ಮೆಲ್ಬೋರ್ನ್: ಮಾತನಾಡುವ ವೇಳೆಯಲ್ಲೇ ಮೊಬೈಲ್ ಸಿಡಿದು ಮುಖ ಸುಟ್ಟುಕೊಂಡ ವರನ್ನು ಕಂಡಿದ್ದೇವೆ. ಆದರೆ ಹೆಡ್‌ಫೋನ್ ಸಿಡಿದು ಗಾಯ ಮಾಡಿಕೊಂಡಿರುವ ಘಟನೆ ಗಳ ಬಗ್ಗೆ ಎಂದಾದರೂ ಕೇಳಿದ್ದೀರಾ? ಅದೂ ವಿಮಾನ ಪ್ರಯಾಣದ ವೇಳೆ ನಡೆದಿದೆ.
ಇಂಥದ್ದೊಂದು ಪ್ರಕರಣ ಆಸ್ಟ್ರೇಲಿಯಾದಲ್ಲಿ ನಡೆದಿದೆ. ಹೆಡ್‌ಫೋನ್ ಹಾಕಿಕೊಂಡು ಹಾಡುಗಳನ್ನು ಕೇಳಿಸಿಕೊಳ್ಳುತ್ತಿದ್ದ ಮಹಿಳೆಯ ಕಿವಿ, ಕೆನ್ನೆ ಸ್ಫೋಟದಿಂದಾಗಿ ಸುಟ್ಟು ತೀವ್ರವಾದ ಗಾಯಗಳಾಗಿವೆ. ಫೆ.19ರಂದು ಬೀಜಿಂಗ್‌ನಿಂದ ಮೆಲ್ಬೋರ್ನ್ಗೆ ತೆರಳುತ್ತಿದ್ದ ವಿಮಾನದಲ್ಲಿ ಘಟನೆ ಸಂಭವಿಸಿದೆ ಎಂದು ಆಸ್ಟ್ರೇಲಿಯ ಸಾರಿಗೆ ಸುರಕ್ಷತಾ ಕೇಂದ್ರ (ಎಟಿಎಸ್‌ಬಿ) ಮಾಹಿತಿ ನೀಡಿದೆ.
ವಿಮಾನ ಪ್ರಯಾಣದ ವೇಳೆ ಸಾಮಾನ್ಯ ವಾಗಿ ಬ್ಯಾಟರಿ ಚಾಲಿತ ಎಲ್ಲಾ ಇಲೆಕ್ಟ್ರಾನಿಕ್ ವಸ್ತುಗಳನ್ನು ಚಾಲನೆಯಲ್ಲಿ ಇಡದಂತೆ ಸುರಕ್ಷತಾ ಕ್ರಮ ಅನುಸರಿಸಲು ಹೇಳುವಾಗ ಎಚ್ಚರಿಸಿರಲಾಗುತ್ತದೆ. ಆದರೂ ಈಕೆ ಬ್ಯಾಟರಿ ಚಾಲಿತ ಹೆಡ್‌ಫೋನ್ ಹಾಕಿಕೊಂಡು ಹಾಡು ಗಳನ್ನು ಕೇಳಿಸಿಕೊಳ್ಳುತ್ತಲೇ ನಿದ್ದೆಗೆ ಜಾರಿದ್ದರು.
ಎರಡು ಗಂಟೆ ಪ್ರಯಾಣದ ಬಳಿಕ ಇದ್ದಕ್ಕಿದ್ದಂತೆ ಹೆಡ್‌ಫೋನ್ ಸಿಡಿದಿದೆ. ಪರಿಣಾಮ ಮಹಿಳೆಯ ಮುಖ ಸುಟ್ಟಿದೆ. ತಕ್ಷಣ ಮಹಿಳೆ ಹೆಡ್‌ಫೋನನ್ನು ಕೆಳಕ್ಕೆ ಬಿಸಾಡಿದ್ದಾರೆ. ಕೆಲಕ್ಷಣ ಪ್ರಯಾಣಿಕರೂ ಗಾಬರಿಯಿಂದ ಕಂಗಾಲಾದ ಸ್ಥಿತಿ ನಿರ್ಮಾಣವಾಗಿತ್ತು.
ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಮಹಿಳೆ, “ಕೆಲ ಕ್ಷಣ ಏನಾಯಿತೆಂದು ಗೊತ್ತಾಗಲಿಲ್ಲ. ಆದರೆ ಹೆಡ್‌ಫೋನ್ ಬಿಸಿಯಾಗಿ ಮುಖ ಮತ್ತು ಕತ್ತಿನ ಭಾಗದಲ್ಲಿ ಸುಟ್ಟಿರುವುದು ಅನುಭವಕ್ಕೆ ಬಂತು. ತಕ್ಷಣ ಹೆಡ್‌ಫೋನ್ ಕಿತ್ತೆಸೆದೆ. ಹೆಡ್‌ಫೋನ್‌ನಲ್ಲಿ ಸಣ್ಣ ಪ್ರಮಾಣದ ಬೆಂಕಿಯೂ ಕಾಣಿಸಿಕೊಳ್ಳುತ್ತಿತ್ತು. ತಕ್ಷಣ ಒಂದು ಬಕೆಟ್‌ನಷ್ಟು ನೀರು ತಂದು ಅದರ ಮೇಲೆ ಸುರಿಯಲಾಯಿತು’ ಎಂದು ಎಟಿಎಸ್‌ಬಿ ವಿಚಾರಣೆ ವೇಳೆ ತಿಳಿಸಿದ್ದಾರೆ.