀಟ್ ನಲ್ಲಿ ಅವಳು ತನ್ನ ತಂದೆಯೊಂದಿಗೆ ಮೋಟಾರು ಬೈಕ್ ನಲ್ಲಿ ಕುಳಿತಿರುವ ಫೋಟೋವೊಂದನ್ನು ಸಹ ಹಂಚಿಕೊಂಡಿದ್ದಾಳೆ. “ಈ ಪೋಸ್ಟ್ ಇಷ್ಟೊಂದು ಗಮನ ಸೆಳೆಯುತ್ತದೆ ಎಂದು ನಾನು ನಿರೀಕ್ಷಿಸಿರಲಿಲ್ಲ, ಆದರೆ ನನ್ನ ತಂದೆ ಇದ್ದರೆ ಇದನ್ನು ಮೆಚ್ಚುತ್ತಿದ್ದರು ಎಂದು ನಾನು ಭಾವಿಸುತ್ತೇನೆ” ಎಂದು ಅವರು ಪೋಸ್ಟ್ ನಲ್ಲಿ ಬರೆದಿದ್ದಾರೆ.