Advertisement

ಅಭ್ಯರ್ಥಿಗಳಿಲ್ಲದೆ ಕಾಂಗ್ರೆಸ್‌ ಅಧೋಗತಿಗೆ

11:23 AM Mar 15, 2019 | Team Udayavani |

ಶೃಂಗೇರಿ: ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರಿಗೆ ರಾಜಕೀಯ ಮರುಜನ್ಮ ನೀಡಿದ ಈ ಲೋಕಸಭಾ ಕ್ಷೇತ್ರ ಕಾಂಗ್ರೆಸ್‌ ಪಕ್ಷಕ್ಕೆ ಅಭ್ಯರ್ಥಿಗಳೇ ದೊರಕದಿರುವುದು ಪಕ್ಷ ಅಧೋಗತಿಗೆ ಇಳಿದಿರುವುದಕ್ಕೆ ಸಾಕ್ಷಿಯಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಹೇಳಿದರು.

Advertisement

ಗುರುವಾರ ಉಳವಳ್ಳಿಯ ರೈತ ಭವನದಲ್ಲಿ ಏರ್ಪಡಿಸಿದ್ದ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು. ಕಾಂಗ್ರೆಸ್‌ ಪಕ್ಷವು ಚಿಕ್ಕಮಗಳೂರು ಕ್ಷೇತ್ರವನ್ನು ಹಲವಾರು ಭಾರಿ ವಿಜಯ ಸಾಧಿಸಿ ಭದ್ರ ಕೋಟೆಯಾಗಿತ್ತು. ಇದೀಗ ಜನರಿಂದ ತಿರಸ್ಕಾರಕ್ಕೆ ಒಳಗಾಗಿ ಜೆಡಿಎಸ್‌ ಪಕ್ಷಕ್ಕೆ ಅಭ್ಯರ್ಥಿಯನ್ನು ಬಿಟ್ಟುಕೊಟ್ಟಿದೆ ಎಂದರು.

ಕಳೆದ ಐದು ವರ್ಷದಲ್ಲಿ ಭ್ರಷ್ಟಾಚಾರ ಹಾಗೂ ಹಗರಣ ಮುಕ್ತ ಸರಕಾರ ನೀಡಿದ ಕೀರ್ತಿ ಮೋದಿಯವರದ್ದು. ರೈತರಿಗೆ ಕಿಸಾನ್‌ ಸಮ್ಮಾನ್‌ ಯೋಜನೆಯಡಿ ನೇರವಾಗಿ ರೈತರ ಖಾತೆಗೆ ಹಣ ವರ್ಗಾಯಿಸುವ ಐತಿಹಾಸಿಕ ನಿರ್ಧಾರ ಕೈಗೊಂಡು ರೈತರ ನೆರವಿಗೆ ಕೇಂದ್ರ ಸರಕಾರ ನಿಂತಿದೆ. ಕಾಂಗ್ರೆಸ್‌ ಪಕ್ಷವು 2ಜಿ, ಕಲ್ಲಿದ್ದಲು ಹಗರಣ ಸೇರಿದಂತೆ ಹಲವಾರು ಹಗರಣದಿಂದ ಕೋಟ್ಯಂತರ ರೂ. ಕೊಳ್ಳೆ ಹೊಡೆದಿತ್ತು. ನಮ್ಮ ದೇಶ ಕಾಯುತ್ತಿರುವ ಸೈನಿಕರಿಗೆ ನೈತಿಕ ಬಲ ನೀಡಿರುವ ಮೋದಿ ಸರಕಾರ ಉಗ್ರಗಾಮಿಗಳನ್ನು ಸೆದೆಬಡಿಯಲು ಅನೇಕ ಕಾರ್ಯಾಚರಣೆ ನಡೆಸಿತು ಎಂದರು.

