ಆಲಮಟ್ಟಿ: ರೈತ ವಿರೋಧಿ ಕಾಯ್ದೆಗಳನ್ನು ಕೇಂದ್ರ ಸರ್ಕಾರ ಮರಳಿ ಪಡೆದಿರುವುದು ರೈತರ ಹೋರಾಟಕ್ಕೆ ಸಂದ ಜಯವಾಗಿದೆ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಸಂಚಾಲಕ ನಿಂಗರಾಜ ಆಲೂರ ಹೇಳಿದರು.
ರವಿವಾರ ಇಲ್ಲಿನ ಹಳೆ ರಾಷ್ಟ್ರೀಯ ಹೆದ್ದಾರಿ ಬಳಿ ಲಾಲ್ ಬಹಾದ್ದೂರ್ ಶಾಸ್ತ್ರಿ ಮಹಾದ್ವಾರದ ಮುಂದೆ ರೈತ ಸಂಘ ಮತ್ತು ಹಸಿರು ಸೇನೆ ವತಿಯಿಂದ ನಡೆದ ಸಂಭ್ರಮಾಚರಣೆಯಲ್ಲಿ ಅವರು ಮಾತನಾಡಿದರು.
ಕರಾಳ ಶಾಸನ ವಾಪಸ್ ಪಡೆದಿರುವದು ಸ್ವಾಗತಾರ್ಹವಾದರೂ ರೈತರ ಎಲ್ಲ ಬೇಡಿಕೆಗಳು ಈಡೇರಿಸಬೇಕು. ಹೋರಾಟದಲ್ಲಿ ಮೃತರಾದ ರೈತರ ಕುಟುಂಬಗಳಿಗೆ ನ್ಯಾಯ ಒದಗಿಸಬೇಕು. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ನೇತೃತ್ವದ ಎನ್‌ಡಿಎ ಸರ್ಕಾರ ರೈತರಿಗೆ ಮಾರಕವಾಗುವ ಮೂರು ಕರಾಳ ಶಾಸನವನ್ನು ರಚಿಸಿ ಅವುಗಳ ಅನುಷ್ಠಾನಕ್ಕೆ ಸುಗ್ರೀವಾಜ್ಞೆ ಹೊರಡಿಸಿತ್ತು. ಇದರಿಂದ ಅನಿವಾರ್ಯವಾಗಿ ರೈತ ಪರ ಸಂಘಟನೆಗಳು ಪ್ರತಿಭಟನೆ ನಡೆಸಿದ ನಂತರವಾದರೂ ವಾಪಸ್ ಪಡೆದಿರುವುದು ಸ್ವಲ್ಪ ಸಮಾಧಾನದ ಸಂಗತಿ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ನೂತನ ಕಾಯ್ದೆಗಳನ್ನು ತರಬೇಕಾದರೆ ರೈತರ ಏಳ್ಗೆಯನ್ನು ಗಮನದಲ್ಲಿರಿಸಿಕೊಳ್ಳಬೇಕು ಎಂದರು.
