ನವದೆಹಲಿ: ಇದು ಆಧುನಿಕ ಕಾಲ, ಸ್ಮಾರ್ಟ್ ಫೋನ್, ಸ್ಮಾರ್ಟ್ ವಾಚ್ ಗಳ ಯುಗ. ಸ್ಟೈಲಿಸ್ಟ್ ಲುಕ್ ಗಳುಳ್ಳ, ಹಲವಾರು ಫೀಚರ್ಸ್ ನ ಸ್ಮಾರ್ಟ್ ವಾಚ್ ಗಳನ್ನು ಕೈಗೆ ಧರಿಸಿಕೊಳ್ಳುವುದು ಯುವ ಪೀಳಿಗೆಯ ಫ್ಯಾಶನ್.
ಸಾಮಾನ್ಯವಾಗಿ ವಾಚ್ ಗಳನ್ನು ಸಮಯ ನೋಡುವುದಕ್ಕೆ ಬಳಸುತ್ತೇವೆ. ಆದರೆ ಈಗಿನ ಸ್ಮಾರ್ಟ್ ವಾಚ್ ಗಳು ಸಮಯ ಮಾತ್ರವಲ್ಲ, ನಮ್ಮ ಆರೋಗ್ಯವನ್ನು ಗಮನದಲ್ಲಿರಿಸುತ್ತದೆ. ನಾವು ಎಷ್ಟು ನಡೆದಿದ್ದೇವೆ. ಸೈಕ್ಲಿಂಗ್, ಕಾಲ್, ಮೆಸೇಜ್ ಗಳ ಬಗ್ಗೆ ಆಲರ್ಟ್ ಮಾಡುತ್ತದೆ. ಆದರೆ ಇಲ್ಲೊಬ್ಬ ಮಹಿಳೆಗೆ ಸ್ಮಾರ್ಟ್ ವಾಚ್ ನಿಂದ ದೊಡ್ಡ ಉಪಯೋಗವೇ ಆಗಿದೆ.
34 ವರ್ಷದ ಮಹಿಳೆಯೊಬ್ಬರು ರೆಡ್ಡಿಟ್ ನಲ್ಲಿ ಸ್ಮಾರ್ಟ್ ವಾಚ್ ವೊಂದು ತನಗೆ ಹೇಗೆಲ್ಲಾ ಸಹಾಯವಾಯಿತು ಎನ್ನುವುದನ್ನು ಹೇಳಿಕೊಂಡಿದ್ದಾರೆ. ಮಹಿಳೆ, “ ಆ್ಯಪಲ್ ವಾಚ್ ಕಳೆದ ಕೆಲ ದಿನಗಳಿಂದ ಎದೆಬಡಿತ 57 ಇದ್ದದ್ದು, 72 ಕ್ಕೆ ಹೆಚ್ಚಾಗಿದೆ ಎಂದು ಪದೇ ಪದೇ ಆಲರ್ಟ್ ಮಾಡುತ್ತಿತ್ತು. 15 ದಿನಗಳಿಂದ ಎದೆಬಡಿತ ಹೆಚ್ಚಾಗಿರುವುದು ವಾಚ್ ಸೂಚನೆ ನೀಡುತ್ತಲೇ ಇತ್ತು. ಸರಿಯಾಗಿ ಆಹಾರ ತೆಗೆದುಕೊಳ್ಳುತ್ತೇನೆ. ಜಿಮ್ ಗೆ ಹೋಗುತ್ತೇನೆ. 18 ತಿಂಗಳ ಮಗುವಿಗೆ ಹಾಲುಣಿಸುತ್ತಿದ್ದೇನೆ. ತಿಂಗಳ ಡೇಟ್ ಕೂಡ ಸರಿಯಾಗಿ ಆಗುತ್ತಿದೆ ಆದರೆ ಎದೆ ಬಡಿತ ಹೆಚ್ಚಾಗಲು ಕಾರಣವೇನು ಎಂದು ಮಾತ್ರ ಗೊತ್ತಾಗಿಲ್ಲ” ಎಂದಿದ್ದಾರೆ.
ಬಳಿಕ ನಾನು ಕೋವಿಡ್ ಪರೀಕ್ಷೆ ಮಾಡಿಸಿದೆ. ಜ್ವರದ ಪರೀಕ್ಷೆ ಮಾಡಿಸಿದೆ ಎಲ್ಲವೂ ನಾರ್ಮಲ್ ಆಗಿಯೇ ಇತ್ತು. ಆನ್ಲೈನ್ ನಲ್ಲಿ ಕೆಲವೊಂದು ಅರ್ಟಿಕಲ್ ಗಳನ್ನು ಓದಿದ ಮೇಲೆ ಇದು ಆರಂಭಿಕ ಗರ್ಭಾವಸ್ಥೆಯ ಸಮಯದಲ್ಲಿ ಆಗಬಹುದಾದ ಪ್ರಕ್ರಿಯೆ ಎನ್ನುವುದು ಗೊತ್ತಾಯಿತು. ಕೂಡಲೇ ವೈದ್ಯರ ಬಳಿ ಪರೀಕ್ಷಿಸಿದೆ ಅಲ್ಲಿ ಪಾಸಿಟಿವ್ ಬಂತು ಎಂದು ಬರೆದುಕೊಂಡಿದ್ದಾರೆ.
ವೈದ್ಯರ ಬಳಿ ಹೋಗಿ ಪರೀಕ್ಷಿಸಿದಾಗ ಮಹಿಳೆ 4 ವಾರಗಳ ಗರ್ಭಿಣಿ ಎಂದು ತಿಳಿದುಬಂದಿದೆ. ಮಹಿಳೆ ತನ್ನ ದಿನನಿತ್ಯದ ಜೀವನದಲ್ಲಿ ಇದನ್ನು ಕಂಡುಕೊಳ್ಳಲು ಆಗಿಲ್ಲ. ಆ್ಯಪಲ್ ವಾಚ್ ಇದನ್ನು ಪತ್ತೆ ಹಚ್ಚಿದ್ದರ ಬಗ್ಗೆ ಮಹಿಳೆ ತಮ್ಮ ಅನುಭವವನ್ನು ಹಂಚಿಕೊಂಡಿದ್ದೀಗ ವೈರಲ್ ಆಗಿದೆ. ಇಸಿಜಿ, ಹೃದಯ ಬಡಿತ, ಆಕ್ಸಿಮೀಟರ್, ಋತುಚಕ್ರದ ಟ್ರ್ಯಾಕಿಂಗ್ ನ್ನು ಆ್ಯಪಲ್ ವಾಚ್ ಮಾಡುತ್ತದೆ.