ರಾಮನಗರ: ದಲಿತರ ಮೇಲಿನ ಜಾತಿನಿಂದನೆ, ಜೀವಬೆದರಿಕೆ ಪ್ರಕರಣದಲ್ಲಿ ಜೈಲು ಸೇರಿರುವ ರಾಜರಾಜೇಶ್ವರಿ ನಗರದ ವಿಧಾನಸಭಾ ಕ್ಷೇತ್ರದ ಶಾಸಕ ಮುನಿರತ್ನ (Munirathna) ಜಾಮೀನು ಪಡೆಯುವ ಪ್ರಯತ್ನದಲ್ಲಿರುವಾಗಲೇ ಅವರಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಕಗ್ಗಲಿಪುರ ಪೊಲೀಸ್ ಠಾಣೆಯಲ್ಲಿ ಮಹಿಳೆಯೊಬ್ಬರು ಶಾಸಕ ಮುನಿರತ್ನ ತನ್ನ ಮೇಲೆ ಅತ್ಯಾಚಾರವೆಸಗಿ, ಹನಿ ಟ್ರ್ಯಾಪ್ ಮಾಡಲು ಬಳಸಿಕೊಂಡಿದ್ದಾನೆ ಎಂದು ದೂರು ನೀಡಿದ್ದು, ಪೊಲೀಸರು ಎಫ್ಐಆರ್ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
ಬುಧವಾರ ತಡರಾತ್ರಿ ಸಂತ್ರಸ್ತ ಮಹಿಳೆ ಕಗ್ಗಲಿಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಕಗ್ಗಲಿಪುರ ಪೊಲೀಸ್ ಠಾಣೆ ವ್ಯಾಪ್ತಿಯ ಗುಹಾಂತರ ರೆಸಾರ್ಟ್ ನಲ್ಲಿ ಅತ್ಯಾಚಾರ, ಲೈಂಗಿಕ ದೌರ್ಜನ್ಯ, ಹನಿಟ್ರ್ಯಾಪ್ ನಡೆಸಿರುವುದು ಸೇರಿದಂತೆ ವಿವಿಧ ಕೃತ್ಯಗಳನ್ನು ಎಸಗಿರುವುದಾಗಿ ಶಾಸಕ ಮುನಿರತ್ನ ಸೇರಿದಂತೆ ಏಳು ಮಂದಿಯ ವಿರುದ್ಧ ಮಹಿಳೆ ಆರೋಪ ಮಾಡಿದ್ದಾರೆ.
ಮಹಿಳೆ ದೂರನ್ನು ಆದರಿಸಿ ಕಗ್ಗಲಿಪುರ ಪೊಲೀಸರು ಮುನಿರತ್ನ, ಆತನ ಗನ್ಮ್ಯಾನ್ ವಿಜಯಕುಮಾರ್, ಸುಧಾಕರ, ಕಿರಣ್ ಕುಮಾರ್, ಲೋಹಿತ್ ಗೌಡ, ಮಂಜುನಾಥ ಹಾಗೂ ಲೋಕಿ ಎಂಬುವರ ವಿರುದ್ಧ ಎಫ್ಐಆರ್ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
3 ವರ್ಷದ ಪ್ರಕರಣ
