ಶಿವಮೊಗ್ಗ : ಕೇಂದ್ರ ಸಚಿವ ಸಂಪುಟ ವಿಸ್ತರಣೆ ಸಂದರ್ಭದಲ್ಲಿ ರಾಜ್ಯಕ್ಕೆ ಎರಡು ಸಚಿವ ಸ್ಥಾನ ಸಿಗುವ ಸಾಧ್ಯತೆ ಇದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್ ಈಶ್ವರಪ್ಪ ಹೇಳಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸುರೇಶ್ ಅಂಗಡಿಯವರು ಸಚಿವರಾಗಿದ್ದರು. ಅವರ ಸ್ಥಾನ ಈಗ ಖಾಲಿ ಇದೆ.
ಕೇಂದ್ರ ಸಚಿವ ಸಂಪುಟ ವಿಸ್ತರಣೆ ಸಂದರ್ಭದಲ್ಲಿ ರಾಜ್ಯಕ್ಕೆ ಒಂದು ಅಥವಾ ಎರಡು ಸಚಿವ ಸ್ಥಾನ ನೀಡುವಂತೆ ಮನವಿ ಮಾಡುತ್ತೇವೆ. ಅದಕ್ಕಿಂತ ಮುಂಚಿತವಾಗಿ ಕೇಂದ್ರದ ನಾಯಕರು ಈ ಕುರಿತು ಯೋಚನೆ ಮಾಡಿರುತ್ತಾರೆ ಎಂದರು.ಸಚಿವ
ಯೋಗೇಶ್ವರ್ ದೆಹಲಿ ಭೇಟಿ ವಿಚಾರವಾಗಿ ಮಾತನಾಡಿದ ಅವರು, ದೆಹಲಿಗೆ ಹೋಗಬಾರದು ಎಂದು ಸಂವಿಧಾನದಲ್ಲಿ ಏನಾದರೂ ಬರೆದಿದ್ದಾರೆಯೇ?. ಭಾರತೀಯ ಜನತಾ ಪಕ್ಷದ ನಾಯಕರು ದೆಹಲಿಗೆ ಹೋದ್ರೆ ಯಾಕೇ ಈ ಪ್ರಶ್ನೆ ಮಾಡ್ತೀರಾ ಎಂದು ಹೇಳಿದರು.
ಮಾಜಿ ಸಚಿವ ರಮೇಶ್ ಜಾರಕಿಹೊಳಿ ರಾಜಕೀಯ ನಿವೃತ್ತಿ ಕುರಿತು ಪ್ರತಿಕ್ರಿಯೆ ನೀಡಿದ ಸಚಿವ ಈಶ್ವರಪ್ಪ, ರಮೇಶ್ ಜಾರಕಿಹೊಳಿ ರಾಜಕೀಯ ನಿವೃತ್ತಿ ಪಡೆಯಲ್ಲ. ಒಂದು ವೇಳೆ ಪಡೆದರು ಸಾಯುವವರೆಗೂ ಬಿಜೆಪಿಯಲ್ಲಿಯೇ ಇರುತ್ತೇನೆ ಎಂದಿರುವುದಕ್ಕೆ ಖುಷಿ ಇದೆ ಎಂದರು.