ಬೆಂಗಳೂರು: ಫೇಸ್‌ಬುಕ್‌ನಲ್ಲಿ ನಕಲಿ ಖಾತೆ ತೆರೆದು ಆ ಮೂಲಕ ಪರಿಚಯವಾದ ಮಹಿಳೆಯೊಬ್ಬರಿಗೆ ಮದುವೆಯಾಗುವುದಾಗಿ ನಂಬಿಸಿ ಲಕ್ಷಾಂತರ ರೂ. ಹಣ ಪಡೆದು ವಂಚಿಸಿದ ಆರೋಪಿ ಸೈಬರ್ ಕ್ರೈಂ ಪೊಲೀಸರ ಬಲೆಗೆ ಬಿದ್ದಿದ್ದಾನೆ.
ವರ್ತೂರು ನಿವಾಸಿ ಪ್ರಮೋದ್ ಮಂಜುನಾಥ್ ಹೆಗಡೆ ಅಲಿಯಾಸ್ ಆಕಾಶ್ ಭಟ್(28) ಬಂಧಿತ. ಫೇಸ್‌ಬುಕ್ ಮೂಲಕ ಆಕಾಶ್ ಭಟ್ ಎಂಬ ಹೆಸರಿನಲ್ಲಿ ವಂಚನೆ ಮಾಡಿರುವುದು ವಿಚಾರಣೆ ವೇಳೆ ಬೆಳಕಿಗೆ ಬಂದಿದ್ದು, 6.2 ಲಕ್ಷ ರೂ. ಮೌಲ್ಯದ ಒಂದು ಕಾರು, ಒಂದು ಲ್ಯಾಪ್‌ಟಾಪ್, ಒಂದು ಮೊಬೈಲ್ ಹಾಗೂ 40 ಗ್ರಾಂ ತೂಕದ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ. ಆರೋಪಿಯ ವಂಚನೆ ಸಂಬಂಧ ನಗರದ ಮಹಿಳೆಯೊಬ್ಬರು ದೂರು ನೀಡಿದ್ದರು. ಈ ದೂರನ್ನು ಆಧರಿಸಿ ಆರೋಪಿಯನ್ನು ಬಂಧಿಸಲಾಗಿದೆ.
ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಕಾಂಚಿಕೈ ಗ್ರಾಮದ ಪ್ರಮೋದ್ ಹೆಗಡೆ ಆರೇಳು ವರ್ಷಗಳ ಹಿಂದೆ ತನ್ನ ಸ್ವಂತ ಊರಿನಿಂದ ಗೋವಾಕ್ಕೆ ಹೋಗಿ, ಸಣ್ಣ-ಪುಟ್ಟ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದ. ಐದು ವರ್ಷಗಳ ಹಿಂದೆ ಆರೋಪಿ ಸಾಫ್ಟ್ವೇರ್ ಎಂಜಿನಿಯರೊಬ್ಬರನ್ನು ಮದುವೆಯಾಗಿ ವರ್ತೂರಿನಲ್ಲಿ ಕುಟುಂಬ ಸಮೇತ ವಾಸವಾಗಿದ್ದ. ಯಾವುದೇ ಕೆಲಸಕ್ಕೆ ಹೋಗದೆ ಮನೆಯಲ್ಲೇ ಇರುತ್ತಿದ್ದ ಆರೋಪಿ ಫೇಸ್‌ಬುಕ್‌ನಲ್ಲಿ ಹೆಚ್ಚು ಸಕ್ರಿಯವಾಗಿದ್ದ ಎಂದು ಸೈಬರ್ ಕ್ರೈಂ ಪೊಲೀಸರು ಹೇಳಿದರು.
ವಂಚನೆ ಹೇಗೆ?: ಫೇಸ್‌ಬುಕ್‌ನಲ್ಲಿ ಆಕಾಶ್ ಭಟ್ ಎಂಬ ಹೆಸರಿನ ನಕಲಿ ಖಾತೆ ತೆರೆದಿದ್ದ ಪ್ರಮೋದ್, ಕೆಲ ಮಹಿಳೆಯರಿಗೆ ಫ್ರೆಂಡ್ ರಿಕ್ವೆಸ್ಟ್ ಕಳುಹಿಸುತ್ತಿದ್ದ. ರಿಕ್ವೆಸ್ಟ್‌ಗೆ ಸಮ್ಮತಿ ಸೂಚಿಸುತ್ತಿದ್ದ ಮಹಿಳೆಯರ ಜತೆ ಮೆಸೆಂಜರ್‌ನಲ್ಲಿ ವೈಯಕ್ತಿಕವಾಗಿ ಸಂದೇಶ ಕಳುಹಿಸಿ, ಅವರ ಆತ್ಮೀಯನಾಗುತ್ತಿದ್ದ. ನಂತರ ಅವರ ಖಾಸಗಿ ವಿಚಾರಗಳನ್ನು ತಿಳಿದುಕೊಳ್ಳುತ್ತಿದ್ದ ಆರೋಪಿ, ತಾನೂ ವೈಟ್ಫೀಲ್ಡ್ನ ಖಾಸಗಿ ಕಂಪನಿಯಲ್ಲಿ ವ್ಯವಸ್ಥಾಪಕ ನಿರ್ದೇಶಕನಾಗಿರುವುದಾಗಿ ಹೇಳಿಕೊಳ್ಳುತ್ತಿದ್ದ. ಕೆಲ ದಿನಗಳ ಬಳಿಕ ವಿವಾಹ ಪ್ರಸ್ತಾವ ಮುಂದಿಟ್ಟು, ಭಾವನಾತ್ಮಕವಾಗಿ ತನ್ನತ್ತ ಸೆಳೆದುಕೊಳ್ಳುತ್ತಿದ್ದ. ಅನಂತರ ತನ್ನ ಸಮಸ್ಯೆಗಳನ್ನು ಹೇಳಿಕೊಂಡು, ಹಣದ ಸಹಾಯ ಕೋರುತ್ತಿದ್ದ. ಆತನ ಮಾತು ನಂಬುತ್ತಿದ್ದ ಮಹಿಳೆಯರು ಆರೋಪಿಯ ವಿವಿಧ ಖಾತೆಗಳಿಗೆ ಸಾವಿರಾರು ರೂ. ಹಣ ಜಮೆ ಮಾಡಿದ್ದಾರೆ.
