ನವದೆಹಲಿ: ಭಾರತೀಯ ಜನತಾ ಪಕ್ಷದವರೇ ಮಹಾರಾಷ್ಟ್ರ ಮುಖ್ಯಮಂತ್ರಿ ಹುದ್ದೆಗೆ ಏರಬೇಕು ಎಂದು ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ(ಆರ್ ಪಿಐ)ದ ಮುಖ್ಯಸ್ಥ, ಕೇಂದ್ರ ಸಚಿವ ರಾಮದಾಸ್ ಅಠಾವಳೆ ತಿಳಿಸಿದ್ದು, ಒಂದು ವೇಳೆ ಏನೂ ಅನುಭವ ಇಲ್ಲದ ಶಿವಸೇನಾ ಮುಖಂಡ ಆದಿತ್ಯ ಠಾಕ್ರೆಗೆ ಸಿಎಂ ಸ್ಥಾನ ನೀಡಿದರೆ ಅದು ಅವಮಾನ ಮಾಡಿದಂತೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಬಿಜೆಪಿಯ ದೇವೇಂದ್ರ ಫಡ್ನವೀಸ್ ಅವರಿಗೆ ಮುಖ್ಯಮಂತ್ರಿಯಾಗುವ ಅವಕಾಶ ನೀಡಬೇಕು. ಆದಿತ್ಯ ಠಾಕ್ರೆಗೆ ರಾಜಕೀಯದ ಅನುಭವವೇ ಇಲ್ಲ. ಒಂದು ವೇಳೆ ಆದಿತ್ಯ ಠಾಕ್ರೆ ಸಿಎಂ ಆದರೆ ಅದು ನಮಗೆ ಅವಮಾನ ಎಂದು ಮುಂಬೈನಲ್ಲಿ ಸುದ್ದಿಗಾರರ ಜತೆ ಮಾತನಾಡುತ್ತ ತಿಳಸಿದ್ದಾರೆ.
ಮಹಾರಾಷ್ಟ್ರದಲ್ಲಿ ಫಡ್ನವೀಸ್ ಮುಖ್ಯಮಂತ್ರಿಯಾಗಬೇಕೆಂದು ಈ ಮೊದಲು ಕೂಡಾ ಅಠಾವಳೆ ಬೆಂಬಲ ವ್ಯಕ್ತಪಡಿಸಿದ್ದರು. ಅಠಾವಳೆ ನೇತೃತ್ವದ ಆರ್ ಪಿಐ ಎನ್ ಡಿಎ ಮೈತ್ರಿಕೂಟಕ್ಕೆ ಬೆಂಬಲ ನೀಡಿದೆ.
ಬಿಜೆಪಿ-ಶಿವಸೇನಾ ಮೈತ್ರಿ ಸ್ಪಷ್ಟ ಬಹುಮತ ಪಡೆದಿದೆ. ದೇವೇಂದ್ರ ಫಡ್ನವೀಸ್ ಅವರನ್ನು ಬಿಜೆಪಿ ಶಾಸಕಾಂಗ ಪಕ್ಷದ ನಾಯಕನನ್ನಾಗಿ ಆಯ್ಕೆ ಮಾಡಲಾಗಿದೆ. ಅಲ್ಲದೇ ಮುಖ್ಯಮಂತ್ರಿ ಹುದ್ದೆಗೆ ಫಡ್ನವೀಸ್ ಅವರ ಹೆಸರನ್ನೇ ನಾವೆಲ್ಲ ಬೆಂಬಲಿಸಿದ್ದೇವೆ. ಸಿಎಂ ಸ್ಥಾನಕ್ಕೆ ಅವರೊಬ್ಬರೇ ಸ್ಪರ್ಧಿ, ಮುಂದಿನ ಐದು ವರ್ಷಗಳ ಕಾಲ ಒಬ್ಬರೇ ಮುಖ್ಯಮಂತ್ರಿಯಾಗಿರಬೇಕು ಎಂಬುದು ನಮ್ಮ ಬಯಕೆಯಾಗಿದೆ ಎಂದು ಅಠಾವಳೆ ತಿಳಿಸಿದ್ದಾರೆ.
ಮಹಾರಾಷ್ಟ್ರದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ರಚಿಸುವ ನಿಟ್ಟಿನಲ್ಲಿ ಶಿವಸೇನಾ ರಾಜಿ ಮಾಡಿಕೊಳ್ಳಬೇಕಾದ ಅಗತ್ಯವಿದೆ ಎಂದು ಹೇಳಿದರು.