ಅಯೋಧ್ಯೆ/ಹೊಸದಿಲ್ಲಿ: ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರದ ನಿರ್ಮಾಣದ ಕಾಮಗಾರಿ ಬಿರುಸಿನಿಂದ ಸಾಗಿದೆ.
ಜ.22ರಂದು ದೇಗುಲದಲ್ಲಿ ಪ್ರಾಣ ಪ್ರತಿಷ್ಠೆಗೆ ದಿನವೂ ನಿಗದಿಯಾಗಿದೆ. ಆ ಕ್ಷಣಕ್ಕೆ ದೇಶವಾಸಿಗಳೆಲ್ಲರೂ ಅಯೋಧ್ಯೆಗೆ ತೆರಳಲು ಸಾಧ್ಯವಿಲ್ಲದಿದ್ದರೂ ಅದನ್ನು ನಮ್ಮ ನಮ್ಮ ಮನೆಗಳಲ್ಲಿಯೇ ಕಂಡುಕೊಳ್ಳಲು ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಮನವಿ ಮಾಡಿದೆ.
ಆ ದಿನ ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 1 ಗಂಟೆಯ ವರೆಗೆ ದೇಶದ ಪ್ರತಿಯೊಂದು ಗ್ರಾಮ, ನಗರ, ಪಟ್ಟಣಗಳಲ್ಲಿ ಭಕ್ತಜನರೆಲ್ಲರೂ ಒಟ್ಟು ಸೇರಿ ಭಜನೆ, ಕೀರ್ತನೆಗಳನ್ನು ಹಾಡುವಂತೆ ಟ್ರಸ್ಟ್ ಅರಿಕೆ ಮಾಡಿದೆ.
ದೇವಸ್ಥಾನಗಳಲ್ಲಿ, ಮನೆಗಳಲ್ಲಿ ಹನುಮಾನ್ ಚಾಲೀಸಾ, ಸುಂದರಕಾಂಡ, ರಾಮರಕ್ಷಾ ಸ್ತೋತ್ರಗಳ ಸಾಮೂಹಿಕ ಪಠಣವನ್ನು ಮಾಡಲು ಟ್ರಸ್ಟ್‌ನ ಆಡಳಿತ ಮಂಡಳಿ ಕರೆ ಕೊಟ್ಟಿದೆ. ಜತೆಗೆ ವಿಶೇಷ ಪೂಜೆಯನ್ನೂ ನಡೆಸಿ, “ಶ್ರೀ ರಾಮ್ ಜೈ ರಾಮ್ ಜೈ ಜೈ ರಾಮ್” ಮಂತ್ರವನ್ನು 108 ಬಾರಿ ಪಠಿಸಲು ಸಲಹೆ ಮಾಡಿದೆ.
ಗ್ರಾಮ, ನಗರಗಳ ಪ್ರಮುಖ ಕೇಂದ್ರಗಳಲ್ಲಿ ಕಾರ್ಯಕ್ರಮದ ನೇರ ಪ್ರಸಾರವನ್ನು ವೀಕ್ಷಿಸುವ ನಿಟ್ಟಿನಲ್ಲಿ ದೊಡ್ಡ ಸ್ಕ್ರೀನ್‌ಗಳನ್ನು ಹಾಕಬೇಕು. ಪ್ರಾಣ-ಪ್ರತಿಷ್ಠೆಯ ದಿನದಂದು, ಸೂರ್ಯಾಸ್ತದ ಅನಂತರ ದೇಶವಾಸಿಗಳು ಮನೆಯ ಮುಂದೆ ದೀಪ ಹಚ್ಚುವಂತೆಯೂ ಮನವಿ ಮಾಡಿದೆ.