ದೇಶದಲ್ಲಿರುವುದು ಪ್ರಜಾಪ್ರಭುತ್ವ ಸರ್ಕಾರದ ಆಡಳಿತವೋ ಅಥವಾ ಬ್ರಿಟಿಷರ ಆಡಳಿತವೋ ಎನ್ನುವಂತೆ ಕೇಂದ್ರ ಸರ್ಕಾರ ವರ್ತಿಸುತ್ತಿರುವುದು ಖಂಡನೀಯವಾಗಿದೆ. ಎಂಎಸ್‌ಪಿ ದರ ಹಾಗೂ ರೈತರ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ನ. 26ರಂದು ಪ್ರತಿಭಟನೆ ನಡೆಸುವುದು ನಿಶ್ಚಿತ. ಪ್ರಧಾನ ಮಂತ್ರಿಯವರು ಘೋಷಣೆ ಮಾಡಿದಂತೆ ಅದನ್ನು ಈಗ ನಡೆಯಲಿರುವ ಅಧಿವೇಶನದಲ್ಲಿ ವಾಪಸ್ ಪಡೆಯಬೇಕು. ರೈತರ ಇನ್ನುಳಿದ ಬೇಡಿಕೆಗಳನ್ನು ಈಡೇರಿಸಬೇಕು ಮತ್ತು ಹೋರಾಟದಲ್ಲಿ ಮೃತಪಟ್ಟ ರೈತರ ಕುಟುಂಬಗಳಿಗೆ ಕನಿಷ್ಠ 50 ಲಕ್ಷ ರೂ. ಪರಿಹಾರ ನೀಡಬೇಕು. ಮೃತರ ಕುಟುಂಬ ಸದಸ್ಯರಿಗೆ ಸರ್ಕಾರಿ ಉದ್ಯೋಗ ನೀಡಬೇಕು ಎಂದು ಒತ್ತಾಯಿಸಿದರು.
ತಾಲೂಕಾಧ್ಯಕ್ಷ ತಿರುಪತಿ ಬಂಡಿ ಹಾಗೂ ಪ್ರಧಾನ ಕಾರ್ಯದರ್ಶಿ ಸೀತಪ್ಪ ಗಣಿ ಮಾತನಾಡಿ, ಉತ್ತರ ಭಾರತ ರಾಜ್ಯಗಳ ವಿಧಾನಸಭೆ ಚುನಾವಣೆಗಳನ್ನು ಗಮನದಲ್ಲಿರಿಸಿಕೊಂಡು ಕರಾಳ ಶಾಸನಗಳನ್ನು ವಾಪಸ್ ಪಡೆಯಲಾಗಿದೆ. ರೈತರ ಬಗ್ಗೆ ಕೇಂದ್ರ ಸರ್ಕಾರಕ್ಕೆ ನಿಜವಾದ ಕಾಳಜಿಯಿದ್ದರೆ ಶಾಸನ ರಚಿಸಿದ ಕೆಲ ದಿನಗಳಲ್ಲಿಯೇ ರೈತರು ಉಗ್ರಪ್ರತಿಭಟನೆ ನಡೆಸಿದ್ದರು. ಆ ಸಂದರ್ಭದಲ್ಲಿ ಶಾಸನ ವಾಪಸ್ ಪಡೆಯದೇ ಹೋರಾಟವನ್ನು ಅಧಿಕಾರ ಬಲದಿಂದ ಹತ್ತಿಕ್ಕಲು ಪ್ರಯತ್ನಿಸಲಾಯಿತು. ಇದಕ್ಕೆ ರೈತರು ಬಗ್ಗದೇ ಇರುವಾಗ ರೌಡಿಗಳಿಂದ ದಾಂಧಲೆ ನಡೆಸಿ ರೈತರ ಹತ್ಯೆಗೆ ಯತ್ನಿಸಲಾಯಿತು. ಇಷ್ಟೇ ಇಲ್ಲದೇ ರೈತ ಪರ ಸಂಘಟನೆಯ ವಿರುದ್ದವಾಗಿ ಅಪ ಪ್ರಚಾರ ನಡೆಸಲಾಯಿತು. ಇದು ಆಡಳಿತ ನಡೆಸುವ ಸರ್ಕಾರದ ಅವಿವೇಕಿತನ ಎಂದು ವಾಗ್ಧಾಳಿ ನಡೆಸಿದರು. ವೆಂಕಟೇಶ ವಡ್ಡರ, ಸಾಬಣ್ಣ ಅಂಗಡಿ, ಸುಭಾಷ್ ಚೋಪಡೆ, ಮಲ್ಲಯ್ಯ ಮಠಪತಿ, ಸಾಬಣ್ಣ ಮಾದರ, ಶಿವಶಂಕರ ಕವಲಗಿ ಮೊದಲಾದವರಿದ್ದರು.