ಬೀಜಿಂಗ್: ಚೀನಾದಲ್ಲಿ ಮತ್ತೆ ಕೋವಿಡ್ ಸೋಂಕು ದಾಖಲೆ ಪ್ರಮಾಣದಲ್ಲಿ ಪತ್ತೆಯಾಗತೊಡಗಿದ್ದು, ಈ ನಿಟ್ಟಿನಲ್ಲಿ ಕೋವಿಡ್ ಸೋಂಕು ಹರಡದಂತೆ ತಡೆಗಟ್ಟಲು ಚೀನಾ ಹಲವಾರು ಕಠಿಣ ಕ್ರಮ ಜಾರಿಗೊಳಿಸಲು ಮುಂದಾಗಿದೆ. ಇದರ ಪರಿಣಾಮ ದೇಶದಲ್ಲಿ ಜನರು ಚೀನಾದ ಕಮ್ಯುನಿಷ್ಟ್ ಆಡಳಿತದ ವಿರುದ್ಧವೇ ಆಕ್ರೋಶ ವ್ಯಕ್ತಪಡಿಸಿತೊಡಗಿದ್ದಾರೆ ಎಂದು ಮಾಧ್ಯಮದ ವರದಿ ತಿಳಿಸಿದೆ.
ಇದನ್ನೂ ಓದಿ:ರಾಜ್ಯದೆಲ್ಲೆಡೆ ಸರ್ಕಾರಿ ಗೋಶಾಲೆಯ 31 ಗೋವುಗಳನ್ನು ದತ್ತು ಪಡೆಯಲಿದ್ದಾರಂತೆ ಕಿಚ್ಚ ಸುದೀಪ್
ಚೀನಾ ರಾಜಧಾನಿ ಬೀಜಿಂಗ್, ವಾಣಿಜ್ಯ ನಗರಿ ಗುವಾಂಗ್ ಝೌ ನಗರ ಸೇರಿದಂತೆ ಹಲವು ಪ್ರದೇಶಗಳಲ್ಲಿ ಕೋವಿಡ್ ಪ್ರಕರಣ ಏರಿಕೆಯಾಗತೊಡಗಿದೆ. ಗುರುವಾರ(ನವೆಂಬರ್ 24) ಚೀನಾದಲ್ಲಿ 31,527 ಪ್ರಕರಣ ದಾಖಲಾಗಿದೆ. ಬೃಹತ್ ನಗರಿ ಶಾಂಘೈನಲ್ಲಿ ಲಾಕ್ ಡೌನ್ ಘೋಷಿಸಲಾಗಿದೆ ಎಂದು ವರದಿ ವಿವರಿಸಿದೆ.
ಚೀನಾದ ಪ್ರಮುಖ ನಗರಗಳಲ್ಲಿ ಲಾಕ್ ಡೌನ್ ಘೋಷಿಸಿದ್ದರಿಂದ ಜನರು ಅಸಮಾಧಾನವ್ಯಕ್ತಪಡಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಚೀನಾದಲ್ಲಿ ಕಠಿಣವಾದ ಶೂನ್ಯ ಕೋವಿಡ್ ನೀತಿ ಜಾರಿಯಲ್ಲಿದ್ದು, ಒಂದು ವೇಳೆ ಕೆಲವು ಕೋವಿಡ್ ಪ್ರಕರಣಗಳು ಪತ್ತೆಯಾದರೂ ಕೂಡಾ ಇಡೀ ನಗರವನ್ನೇ ಲಾಕ್ ಡೌನ್ ಹೇರಿಕೆ ಮಾಡಲಾಗುತ್ತಿದೆ. ಕೋವಿಡ್ ಸೋಂಕಿತ ರೋಗಿಗಳಿಗೂ ಕಠಿಣ ಕ್ವಾರಂಟೈನ್ ವಿಧಿಸಲಾಗುತ್ತಿದೆ ಎಂದು ವರದಿ ವಿವರಿಸಿದೆ.
ಚೀನಾ ಶೂನ್ಯ ಕೋವಿಡ್ ನೀತಿಯಿಂದಾಗಿ ದೇಶದ 1.4 ಬಿಲಿಯನ್ ಜನಸಂಖ್ಯೆಯನ್ನು ರಕ್ಷಿಸಲು ಅನುಕೂಲವಾಗಬಹುದು. ಆದರೆ ಕಠಿಣ ಲಾಕ್ ಡೌನ್ ನಿಂದಾಗಿ ಚೀನಾದ ಆರ್ಥಿಕತೆ ಮತ್ತು ಜನಸಾಮಾನ್ಯರ ಬದುಕಿನ ಮೇಲೆ ಪರಿಣಾಮ ಬೀರುವಂತಾಗಿದೆ ಎಂದು ವರದಿ ತಿಳಿಸಿದೆ.
ಉದ್ಯೋಗಿಗಳಿಗೆ ಕೋವಿಡ್ ಸೋಂಕು ಹರಡಲಿದೆ ಎಂಬ ಕಾರಣದಿಂದ ಕಳೆದ ಒಂದು ತಿಂಗಳಿನಿಂದ ಝೆಂಗ್ ಝೌನಲ್ಲಿರುವ ಐಫೋನ್ ತಯಾರಿಕಾ ಘಟಕದಲ್ಲಿ ಕೋವಿಡ್ ನಿರ್ಬಂಧದಿಂದ ರೋಸಿ ಹೋದ ಜನರು ಹಿಂಸಾತ್ಮಕ ಪ್ರತಿಭಟನೆಯಲ್ಲಿ ತೊಡಗಿರುವುದಾಗಿ ವರದಿ ತಿಳಿಸಿದೆ.