ದಾವಣಗೆರೆ: ಪ್ರತಿಯೊಬ್ಬರೂ ಸಂವಿಧಾನಬದ್ಧ ಹಕ್ಕು ಪ್ರತಿಪಾದಿಸಿ, ಪಡೆಯುವ ಮಾದರಿಯಲ್ಲೇ ಕರ್ತವ್ಯ ಪಾಲಿಸುವ ಮೂಲಕ ಅಪರಾಧಮುಕ್ತ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸುವರ್ಣ ಕೆ. ಮಿರ್ಜಿ ತಿಳಿಸಿದ್ದಾರೆ.
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಂಯುಕ್ತಾಶ್ರಯದಲ್ಲಿ ಗುರುವಾರ ಸಂವಿಧಾನದ ಆಶಯ ಮತ್ತು ಮೂಲಭೂತ ಕರ್ತವ್ಯಗಳು… ವಿಷಯ ಕುರಿತು ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದ ಅವರು, ಎಲ್ಲರೂ ತಮ್ಮ ಹಕ್ಕುಗಳ ಪ್ರತಿಪಾದಿಸುವಂತೆ ಸಂವಿಧಾನಬದ್ಧವಾದ ಕರ್ತವ್ಯವನ್ನೂ ಚಾಚೂ ತಪ್ಪದೆ ಕಟ್ಟುನಿಟ್ಟಾಗಿ ಪಾಲಿಸಬೇಕಿದೆ ಎಂದರು.
1950 ರಲ್ಲಿ ಜಾರಿಗೆ ಬಂದಿರುವ ಸಂವಿಧಾನ ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಶಾಸನಬದ್ಧವಾದ ಹಕ್ಕುಗಳ ಜೊತೆಗೆ ಕರ್ತವ್ಯವನ್ನೂ ತಿಳಿಸಿದೆ. ಹಕ್ಕುಗಳ ಚಲಾವಣೆಗೆ ಮುಂದಾಗುವ ಜನರು, ತಮ್ಮ ಕರ್ತವ್ಯ ಪಾಲಿಸುವುದಕ್ಕೆ ಹಿಂದೆ ಉಳಿಯುತ್ತಾರೆ. ಹಕ್ಕು ಹಾಗೂ ಕರ್ತವ್ಯ ಎರಡನ್ನೂ ಸಮಾನವಾಗಿ ಪಾಲಿಸಬೇಕು ಎಂದು ತಿಳಿಸಿದರು.
ಸರ್ವೋತ್ಛ ನ್ಯಾಯಾಲಯ ವಾಹನ ಸವಾರರಿಗೆ ಹೆಲ್ಮೆಟ್ ಕಡ್ಡಾಯ ಮಾಡಿ ಒಂದು ವರ್ಷವೇ ಕಳೆದರೂ ದಾವಣಗೆರೆಯಲ್ಲಿ ಈವರೆಗೆ ಸರಿಯಾಗಿ ಪಾಲನೆ ಆಗುತ್ತಿಲ್ಲ. 18 ವರ್ಷಕ್ಕಿಂತಲೂ ಕಡಿಮೆ ವಯಸ್ಸಿನವರು ವಾಹನ ಚಲಾಯಿಸುವಂತೆಯೇ ಇಲ್ಲ. ಆದರೂ, ವಾಹನ ಚಲಾಯಿಸಲಾಗುತ್ತದೆ. ಪರವಾನಿಗೆ ಹೊಂದಿರಬೇಕು.
ವಾಹನಕ್ಕೆ ವಿಮೆ ಮಾಡಿಸಿರಬೇಕು ಎನ್ನುವುದು ಸಂವಿಧಾನ ಬದ್ಧ ಕರ್ತವ್ಯಗಳು. ಸಣ್ಣ ಪುಟ್ಟ ಕರ್ತವ್ಯವನ್ನು ಸಹ ನಾವೆಲ್ಲರೂ ಕಡ್ಡಾಯವಾಗಿ ಪಾಲಿಸುವಂತಾಗಬೇಕು ಎಂದು ತಿಳಿಸಿದರು. ಸಾರ್ವಜನಿಕರು, ವಿದ್ಯಾರ್ಥಿ ಸಮುದಾಯದಲ್ಲಿ ಕಾನೂನು ಅರಿವು ಮೂಡಿಸುವ ಉದ್ದೇಶದಿಂದ 1987 ರಿಂದ ಪ್ರಾರಂಭವಾಗಿರುವ ಕಾನೂನು ಸೇವಾ ಪ್ರಾಧಿಕಾರ ರಾಷ್ಟ್ರ ಮಟ್ಟದಿಂದ ಹಿಡಿದು ತಾಲೂಕು ಮಟ್ಟದವರೆಗೆ ಕೆಲಸ ಮಾಡುತ್ತಿದೆ.
ಲೋಕ ಅದಾಲತ್ ಮೂಲಕ ರಾಜೀ ಮಾಡಿಕೊಳ್ಳಬಹುದಾದ ಚೆಕ್ ಬೌನ್ಸ್, ಸಾಲ ತೀರವಳಿ, ವಿವಾಹ ವಿಚ್ಛೇದನ ಮತ್ತು ಪರಿಹಾರ ಇತರೆ ಪ್ರಕರಣಗಳನ್ನು ಇತ್ಯರ್ಥ ಪಡಿಸುತ್ತಿದೆ. ಇದರಿಂದ ಉಭಯತ್ರಯರಿಗೆ ಸಮಯ, ಹಣ ಉಳಿತಾಯವಾಗುತ್ತದೆ. ಮಾನಸಿಕ ಒತ್ತಡ ದೂರವಾಗುತ್ತದೆ ಅಲ್ಲದೆ ನ್ಯಾಯಾಯಲಗಳಲ್ಲಿ ಬಾಕಿ ಇರುವ ಪ್ರಕರಣಗಳ ಸಂಖ್ಯೆಯೂ ಕಡಿಮೆ ಆಗುತ್ತದೆ.
ಈ ವರ್ಷ ಜನವರಿಯಿಂದ ಫೆ. 11 ರವರೆಗೆ ದೇಶದಲ್ಲಿ 3 ಲಕ್ಷ ಪ್ರಕರಣಗಳನ್ನು ಲೋಕ್ ಅದಾಲತ್ ಮೂಲಕ ಬಗೆಹರಿಸಲಾಗಿದೆ ಎಂದು ತಿಳಿಸಿದರು. ಡಾ| ಜಿ.ಎಂ. ದಿನೇಶ್ ಸ್ವಾಗತಿಸಿದರು. ಡಾ| ಸಿ.ಎಸ್. ಸೋಮಶೇಖರಪ್ಪ ನಿರೂಪಿಸಿದರು. ಡಾ| ಎಲ್. ವೀರ್ಯಾನಾಯ್ಕ ವಂದಿಸಿದರು.