ಬೆಂಗಳೂರು: ಕಾಲೇಜಿಗೆ ಬಂಕ್ ಮಾಡುವ ವಿದ್ಯಾರ್ಥಿಗಳಿಗೊಂದು ಎಚ್ಚರಿಕೆಯ ಕರೆಗಂಟೆ! ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಶೇ.75 ಹಾಜ ರಾತಿ ಇಲ್ಲದ ವಿದ್ಯಾರ್ಥಿಗಳಿಗೆ ವಾರ್ಷಿಕ ಪರೀಕ್ಷೆಯ ಪ್ರವೇಶ ಪತ್ರ ವಿತರಿಸಬೇಡಿ ಎಂದು ಪದವಿಪೂರ್ವ ಶಿಕ್ಷಣ ಇಲಾಖೆ ತನ್ನ ವ್ಯಾಪ್ತಿಯ ಎಲ್ಲ ಶಿಕ್ಷಣ ಸಂಸ್ಥೆಗಳಿಗೂ ಖಡಕ್ ಸೂಚನೆ ನೀಡಿದೆ.
ಪ್ರಥಮ ಹಾಗೂ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಕನಿಷ್ಠ ಶೇ.75 ಹಾಜರಾತಿ ಇರಬೇಕು. ವಿದ್ಯಾರ್ಥಿ ಪದೇ ಪದೇ ತರಗತಿಗೆ ಗೈರಾಗುತ್ತಿರುವುದು ಕಂಡು ಬಂದರೆ, ಹೆತ್ತವರ ಗಮನಕ್ಕೆ ತರುವ ಕೆಲಸವನ್ನು ಪ್ರಾಂಶುಪಾಲರು ಅಥವಾ ಉಪನ್ಯಾಸಕರು ಮಾಡಬೇಕು ಎಂದು ಸೂಚಿಸಲಾಗಿದೆ.
ಹಿಂದಿನ ವರ್ಷಗಳಲ್ಲಿ ವಿದ್ಯಾರ್ಥಿಗಳಿಂದ ದಂಡ ಪಾವತಿಸಿಕೊಂಡು ಪರೀಕ್ಷೆಗೆ ಅನುವು ಮಾಡಿಕೊಡುತ್ತಿದ್ದರು. ಹಾಜರಾತಿ ಕೊರತೆ ಎದುರಿಸುತ್ತಿರುವ ವಿದ್ಯಾರ್ಥಿಗಳು ಈ ವರ್ಷ ದಂಡ ಪಾವತಿಸಿ ದರೂ ಪರೀಕ್ಷೆ ಬರೆಯಲು ಸಾಧ್ಯವಿಲ್ಲ. ವಾರ್ಷಿಕ ಪರೀಕ್ಷೆ ಮಾತ್ರವಲ್ಲ ಪೂರಕ ಪರೀಕ್ಷೆ ಬರೆಯಲೂ ಅವಕಾಶ ನೀಡದಂತೆ ಆದೇಶ ಹೊರಡಿಸಿದೆ. ಜತೆಗೆ ಶೇ.75ಕ್ಕಿಂತ ಕಡಿಮೆ ಹಾಜರಾತಿ ಇರುವ ವಿದ್ಯಾರ್ಥಿಗಳು ದ್ವಿತೀಯ ಪಿಯುಸಿಗೆ ಮರು ದಾಖಲಾತಿ ಪಡೆದೇ ಪಿಯುಸಿ ಪೂರೈಸಬೇಕು. ಸಂಸ್ಥೆಗಳಿಗೆ ಎಚ್ಚರಿಕೆ: ಹಾಜರಾತಿ ಕೊರತೆ ಇರುವ ವಿದ್ಯಾರ್ಥಿಗಳಿಗೆ ಹಾಗೂ ಅವರ ಪೋಷಕರಿಗೆ ಸಕಾಲದಲ್ಲಿ ಮಾಹಿತಿ ನೀಡಬೇಕು. ವರ್ಷಾಂತ್ಯದಲ್ಲಿ ಸಮಸ್ಯೆಗೆ ಪರಿಹಾರ ಕೋರಿ ಇಲಾಖೆಗೆ ಬರುವುದು ಸರಿಯಲ್ಲ. ಹಾಗೆಯೇ ಹಾಜರಾತಿನ ಕೊರತೆ ಎದುರಿಸುತ್ತಿರುವ ವಿದ್ಯಾರ್ಥಿಗಳಿಂದ ಕಾನೂನು ಬಾಹಿರವಾಗಿ ದಂಡ ವಸೂಲಿ ಮಾಡದಂತೆಯೂ ಎಚ್ಚರಿಕೆ ನೀಡಿದೆ. (ಕಾನೂನಿನಲ್ಲಿ ದಂಡ ಪಡೆಯಲು ಅವಕಾಶವೇ ಇಲ್ಲ.)
ಪೋಷಕರಿಂದ ದೃಢೀಕರಣ: ಕರ್ನಾಟಕ ಪದವಿ ಪೂರ್ವ ಶಿಕ್ಷಣ ನಿಯಮ 2006ರ ಉಪ ನಿಯಮ12(1)ರನ್ವಯ ವಿದ್ಯಾರ್ಥಿಯು ಪ್ರತಿ ವಿಷಯದಲ್ಲಿ ಶೇ.75ರಷ್ಟು ಹಾಜರಾತಿ ಕಡ್ಡಾಯವಾಗಿ ಹೊಂದಿರಬೇಕು. ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಹಾಜರಾತಿ ಕೊರತೆ ಇರುವ ವಿದ್ಯಾರ್ಥಿಗಳಿಗೆ ಹಾಗೂ ಪೋಷಕರಿಗೆ ನ.30, ಡಿ.31 ಹಾಗೂ 2018ರ ಜ.31ರಂದು ಪೋಷಕರ ಸಭೆ ಕೆರದು ಖುದ್ದಾಗಿ ತಿಳಿಸಿ, ಪೋಷಕರಿಂದಲೇ ದೃಢೀಕರಣ ಪಡೆಯುವಂತೆ ಸೂಚಿಸಿದೆ.
ಡಿ.31ರಂದು ಪ್ರಕಟಿಸುವ ಹಾಜರಾತಿ ಕೊರತೆಯ ಮಾಹಿತಿಯನ್ನು ವಿದ್ಯಾರ್ಥಿಗಳ ಪೋಷಕರಿಗೆ ಅಂಚೆ ಮೂಲಕ ಕಳುಹಿಸಿ ಸ್ವೀಕೃತಿ ಪಡೆಯಬೇಕು. ಹಾಜರಾತಿ ಕೊರತೆ ಇರುವ ವಿದ್ಯಾರ್ಥಿಗಳ ಪಟ್ಟಿಯನ್ನು ಜಿಲ್ಲಾ ಉಪನಿರ್ದೇಶಕರ ದೃಢೀಕರಣದೊಂದಿಗೆ 2018ರ ಜನವರಿ ಮೊದಲ ವಾರದೊಳಗೆ ಇಲಾಖೆಯ ಕೇಂದ್ರ ಕಚೇರಿಗೆ ಸಲ್ಲಿಸಬೇಕು ಎಂದು ಪ್ರಕಟನೆ ತಿಳಿಸಿದೆ.
*ರಾಜು ಖಾರ್ವಿ ಕೊಡೇರಿ