Advertisement

Rare case; ಅವಳಿ ಮಕ್ಕಳಿಗೆ ಜನ್ಮ ನೀಡಿದ ರಕ್ತ ಕ್ಯಾನ್ಸರ್ ನಿಂದ ಬಳಲುತ್ತಿದ್ದ ಮಹಿಳೆ

06:09 PM Sep 09, 2024 | Team Udayavani |

ಇಂದೋರ್: ವೈದ್ಯಕೀಯ ಲೋಕವೇ ಚಕಿತವಾಗುವಂತೆ , ಅಧ್ಯಯನಕ್ಕೂ ಪೂರಕವೆಂಬಂತೆ ರಕ್ತದ ಕ್ಯಾನ್ಸರ್ ನಿಂದ ಬಳಲುತ್ತಿದ್ದ 22 ವರ್ಷದ ಮಹಿಳೆ ಮಧ್ಯಪ್ರದೇಶದ ಇಂದೋರ್‌ನ ಸರಕಾರಿ ಆಸ್ಪತ್ರೆಯಲ್ಲಿ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ. ಇದೊಂದು ಅಪರೂಪದ ಪ್ರಕರಣ ಎಂದು ವೈದ್ಯರು ಬಣ್ಣಿಸಿದ್ದಾರೆ.

Advertisement

ಸೋಮವಾರ (ಸೆ9) ಪಿಟಿಐ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಸರಕಾರಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಕ್ಲಿನಿಕಲ್ ಹೆಮಟಾಲಜಿ ವಿಭಾಗದ ಸಹಾಯಕ ಪ್ರಾಧ್ಯಾಪಕ ಅಕ್ಷಯ್ ಲಹೋಟಿ,” ಮಹಿಳೆಯು ದೀರ್ಘಕಾಲದ   ರಕ್ತ ಕ್ಯಾನ್ಸರ್‌ನ ಮರಣಾಂತಿಕ ರೂಪವಾದ ಮೈಲೋಯ್ಡ್ ಲ್ಯುಕೇಮಿಯಾ ಹೊಂದಿದ್ದರು. ಅಂತಹ ಪರಿಸ್ಥಿತಿಯಲ್ಲಿ ಆಕೆಗೆ ಸುರಕ್ಷಿತ ಹೆರಿಗೆಯನ್ನು ನಡೆಸುವುದು ದೊಡ್ಡ ಸವಾಲಾಗಿತ್ತು. ಗರ್ಭಿಣಿಯನ್ನು ನಮ್ಮ ಆಸ್ಪತ್ರೆಗೆ ದಾಖಲಿಸಿದಾಗ, ಆಕೆಯ ದೇಹದಲ್ಲಿ ಬಿಳಿ ರಕ್ತ ಕಣಗಳ (WBC) ಎಣಿಕೆ ಸಾಮಾನ್ಯಕ್ಕಿಂತ ಹಲವು ಪಟ್ಟು ಹೆಚ್ಚಾಗಿತ್ತು. ಆದ್ದರಿಂದ, ಗರ್ಭಾವಸ್ಥೆಯಲ್ಲಿ ನಾವು ಆಕೆಗೆ ಸಾಮಾನ್ಯ ಕ್ಯಾನ್ಸರ್ ಔಷಧಿಗಳು ಮತ್ತು ಕೀಮೋಥೆರಪಿಯನ್ನು ಶಿಫಾರಸು ಮಾಡಲೂ ಸಾಧ್ಯವಾಗಲಿಲ್ಲ”ಎಂದರು.

ದೇಶದ ಮತ್ತು ವಿದೇಶಗಳ ತಜ್ಞ ವೈದ್ಯರೊಂದಿಗೆ ಸಮಾಲೋಚಿಸಿದ ನಂತರ, ಮಹಿಳೆಯ ಆರೋಗ್ಯ ಮತ್ತು ಆಕೆಯ ಗರ್ಭದಲ್ಲಿರುವ ಅವಳಿ ಶಿಶುಗಳಿಗೆ ಪರಿಣಾಮ ಬೀರಬಾರದು ಎಂದು ಖಚಿತಪಡಿಸಿಕೊಳ್ಳಲು ವಿಶೇಷ ಔಷಧಿಗಳನ್ನು ನೀಡಲಾಗಿದೆ ಎಂದು ಲಹೋಟಿ ಹೇಳಿದರು.

ಸ್ತ್ರೀರೋಗತಜ್ಞೆ ಸುಮಿತ್ರಾ ಯಾದವ್ ಮಾತನಾಡಿ “ಮಹಿಳೆಗೆ ರಕ್ತದ ಕ್ಯಾನ್ಸರ್ ಇದೆ ಎಂದು ನಾವು ಹೇಳಿರಲಿಲ್ಲ. ಗರ್ಭಾವಸ್ಥೆಯಲ್ಲಿ ಆಕೆಯ ಮಾನಸಿಕ ಆರೋಗ್ಯ ಸಂಪೂರ್ಣವಾಗಿ ಉತ್ತಮವಾಗಿರಬೇಕು ಎಂದು ನಾವು ಬಯಸಿದ್ದೆವು. ಮಹಿಳೆ ಸಾಮಾನ್ಯ ಹೆರಿಗೆ ಮೂಲಕ ಗಂಡು ಮತ್ತು ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ತಾಯಿ ಮತ್ತು ಅವಳಿ ಮಕ್ಕಳು ಆರೋಗ್ಯವಾಗಿದ್ದಾರೆ. ಆಕೆಗೆ ಇದು ಮೊದಲ ಹೆರಿಗೆ ಮತ್ತು ಅವಳಿ ಮಕ್ಕಳ ಜನನ ಅವರ ಕುಟುಂಬಕ್ಕೆ ಸಂತೋಷವನ್ನು ತಂದಿದೆ’ ಎಂದು ಹೇಳಿದರು.

”ದೀರ್ಘಕಾಲದ ಮೈಲೋಯ್ಡ್ ಲ್ಯುಕೇಮಿಯಾ ಹೊಂದಿರುವ ಮಹಿಳೆಯರಿಗೆ ಸುರಕ್ಷಿತ ಹೆರಿಗೆಯ ಪ್ರಕರಣಗಳು ಜಗತ್ತಿನಲ್ಲೇ ಕಂಡುಬಂದಿಲ್ಲ ಎಂದು ಆಸ್ಪತ್ರೆಯ ವೈದ್ಯರ ಹೇಳಿದ್ದು, ಇದು ಅಧ್ಯಯನಕ್ಕೆ ಯೋಗ್ಯವಾದ ವೈಜ್ಞಾನಿಕ ವಿಸ್ಮಯದಂತೆ ಕಂಡುಬಂದಿದೆ ಎಂದು ಅನೇಕರು ಅಭಿಪ್ರಾಯ ಪಟ್ಟಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next