ಬೆಂಗಳೂರು: ಕ್ಯಾಬ್ ತಡವಾಗಿ ಬಂದಿದಕ್ಕೆ ಬುಕ್ಕಿಂಗ್ ಕ್ಯಾನ್ಸಲ್ ಮಾಡಿದ ಮಹಿಳೆಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿದಲ್ಲದೆ, ಅಶ್ಲೀಲ ಫೋಟೋ, ವಿಡಿಯೋಗಳನ್ನು ಕಳುಹಿಸಿದ ಕ್ಯಾಬ್ ಚಾಲಕನನ್ನು ಎಲೆಕ್ಟ್ರಾನಿಕ್ ಸಿಟಿ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಹೊಸೂರು ನಿವಾಸಿ ದಿನೇಶ್(30) ಕ್ಯಾಬ್ ಚಾಲಕ.
ಖಾಸಗಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ಪುತ್ರಿಯನ್ನು ಪೋಷಕರ ಸಭೆ ಬಳಿಕ ಮನೆಗೆ ಕರೆದೊಯ್ಯಲು ದೂರುದಾರ ಮಹಿಳೆ ಕ್ಯಾಬ್ ಬುಕ್ ಮಾಡಿದ್ದಾರೆ. ಆದರೆ, ಚಾಲಕ ಅರ್ಧಗಂಟೆಯಾದರೂ ಬಂದಿಲ್ಲ. ಮತ್ತೂಂದೆಡೆ ಮಗಳು ಅಳುತ್ತಿದ್ದರಿಂದ ಕ್ಯಾಬ್ ಬುಕ್ಕಿಂಗ್ ಕ್ಯಾನ್ಸಲ್ ಮಾಡಿ, ಆಟೋದಲ್ಲಿ ಮನೆಗೆ ಹೋಗಿದ್ದರು.ಆದರೆ, ಆ ಬಳಿಕ ಸ್ಥಳಕ್ಕೆ ಬಂದ ಕ್ಯಾಬ್ ಚಾಲಕ ಮಹಿಳೆಗೆ ಕರೆ ಮಾಡಿ, ಬುಕ್ಕಿಂಗ್ ಕ್ಯಾನ್ಸಲ್ ಮಾಡಿದ್ದರಿಂದ ನನಗೆ ತೊಂದರೆ ಆಗುತ್ತದೆ ಎಂದಿದ್ದ. ಅದಕ್ಕೆ ಮಹಿಳೆ, ನೀವು ತಡವಾಗಿ ಬಂದಿದ್ದರಿಂದ ಕ್ಯಾನ್ಸಲ್ ಮಾಡಿದ್ದೇನೆ. ತೊಂದರೆ ಆಗಿದ್ದರೆ ಕ್ಷಮಿಸಿ ಎಂದಿದ್ದಾರೆ. ಆದರೂ, ಚಾಲಕ ಪದೇ ಪದೆ ಕರೆ ಮಾಡಿ, ಅಶ್ಲೀಲ ಸಂದೇಶ ಕಳುಹಿಸಿ, ಮಾನಸಿಕ ಕಿರುಕುಳ ನೀಡಿದ್ದಾನೆ. ಹಣ ಕಳುಹಿಸುವಂತೆಯೂ ಒತ್ತಾಯಿಸಿದ್ದಾನೆ. ಹೀಗಾಗಿ ನೊಂದ ಮಹಿಳೆ ಪೊಲೀಸರಿಗೆ ದೂರು ನೀಡಿದ್ದರು.