ಸಂತ್ರಸ್ತ ಮಹಿಳೆ ನೀಡಿರುವ ದೂರಿನಲ್ಲಿ ತನ್ನ ವಿರುದ್ಧ 1.3.2020 ರಿಂದ 31.5.2022 ರವರೆಗೆ ಲೈಂಗಿಕ ದೌರ್ಜನ್ಯ, ಅತ್ಯಾಚಾರ ಹಾಗೂ ಹನಿಟ್ರ್ಯಾಪ್ ಪ್ರಕರಣ ನಡೆದಿರುವುದಾಗಿ ಉಲ್ಲೇಖಿಸಿರುವ ಅವರು, ಲಾಕ್ಡೌನ್ ಸಮಯದಲ್ಲಿ ಸಮಾಜ ಸೇವಾ ಕಾರ್ಯದಲ್ಲಿ ತೊಡಗಿಕೊಂಡಿದ್ದ ನನ್ನ ದೂರವಾಣಿ ಸಂಖ್ಯೆಯನ್ನು ಪಡೆದು ಪರಿಚಯಿಸಿಕೊಂಡ ಮುನಿರತ್ನ, ವಾಟ್ಸ್ಆಪ್ ವಿಡಿಯೋಕಾಲ್ ಮೂಲಕ ನನ್ನ ಜೊತೆ ಮಾತನಾಡುತ್ತಿದ್ದರು. ನಾನು ಸ್ನಾನ ಮಾಡುತ್ತಿರುವಾಗ ವಿಡಿಯೋಕಾಲ್ ಸ್ವೀಕರಿಸುವಂತೆ ಒತ್ತಾಯ ಮಾಡಿ, ಆ ವಿಡಿಯೋವನ್ನು ರೆಕಾರ್ಡ್ ಮಾಡಿಕೊಂಡು, ನನ್ನನ್ನು ಬ್ಲಾಕ್ಮೇಲ್ ಮಾಡುತ್ತಿದ್ದರು. ಗೋಡಾನ್ ವೊಂದಕ್ಕೆ ಕರೆಸಿಕೊಂಡು ಬಲವಂತವಾಗಿ ನಮ್ಮ ಮೇಲೆ ಅತ್ಯಾಚಾರ ಎಸಗಿರುವ ಶಾಸಕ ಮುನಿರತ್ನ, ಈ ವಿಡಿಯೋ ನನ್ನ ಬಳಿ ರೆಕಾರ್ಡ್ ಆಗಿದೆ. ಇದನ್ನು ನಿನ್ನ ಕುಟುಂಬದವರಿಗೆ ಕೊಡುತ್ತೇನೆ ಎಂದು ಬೆದರಿಸಿ, ನನ್ನನ್ನು ಹನಿಟ್ರ್ಯಾಪ್ ಪ್ರಕರಣಕ್ಕೆ ಬಳಸಿಕೊಂಡಿದ್ದರು. ಇದಕ್ಕೆ ಅವರ ಸಹಚರರು ಸಾಥ್ ನೀಡಿದ್ದರು ಎಂದು ದೂರಿನಲ್ಲಿ ಆರೋಪಿಸಿದ್ದಾರೆ.
ಪೊಲೀಸರಿಗೆ ಹೇಳಿಕೆ ನೀಡದಂತೆ ಬ್ಲಾಕ್ಮೇಲ್
ಈ ಘಟನೆಯ ಬಗ್ಗೆ ಹಿಂದೆಯೇ ರಾಮನಗರ ಡಿವೈಎಸ್ಪಿ ಕಚೇರಿಗೆ ದೂರು ನೀಡಿದ್ದೇನಾದರೂ ಈ ಮಾಹಿತಿ ಸಿಕ್ಕಿ ಅಂದು ಸಚಿವರಾಗಿದ್ದ ಮುನಿರತ್ನ ನನಗೆ ಬ್ಲಾಕ್ ಮೇಲೆ ಮಾಡಿದ ಪರಿಣಾಮ ನಾನು ಪೊಲೀಸರಿಗೆ ಬಂದು ಹೇಳಿಕೆ ಕೊಡಲು ಸಾಧ್ಯವಾಗಲಿಲ್ಲ. ನನ್ನ ಮೇಲೆ ಗೋಡಾನ್ ಮತ್ತು ಕಾರಿನಲ್ಲಿ ಆಗಾಗ್ಗ ಅತ್ಯಾಚಾರ ಎಸಗಿದ್ದು, ಇದೀಗ ಮುನಿರತ್ನ ಜೈಲಿನಲ್ಲಿರುವ ಕಾರಣ ಅವರ ವಿರುದ್ಧ ಪ್ರಕರಣ ದಾಖಲಿಸುತ್ತಿರುವುದಾಗಿ ಸಂತ್ರಸ್ತ ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ.
