ಬೆಂಗಳೂರು: ನಗರದ ಶೇಷಾದ್ರಿಪುರ ಬಡಾವಣೆಯ ಅಪೋಲೊ ಆಸ್ಪತ್ರೆಯಲ್ಲಿ ಆಧುನಿಕ ಹಾಗೂ ಸುಸಜ್ಜಿತ ಮಹಿಳೆ ಮತ್ತು ಮಗುವಿನ ಆರೈಕೆ ವಿಭಾಗ ಆರಂಭದಿಂದ ಸುತ್ತಮುತ್ತಲ ಪ್ರದೇಶಗಳ ನಾಗರಿಕರಿಗೆ ಅನುಕೂಲವಾಗಲಿದೆ ಎಂದು ಬೆಂಗಳೂರು ನಗರ ಪೋಲಿಸ್ ಉಪ ಆಯುಕ್ತೆ ಡಾ.ಸೌಮ್ಯಲತಾ ಅಭಿಪ್ರಾಯಪಟ್ಟರು.
ಇತೀ¤ಚೆಗೆ ಅಪೋಲೊ ಆಸ್ಪತ್ರೆಯಲ್ಲಿ ವಿಶ್ವ ಮಟ್ಟದ ಪ್ರಸೂತಿ ಮತ್ತು ನವಜಾತ ಶಿಶು ಆರೈಕೆಯ ನೂತನ ಘಟಕ ಉದ್ಘಾಟಿಸಿ ಮಾತನಾಡಿದ ಅವರು, ಅತ್ಯುತ್ತಮ ಸುರಕ್ಷತೆಯೊಂದಿಗೆ ಆಧುನಿಕ ಶಸ್ತ್ರಚಿಕಿತ್ಸೆ ಉಪಕರಣಗಳು ಹಾಗೂ ತಜ್ಞ ವೈದ್ಯರ ತಂಡ ಇಲ್ಲಿದೆ. ಬಾಣಂತಿ ಮತ್ತು ಮಗುವಿಗೆ ಉತ್ತಮ ಚಿಕಿತ್ಸೆ ಒದಗಿಸಲಿದೆ ಎಂದು ಭರವಸೆ ವ್ಯಕ್ತಪಡಿಸಿದರು.
ನಂತರ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕಿ ಸಂಗೀತಾ ರೆಡ್ಡಿ ಮಾತನಾಡಿ, ಅಪೋಲೊ ಆಸ್ಪತ್ರೆ ತನ್ನ ವೈದ್ಯಕೀಯ ಸೌಲಭ್ಯಗಳಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟದ ಚಿಕಿತ್ಸಾ ವಿಧಾನಗಳನ್ನು ಪರಿಚಯಿಸುವಲ್ಲಿ ಮುಂಚೂಣಿಯಲ್ಲಿದೆ. ಈ ಬದ್ಧತೆ ದೃಷ್ಟಿಯಲ್ಲಿರಿಸಿಕೊಂಡು ಇಲ್ಲಿ ಮಹಿಳೆ ಮತ್ತು ಶಿಶು ಆರೈಕೆ ವಿಭಾಗವನ್ನು ಆರಂಭಿಸಿದ್ದೇವೆ.
ದೇಶದಲ್ಲಿ ಹೆರಿಗೆ ವೇಳೆ ಸಂಭವಿಸುವ ತಾಯಂದಿರ ಸಾವಿನ ಪ್ರಮಾಣ ಶೇ.22ಕ್ಕೆ ಇಳಿದಿದ್ದರೂ, ನವಜಾತ ಶಿಶು ಮತ್ತು ತಾಯಿಯ ಮರಣವನ್ನು ಸಂಪೂರ್ಣ ನಿಲ್ಲಿಸಲು ಬಹಳ ದೂರ ಸಾಗಬೇಕಿದೆ. ಈ ನಿಟ್ಟಿನಲ್ಲಿ ಮತ್ತಷ್ಟು ಸುಧಾರಣೆ ತರಲು ಕೇಂದ್ರ ಆರೋಗ್ಯ ಸಚಿವಾಲಯ ಕಾರ್ಯನಿರ್ವಹಿಸುತ್ತಿದೆ.
ನೂತನ ವಿಭಾಗ ಆರಂಭದಿಂದ ನಿರಂತರವಾಗಿ ದಿನದ 24 ಗಂಟೆ ಹೆರಿಗೆಗಾಗಿ ಬರುವ ತಾಯಿ ಹಾಗೂ ಮಗುವಿನ ಆರೋಗ್ಯ, ಸುರಕ್ಷತೆ ಬಗ್ಗೆ ಹೆಚ್ಚಿನ ಗಮನಹರಿಸಲು ಆನುಕೂಲವಾಗಲಿದೆ ಎಂದರು. ಈ ಸಂದರ್ಭದಲ್ಲಿ ಅಪೋಲೊ ಆಸ್ಪತ್ರೆಯ ಕರ್ನಾಟಕ ಸಿಇಒ ಡಾ.ಡೇವಿಸನ್, ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ಅನುಪಮ್ ಸಿಂಗ್ ಇತರರು ಉಪಸ್ಥಿತರಿದ್ದರು.