 ಸಂಸದೆ ಶೋಭಾಕರಂದ್ಲಾಜೆ ಮಾತನಾಡಿ, ದೇಶದಲ್ಲಿ ಮಹಾಯುದ್ಧಕ್ಕೆ ತಯಾರಿ ನಡೆಯುತ್ತಿದೆ. ಸೈನಿಕರಿಗೆ ಧೈರ್ಯ
ಕೊಡುವಷ್ಟು ಸ್ಥಿರ ಹಾಗೂ ದೇಶಭಕ್ತ ಸರಕಾರ ಅಗತ್ಯವಿದೆ. ಕೇಂದ್ರದಲ್ಲಿ ಕಳೆದ ಐದು ವರ್ಷದಲ್ಲಿ ಗಡಿ ರಕ್ಷಣೆ ಹಾಗೂ ಅಭಿವೃದ್ಧಿ ವಿಷಯದಲ್ಲಿ ಅನೇಕ ಕ್ರಮ ಕೈಗೊಂಡು ವಿಶ್ವದಲ್ಲಿ ಗಮನಾರ್ಹ ಸಾಧನೆ ಮಾಡಿದೆ. ದೇಶದ ಐಕ್ಯತೆ ಕಾಪಾಡುತ್ತಿರುವ ನರೇಂದ್ರಮೋದಿಯನ್ನು ಸೋಲಿಸಬೇಕು ಎಂದು ನಮ್ಮ ವೈರಿಗಳಾದ ಪಾಕಿಸ್ತಾನ ಮತ್ತು ಚೀನಾ ಹಾತೊರೆಯುತ್ತಿದೆ.

ಇದರೊಂದಿಗೆ ಮಹಾಘಟ ಬಂಧನ್‌ ಹೆಸರಿನಲ್ಲಿರುವ ಪಕ್ಷಗಳು ಹೊಂದಾಣಿಕೆ ಇಲ್ಲದಿದ್ದರೂ ಹೋರಾಟಕ್ಕೆ ಇಳಿದಿವೆ ಎಂದು
ಟೀಕಿಸಿದರು. ಮಾಜಿ ಶಾಸಕ ಡಿ.ಎನ್‌. ಜೀವರಾಜ್‌ ಮಾತನಾಡಿ, ದೇಶ ಸುಭದ್ರವಾಗಿರಬೇಕಾದರೆ ನರೇಂದ್ರ ಮೋದಿ ನೇತೃತ್ವದ ಸರಕಾರ ಬರಬೇಕಿದೆ. ಕ್ಷೇತ್ರದಲ್ಲಿ ಅತ್ಯಂತ ದ್ವೇಷದ ರಾಜಕಾರಣ ನಡೆಯುತ್ತಿದೆ. ಅಲ್ಪ ಮತದಿಂದ ಪರಾಭವಗೊಂಡಿದ್ದರಿಂದ ಯಡಿಯೂರಪ್ಪ ನೇತೃತ್ವದ ಸರಕಾರ ರಚನೆಯಾಗುವುದು ಸಾಧ್ಯವಿಲ್ಲವಾಯಿತು. ಆದರೆ, ಲೋಕಸಭಾ ಚುನಾವಣೆ ನಂತರ ರಾಜ್ಯದಲ್ಲಿ 22 ಕ್ಕೂ ಅಧಿಕ ಸ್ಥಾನ ಬಿಜೆಪಿಗೆ ಬರಲಿದ್ದು,,ಯಡಿಯೂರಪ್ಪ ಮುಖ್ಯಮಂತ್ರಿಯಾಗಲಿದ್ದಾರೆ ಎಂದರು.

Advertisement

ತಾಲೂಕು ಬಿಜೆಪಿ ಅಧ್ಯಕ್ಷ ನಟೇಶ್‌ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಜಿಪಂಸದಸ್ಯರಾದ ಶೆಟ್ಟಿಗದ್ದೆ ರಾಮಸ್ವಾಮಿ,ಬಿ. ಶಿವಶಂಕರ್‌,ತಾಪಂ ಅಧ್ಯಕ್ಷೆ ಜಯಶೀಲಾ, ಮುಖಂಡರಾದ ಚೇತನ್‌ಹೆಗ್ಡೆ, ಎಚ್‌.ಕೆ. ನವೀನ್‌, ರಾಮಕೃಷ್ಣರಾವ್‌ ಮತ್ತಿತರರು ಇದ್ದರು. 

Advertisement

Udayavani is now on Telegram. Click here to join our channel and stay updated with the latest news.

Next