ರೋಹ್ಟಕ್(ಹರಿಯಾಣ): ಪೋಸ್ಟ್‌ಗ್ರಾಜುಯೇಟ್ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್‌ನ ವೈದ್ಯರೊಬ್ಬರು ಅಪಹರಿಸಿ ತನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ದಂತ ವಿದ್ಯಾರ್ಥಿನಿಯೊಬ್ಬರು ಆರೋಪಿಸಿದ್ದು, ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕೋಲ್ಕತಾ ವೈದ್ಯೆಯ ಅ*ತ್ಯಾಚಾರ ಮತ್ತು ಹ*ತ್ಯೆ ವಿರುದ್ಧ ದೇಶಾದ್ಯಂತ ಆಕ್ರೋಶ ವ್ಯಕ್ತವಾಗುತ್ತಿರುವಾಗಲೇ ಈ ಘಟನೆ ನಡೆದಿದೆ.
ಕಾಲೇಜ್ ಕ್ಯಾಂಪಸ್‌ನಲ್ಲಿ ಬಿಡಿಎಸ್ ವಿದ್ಯಾರ್ಥಿಯೊಬ್ಬಳ ಮೇಲೆ ಹಲ್ಲೆ ನಡೆಸಿದ ಘಟನೆಯನ್ನು ಶನಿವಾರ ರಾತ್ರಿ ಪಿಜಿಐಎಂಎಸ್ ಅಧಿಕಾರಿಗಳು ತಮ್ಮ ಗಮನಕ್ಕೆ ತಂದರು. ಮಾಹಿತಿಯ ಮೇರೆಗೆ ಹಿರಿಯ ಪೊಲೀಸ್ ಅಧಿಕಾರಿಗಳು ವೈದ್ಯಕೀಯ ಕಾಲೇಜಿಗೆ ತೆರಳಿ ಸಂತ್ರಸ್ತೆ ಮತ್ತು ಅವರ ಕುಟುಂಬವನ್ನು ಸಂಪರ್ಕಿಸಿದ್ದಾರೆ ಎಂದು ರೋಹ್ಟಕ್ ಪೊಲೀಸರು ತಿಳಿಸಿದ್ದಾರೆ.
ವಿದ್ಯಾರ್ಥಿನಿ ತನ್ನ ದೂರಿನಲ್ಲಿ,’ಆಗಸ್ಟ್ 16 ರಂದು ಆರೋಪಿ ನನ್ನನ್ನು ಪಿಜಿಐಎಂಎಸ್‌ನಿಂದ ಅಪಹರಿಸಿ ಅಂಬಾಲಾ ಮತ್ತು ಚಂಡೀಗಢಕ್ಕೆ ಕರೆದೊಯ್ದು ಚಿತ್ರಹಿಂಸೆ ನೀಡಿ ಥಳಿಸಿದ್ದಾರೆ’ ಎಂದು ಆರೋಪಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಎಫ್‌ಐಆರ್ ದಾಖಲಿಸಿಕೊಂಡಿದ್ದು, ಆರೋಪಿಯನ್ನು ತತ್ ಕ್ಷಣ ಬಂಧಿಸಲಾಗಿದೆ. ಸಂತ್ರಸ್ತೆಯನ್ನು ವೈದ್ಯಕೀಯ ಪರೀಕ್ಷೆಗೊಳಪಡಿಸಲಾಗಿದ್ದು, ಆಕೆಯ ಹೇಳಿಕೆಯನ್ನು ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಮುಂದೆ ದಾಖಲಿಸಲಾಗಿದೆ. ತನಿಖೆಯ ಸಮಯದಲ್ಲಿ ಲೈಂಗಿಕ ಕಿರುಕುಳದ ಯಾವುದೇ ಪುರಾವೆಗಳು ಇನ್ನೂ ಮುಂಚೂಣಿಗೆ ಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿ ವೈದ್ಯ ಕಾಲೇಜಿನಲ್ಲಿ Anatomy ಕಲಿಸುತ್ತಿದ್ದ. ಸಂತ್ರಸ್ತೆ ಸಾಮಾಜಿಕ ಮಾಧ್ಯಮದಲ್ಲಿ ಅಪ್‌ಲೋಡ್ ಮಾಡಿದ ವಿಡಿಯೋದಲ್ಲಿ, ಗಾಯದ ಗುರುತುಗಳನ್ನು ತೋರಿಸಿದೆ.ತಾನು ಬಿಡಿಎಸ್ ಪ್ರಥಮ ವರ್ಷದ ವಿದ್ಯಾರ್ಥಿನಿ ಎಂದು ಹೇಳಿಕೊಂಡಿದ್ದು, ಆರೋಪಿ ತನಗೆ ಏಳು ತಿಂಗಳ ಕಾಲ ಚಿತ್ರಹಿಂಸೆ ನೀಡಿರುವುದಾಗಿ ಆರೋಪಿಸಿದ್ದಾಳೆ.