ಸುರತ್ಕಲ್: ಹಿಂದುತ್ವದ ಮೇಲೆ ಸದಾ ಕೆಂಡ ಕಾರುತ್ತಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಇದೀಗ ಮತಾಂತರ ನಿಷೇಧ ಕಾಯ್ದೆಯನ್ನ ರದ್ದು ಮಾಡಲು ಉದ್ದೇಶಿಸುವ ಮೂಲಕ ಪರೋಕ್ಷ ಸಮರ ಸಾರಿದ್ದಾರೆ. ಇದಕ್ಕೆ ಬಿಜೆಪಿ ರಾಜ್ಯದ ಪ್ರತೀ ಜಿಲ್ಲೆಯಲ್ಲಿ ಆಂದೋಲದ ಮಾದರಿ ಹೋರಾಟ ನಡೆಸಿ, ಹಿಂದುತ್ವದ ಉಳಿವಿಗಾಗಿ ಟಕ್ಕರ್ ನೀಡಲಿದೆ ಎಂದು ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಡಾ. ಭರತ್ ಶೆಟ್ಟಿ ವೈ ಹೇಳಿದ್ದಾರೆ.
ಬಿಜೆಪಿ ಸರ್ಕಾರ ಮತಾಂತರ ಹಾವಳಿಯನ್ನು ತಡೆಗಟ್ಟಲು ಮತಾಂತರ ನಿಷೇಧ ಕಾಯ್ದೆಯನ್ನು ಜಾರಿಗೆ ತಂದಿತ್ತು. ಬಹಳಷ್ಟು ವಿರೋಧವಾಗಿದ್ದರೂ ಲೆಕ್ಕಿಸದೆ, ಹಿಂದೂ ಸಮಾಜದ ರಕ್ಷಣೆಗಾಗಿ ಬಿಜೆಪಿ ಸರಕಾರ ಈ ನಿರ್ಧಾರ ತಳೆದಿತ್ತು. ಇದೀಗ ಒಂದೆರಡು ಸಮುದಾಯದ ಒಲೈಕೆ ಹಾಗೂ ಮುಂದಿನ ಲೋಕಸಭಾ ಚುನಾವಣೆಯ ಮೇಲೆ ಕಣ್ಣಿಟ್ಟಿರುವ ಕಾಂಗ್ರೆಸ್ ಸರ್ಕಾರ, ಮತಾಂತರ ನಿಷೇಧ ಕಾಯ್ದೆ ವಾಪಸ್ ಪಡೆಯುವ ನಿರ್ಧಾರ ತಳೆದಿರುವುದು ಮುಂದೆ ಬೃಹತ್ ಆಂದೋಲನ ಒಂದಕ್ಕೆ ನಾಂದಿ ಹಾಡಿದೆ ಎಂದು ಪರೋಕ್ಷ ಎಚ್ಚರಿಕೆಯನ್ನು ನೀಡಿದ್ದಾರೆ.
ಇದನ್ನೂ ಓದಿ:ದಿಗ್ಗಜರ ವಿದಾಯದ ಬಳಿಕ…; ಭಾರತದ ಭವಿಷ್ಯದ ಟೆಸ್ಟ್ ತಂಡ ಹೀಗೆ ಇರುತ್ತದೆ..
ಲವ್ ಜಿಹಾದ್, ಮತಾಂತರ ಕೇವಲ ಕರ್ನಾಟಕ ರಾಜ್ಯ ಮಾತ್ರವಲ್ಲದೆ ನೆರೆಯ ಕೇರಳವನ್ನ ಕೂಡ ಬಾಧಿಸುತ್ತಿದ್ದು, ನೂರಾರು ಹತ್ಯೆ ಪ್ರಕರಣ ಬೆಳಕಿಗೆ ಬರುತ್ತಿದೆ. ಇದರ ನಡುವೆ ಕಾಯಿದೆ ಬಲಪಡಿಸುವ ಬದಲು ಕರ್ನಾಟಕ ರಾಜ್ಯ ಸರ್ಕಾರದ ನಿರ್ಧಾರ ಮತಾಂತರವಾದಿ ಸಂಘಟನೆಗಳಲ್ಲಿ ಹೊಸ ಹುಮ್ಮಸ್ಸು ನೀಡಿದಂತಾಗಿದೆ ಎಂದು ಭರತ್ ಶೆಟ್ಟಿ ವೈ ಟೀಕಿಸಿದ್ದಾರೆ.
ಪಠ್ಯ ಪುಸ್ತಕದಲ್ಲಿ ರಾಷ್ಟ್ರೀಯತೆ, ದೇಶ ಪ್ರೇಮವನ್ನು ಬಿಂಬಿಸುವ ಪಠ್ಯಕ್ರಮವನ್ನು ಹಿಂಪಡೆದಿರುವುದು ದೇಶದಲ್ಲಿ ಮತ್ತೆ ಮತಾಂಧತೆಯ ಶಕ್ತಿಗಳು ವಿಜ್ರಂಬಿಸುವಂತೆ ಮಾಡುವಲ್ಲಿ ಸಂಶಯವಿಲ್ಲ. ಮತದಾರ ಕೇವಲ ಒಂದು ತಿಂಗಳಲ್ಲಿ ಕಾಂಗ್ರೆಸ್ ಸರಕಾರ ಮಾಡುತ್ತಿರುವ ಎಡವಟ್ಟುಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದು, ಮುಂದಿನ ಲೋಕಸಭಾ ಚುನಾವಣೆಯಲ್ಲಿ ಮತದಾರ ಸೂಕ್ತ ಉತ್ತರ ನೀಡಲಿದ್ದಾನೆ ಎಂದು ಪ್ರಕಟಣೆಯಲ್ಲಿ ಎಚ್ಚರಿಸಿದ್ದಾರೆ.