ಎಚ್ಐವಿ ಸೋಂಕಿತ ಮಹಿಳೆ ಬಳಕೆ
ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಕಾರ್ಪೋರೇಟರ್ ಒಬ್ಬರ ಪತಿಗೆ ಎಚ್ಐವಿ ಸೋಂಕಿತ ಮಹಿಳೆಯ ಜೊತೆ ಲೈಂಗಿಕ ಸಂಪರ್ಕ ನಡೆಸಿ ಆದೃಶ್ಯವನ್ನು ಚಿತ್ರೀಕರಿಸಿ ಹನಿಟ್ರ್ಯಾಪ್ ಮಾಡಿದ್ದಾರೆ ಎಂದು ಸಂತ್ರಸ್ತ ಮಹಿಳೆ ದೂರಿನಲ್ಲಿ ಆರೋಪಿಸಿದ್ದು, ಕಾರ್ಪೋರೇಟರ್ ಮಗನಿಗೂ ಎಚ್ಐವಿ ಸೋಂಕಿತರೊಂದಿಗೆ ಲೈಂಗಿಕ ಸಂಪರ್ಕ ನಡೆಸುವಂತೆ ಇಲ್ಲಾ ಎಚ್ಐವಿ ಸೋಂಕಿತರ ರಕ್ತದ ಇಂಜೆಕ್ಷನ್ ನೀಡುವಂತೆ ನನ್ನನ್ನು ಬಲವಂತ ಮಾಡಿದ್ದರು. ಆದರೆ, ಇದಕ್ಕೆ ನಾನು ಒಪ್ಪಲಿಲ್ಲ ಎಂದು ದೂರಿನಲ್ಲಿ ಸಂತ್ರಸ್ತ ಮಹಳೆ ತಿಳಿಸಿದ್ದಾರೆ.
ಮಹಿಳೆಯೊಬ್ಬರಿಗೆ ಲೈಂಗಿಕ ಕಿರುಕಳ
ಮಹಿಳೆಯೊಬ್ಬರನ್ನು ತಮ್ಮ ಟ್ರ್ಯಾಪ್ ಗೆ ಸಿಕ್ಕಿಸಲು ಕಗ್ಗಲಿಪುರ ಠಾಣೆ ವ್ಯಾಪ್ತಿಯ ಗುಹಾಂತರ ರೆಸಾರ್ಟ್, ಚಿಕ್ಕಬಳ್ಳಾಪುರ ಸಮೀಪದ ಹಲಗುರಕಿ ರೆಸಾರ್ಟ್ಗೆ ಆರೋಪಿಗಳು ನಮ್ಮೊಂದಿಗೆ ತೆರಳಿ, ಅಲ್ಲಿ ಮಹಿಳೆಯೊಬ್ಬರಿಗೆ ಮದ್ಯ ಸೇವನೆ ಮಾಡಿಸಿ, ಆಕೆಯ ಸ್ವಿಮ್ಮಿಂಗ್ ದೃಶ್ಯಗಳನ್ನು ಚಿತ್ರೀಕರಣ ಮಾಡಿಕೊಂಡಿದ್ದು, ಬಳಿಕ ಆ ಮಹಿಳೆಯ ವಿರುದ್ಧ ಲೋಕಿ ಎಂಬ ವ್ಯಕ್ತಿಯಿಂದ ಬೆಂಗಳೂರಿನ ಪೊಲೀಸ್ ಠಾಣೆಯಲ್ಲಿ ಬ್ಲಾಕ್ಮೇಲ್ ಮಾಡುತ್ತಿದ್ದಾಳೆ ಎಂದು ದೂರು ಕೊಡಿಸಿ, ಬಳಿಕ ಆ ಮಹಿಳೆಯನ್ನು ಪೊಲೀಸರು ಬಂಧಿಸುವಂತೆ ಮಾಡಿ, ಪ್ರಕರಣವನ್ನು ಹಿಂದಕ್ಕೆ ತೆಗೆದುಕೊಂಡಿದ್ದಾರೆ ಎಂದು ಸಂತ್ರಸ್ತ ಮಹಿಳೆ ದೂರಿನಲ್ಲಿ ಆರೋಪಿಸಿದ್ದಾರೆ.
