ಹೊನ್ನಾವರ: ವಾರದಿಂದ ಎಡಬಿಡದೇ ಸುರಿದ ಮಳೆ ತಾಲೂಕಿನಲ್ಲಿ ಹಲವು ಆವಾಂತರ ಸೃಷ್ಟಿಸಿದ್ದು, ಜೂನ್ ಕೊನೆಯಲ್ಲಿ ಮಳೆ ಆರಂಭವಾಗಿ ಜುಲೈ ತಿಂಗಳಲ್ಲೆ ನೆರೆ ಭೀತಿ ಕಾಣುವಂತಾಗಿದೆ.
ನೆರೆಯ ಸಿದ್ದಾಪುರ ಸೇರಿದ ತಾಲೂಕಿನ ಘಟ್ಟ ಭಾಗದ ನೀರು ಗುಂಡಬಾಳ ಹಾಗೂ ಭಾಸ್ಕೇರಿ ಹೊಳೆಯ ಮೂಲಕ ಶರಾವತಿ ನದಿ ಜೊತೆ ಸಮುದ್ರ ಸೇರುತ್ತದೆ. ಆದರೆ ಈ ಬಾರಿ ಬಿಟ್ಟು ಬಿಡದೇ ಸುರಿದ ಮಳೆ ನೀರು ಸಮುದ್ರದ ನೀರಿನ ಭರತದಿಂದ ಸರಳವಾಗಿ ಸಮುದ್ರಕ್ಕೆ ನೀರು ಹರಿಯದ ಪರಿಣಾಮ ತಾಲೂಕಿನ ನಾಲ್ಕರಿಂದ ಐದು ಗ್ರಾಮದಲ್ಲಿ ದಿಢೀರ್ ಪ್ರವಾಹ ಸೃಷ್ಟಿಯಾಯಿತು. ಮಾವಿನಕುರ್ವಾ ಗ್ರಾಮದ ಹಲವು ಪ್ರದೇಶಗಳು ಜುಲೈ ತಿಂಗಳಲ್ಲೆ ಪ್ರವಾಹ ನೋಡುವಂತಾಗಿದ್ದು, ಇತ್ತೀಚಿನ ವರ್ಷದಲ್ಲಿ ಕಂಡು ಕೇಳರಿಯದ ರೀತಿಯಲ್ಲಿ ಪ್ರವಾಹ ಹಲವು ಸಂಕಷ್ಟವನ್ನು ತಂದು, ಹತ್ತಾರು ಮನೆಗಳಲ್ಲಿ ಅನಿರಿಕ್ಷೀತವಾಗಿ ಕೆಲವೇ ಗಂಟೆಯಲ್ಲಿ ನೀರು ನುಗ್ಗಿತ್ತು.
ಗುಂಡಬಾಳ, ಭಾಸ್ಕೇರಿ ನದಿಯಿಂದ ಮಳೆಯ ಜೊತೆ ಮಣ್ಣು ಬಂದು ನಿರ್ಮಿತವಾಗಿದೆ ಎನ್ನಲಾದ ಮಾವಿನಕುರ್ವಾ ಗ್ರಾಮಕ್ಕೆ ಇತ್ತೀಚಿನ ವರ್ಷದಲ್ಲಿ ಲಿಂಗನಮಕ್ಕಿ ಡ್ಯಾಂನಿಂದ ನೀರು ಬಿಡುಗಡೆಯಾದಾಗ ಮಾತ್ರ ಪ್ರವಾಹ ಸ್ಥಿತಿ ಉಂಟಾಗುತ್ತಿತ್ತು. ಇದೀಗ ದಿಢೀರ್ ಸುರಿದ ಮಳೆ ಶರಾವತಿ ಎಡ ಹಾಗೂ ಬಲ ದಂಡೆಯಲ್ಲಿ ಅನಿರಿಕ್ಷೀತವಾಗಿ ಪ್ರವಾಹ ಸ್ಥಿನಿರ್ಮಾಣವಾಯಿತು. ಏಕಾಏಕಿ ನುಗ್ಗಿದ ನೀರು ಹಲವು ಅನಾಹುತ ಸೃಷ್ಟಿಸಿದ್ದರೂ ಅಧಿಕಾರಿಗಳು ಹಾಗೂ ಸ್ಥಳೀಯ ಗ್ರಾಪಂ ಜನಪ್ರತಿನಿಧಿಗಳ ಸಮಯಪ್ರಜ್ಞೆಯಿಂದ ಹೆಚ್ಚಿನ ಅಪಾಯ ತಪ್ಪಿದೆ.
ಗ್ರಾಮದ ಸಣ್ಣಮೋಟೆ, ಅಂಗಡಿಹಿತ್ಲು, ರಂಗಿನಮೊಟೆ, ಬೇಲೇಕೇರಿ, ನೂರಾರು ಮನೆಯ ತೋಟ ಗದ್ದೆಗಳಲ್ಲಿ ನೀರು ನುಗ್ಗಿದ್ದು, ಗಾಳಿಯಿಂದ ಹಲವು ಮನೆ ಹಾಗೂ ಅಂಗಡಿಗಳ ಮೇಲ್ಛಾವಣಿ ಹಾರಿ ಹೋಗಿದ್ದು, 25ಕ್ಕಿಂತ ಹೆಚ್ಚಿನ ವಿದ್ಯುತ್ ಕಂಬ ಮುರಿದು ಬಿದ್ದು ಆವಾಂತರ ಸೃಷ್ಟಿಸಿದೆ. 9 ಮನೆಗಳಿಗೆ ನೀರು ನುಗ್ಗಿದ್ದು, 1 ಕುಟುಂಬವನ್ನು ಕಾಳಜಿ ಕೇಂದ್ರಕ್ಕೆ ಹಾಗೂ ಇತರರನ್ನು ಸಂಬಂಧಿಕರ ಮನೆಗೆ ದೋಣಿಯ ಮೂಲಕ ಸ್ಥಳಾಂತರಿಸಿದ್ದಾರೆ. ರಾತ್ರಿ 1ರ ವರೆಗೆ ಗ್ರಾ.ಪಂ. ಅಧ್ಯಕ್ಷ ಜಿ.ಜಿ. ಶಂಕರ್ ಹಾಗೂ ಸದಸ್ಯರು, ಪಿಡಿಒ ರಾಘವ ಮೇಸ್ತ, ನೋಡೆಲ್ ಅಧಿಕಾರಿ ಗಣಪತಿ ಭಟ್ ಕಾರ್ಯಾಚರಣೆ ನಡೆಸಿದ್ದು, ಪ್ರವಾಹದ ಸಂಕಷ್ಟದಲ್ಲಿ ನೆರವಿಗೆ ಧಾವಿಸಿದರು. ಶರಾವತಿ ಟೇಲರೀಸ್‌ನಿಂದ ವಿದ್ಯುತ್ ಉತ್ಪಾದನೆ ನಿಲ್ಲಿಸಿ ಒಂದು ಹನಿ ನೀರು ಬಿಡದಿದ್ದರೂ ಎರಡು ಹಳ್ಳಗಳು ಶರಾವತಿಗೆ ನೆರೆ ತಂದಿದ್ದು ಸೋಜಿಗದ ಸಂಗತಿಯಾಗಿದೆ.