ಈ ಮಧ್ಯೆ ಒಂದು ವರ್ಷಗಳ ಹಿಂದೆ ಪತಿಯಿಂದ ದೂರವಾಗಿರುವ ಮಹಿಳೆಯೊಬ್ಬರು ಆರೋಪಿಯ ಜತೆ ಸ್ನೇಹ ಬೆಳೆಸಿದ್ದರು. ನಂತರ ಆಕೆಗೆ ಮದುವೆ ಮಾಡಿಕೊಳ್ಳುವುದಾಗಿ ಹೇಳಿದ್ದ ಆರೋಪಿ, ಆಕೆಯಿಂದ ಇದುವರೆಗೂ 11,23,295 ರೂ. ಪಡೆದುಕೊಂಡಿದ್ದಾನೆ. ಆದರೆ, ಮದುವೆ ಮಾಡಿಕೊಳ್ಳದೆ ವಂಚಿಸಿದ್ದಾನೆ ಎಂದು ಪೊಲೀಸರು ಹೇಳಿದರು.
ಒಮ್ಮೆಯೂ ಭೇಟಿಯಾಗಿಲ್ಲ:
ಒಂದು ವರ್ಷಗಳಿಂದ ದೂರುದಾರ ಮಹಿಳೆಯ ಜತೆ ಸಂಪರ್ಕ ಹೊಂದಿದ್ದ ಪ್ರಮೋದ್, ಒಮ್ಮೆಯೂ ಆಕೆಯನ್ನು ಭೇಟಿಯಾಗಿಲ್ಲ. ಖುದ್ದು ಆಕೆಯ ಭೇಟಿ ಆಗುವಂತೆ ಮನವಿ ಮಾಡಿದರೂ, ನಾನಾ ಸಬೂಬುಗಳನ್ನು ಹೇಳುತ್ತಾ ನುಣುಚಿಕೊಳ್ಳುತ್ತಿದ್ದ. ಆತನ ವರ್ತನೆಯಿಂದ ಅನುಮಾನಗೊಂಡ ಮಹಿಳೆ ಫೆ.25ರಂದು ಸೈಬರ್ ಕ್ರೈಂ ಠಾಣೆಗೆ ದೂರು ನೀಡಿದ್ದರು. ಈ ಸಂಬಂಧ ತನಿಖೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ. ಆದರೆ, ಆರೋಪಿಯ ಕೃತ್ಯ ಆತನ ಪತ್ನಿಗೆ ತಿಳಿದಿಲ್ಲ ಎಂದು ಸೈಬರ್ ಕ್ರೈಂ ಪೊಲೀಸರು ಹೇಳಿದರು.
ಸೈಬರ್ ಕ್ರೈಂ ಠಾಣೆಗೆ ದೂರು ನೀಡಿ:
ಆರೋಪಿಯು ಇತರೆ ಮಹಿಳೆಯರಿಗೂ ವಂಚನೆ ಮಾಡಿರುವುದು ಬೆಳಕಿಗೆ ಬಂದಿದೆ. ಹೀಗಾಗಿ ನೊಂದ ಮಹಿಳೆಯರು ಸ್ಥಳೀಯ ಪೊಲೀಸ್ ಠಾಣೆ ಅಥವಾ ನಗರ ಪೊಲೀಸ್ ಆಯುಕ್ತರ ಕಚೇರಿ ಆವರಣದಲ್ಲಿರುವ ಸೈಬರ್ ಕ್ರೈಂ ಠಾಣೆಗೆ ದೂರು ನೀಡಬಹುದು. ಜತೆಗೆ ಸಾರ್ವಜನಿಕರು ಫೇಸ್‌ಬುಕ್ ಮೂಲಕ ಪರಿಚಯವಾದ ವ್ಯಕ್ತಿಯ ಪೂರ್ವಾಪರ ಪರಿಶೀಲಿಸದೆ ಖಾಸಗಿ ವಿಚಾರಗಳನ್ನು ಹಂಚಿಕೊಳ್ಳದಂತೆ ಸೈಬರ್ ಕ್ರೈಂ ಪೊಲೀಸರು ಮನವಿ ಮಾಡಿದ್ದಾರೆ.