ರಾಜಕಾರಣಿಗಳು, ಅಧಿಕಾರಿಗಳನ್ನು ಹನಿಟ್ರ್ಯಾಪ್ ಮಾಡುತ್ತಿದ್ದರಾ ಮುನಿರತ್ನ..?
ಸಂತ್ರಸ್ತ ಮಹಿಳೆ ನೀಡಿರುವ ದೂರಿನಲ್ಲಿ ಮಾಜಿ ಸಚಿವ, ಶಾಸಕ ಮುನಿರತ್ನ ಮಹಾನಗರ ಪಾಲಿಕೆ ಸದಸ್ಯರು, ಪೊಲೀಸರು, ರಾಜಕೀಯ ಎದುರಾಳಿಗಳು, ಅಧಿಕಾರಿಗಳು ಸೇರಿದಂತೆ ಹಲವರನ್ನು ಹನಿಟ್ರ್ಯಾಪ್ ಮಾಡಲು ನನ್ನನ್ನು ಬಳಸಿಕೊಂಡಿದ್ದರು ಎಂಬ ಸಂಗತಿಯನ್ನು ತಿಳಿಸಿದ್ದು, ಈ ಕೃತ್ಯಕ್ಕೆ ಕೆಲ ಎಚ್ಐವಿ ಸೋಂಕು ಇರುವ ಮಹಿಳೆಯರನ್ನು ಸಹ ಬಳಸಿಕೊಂಡಿದ್ದಾರೆ. ಎಲ್ಲದರ ವಿಡಿಯೊಗಳನ್ನು ತನ್ನ ಬಳಿ ಇಟ್ಟುಕೊಂಡಿದ್ದಾನೆ ಎಂದು ಮಹಿಳೆ ದೂರಿನಲ್ಲಿ ಉಲ್ಲೇಖಿಸಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಈ ಹಿಂದೆ ಬಿಜೆಪಿ ಸರ್ಕಾರ ಆಡಳಿತದಲ್ಲಿದ್ದಾಗ ಬಿಜೆಪಿಯ ಕೆಲ ನಾಯಕರೇ ಸಿಡಿ ಬಗ್ಗೆ ಪ್ರಸ್ತಾಪಿಸಿದ್ದರು. ಹನಿಟ್ರ್ಯಾಪ್ ಸಿಡಿ ರಾಜಕೀಯ ವಲಯದಲ್ಲಿ ಸಾಕಷ್ಟು ಚರ್ಚೆಗೆ ಎಡೆಮಾಡಿಕೊಟ್ಟಿದ್ದನ್ನು ನಾವಿಲ್ಲಿ ಸ್ಮರಿಸಬಹುದಾಗಿದೆ.
ಮುನಿರತ್ನ ಜಾಮೀನು ಕಗ್ಗಂಟು..
ದಲಿತರ ಸಮುದಾಯವರನ್ನು ನಿಂದನೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿರುವ ಮಾಜಿ ಸಚಿವ ಮುನಿರತ್ನ ಸದ್ಯ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ಜಾಮೀನಿಗೆ ಅವರು ಅರ್ಜಿ ಸಲ್ಲಿಸಿದ್ದು, ಗುರುವಾರ ನ್ಯಾಯಾಲಯ ಜಾಮೀನಿಗೆ ಸಂಬಂಧಿಸಿದಂತೆ ತೀರ್ಪು ನೀಡಲಿದ್ದಾರೆ. ಈ ಮಧ್ಯೆ ಅತ್ಯಾಚಾರದಂತಹ ಗಂಭೀರಸ್ವರೂಪದ ಕ್ರಿಮಿನಲ್ ಅಪರಾಧದ ಆರೋಪ ಮುನಿರತ್ನ ವಿರುದ್ಧ ದಾಖಲಾಗಿರುವುದು ಅವರ ಜಾಮೀನು ಕಗ್ಗಂಟಾಗಲಿದೆ ಎಂದು ಹೇಳಲಾಗುತ್ತಿದೆ.