ಜಮ್ಮು : ಭಾರೀ ಶಸ್ತ್ರ ಸಜ್ಜಿತ ಹಿಜ್‌ಬುಲ್ ಉಗ್ರರ ಗುಂಪೊಂದು ಜಮ್ಮು ಕಾಶ್ಮೀರದ ಶೋಪಿಯಾನ್ ಜಿಲ್ಲೆಯ ಸುತ್ತಮುತ್ತಲ ಪ್ರದೇಶದಲ್ಲಿ ಬೃಹತ್ ದಾಳಿಗೆ ಸಜ್ಜಾಗಿ ಅಡಗಿ ಕುಳಿತಿದೆ ಎಂಬ ಖಚಿತ ಗುಪ್ತಚರ ಮಾಹಿತಿಯ ಆಧಾರದ ಮೇಲೆ ಭಾರತೀಯ ಭದ್ರತಾ ಪಡೆಯ ಸುಮಾರು 1,000 ಯೋಧರು ಇಂದು ಶೋಪಿಯಾನ್ ಜಿಲ್ಲೆಯಲ್ಲಿ ಬೃಹತ್ ಶೋಧ ಹಾಗೂ ಕಾಂಬಿಂಗ್ ಕಾರ್ಯಾಚರಣೆಯನ್ನು ಆರಂಭಿಸಿದ್ದಾರೆ.
ಶಸ್ತ್ರ ಸಜ್ಜಿತರಾಗಿ ಅಡಗಿ ಕೂತಿರುವ ಹಿಜ್‌ಬುಲ್ ಉಗ್ರರ ಗುಂಪೊಂದನ್ನು ಪತ್ತೆ ಹಚ್ಚುವ ಶೋಧ ಕಾರ್ಯಾಚರಣೆಯನ್ನು ನಿನ್ನೆ ಮಂಗಳವಾರ ರಾತ್ರಿಯಿಂದಲೇ ಭದ್ರತಾ ಪಡೆಗಳು ಆರಂಭಿಸಿರುವುದಾಗಿ ಸೇನಾ ಮೂಲಗಳು ತಿಳಿಸಿವೆ. ಈ ಕಾರ್ಯಾಚರಣೆಗೆ ಇಳಿಸಲಾಗಿರುವ ಸುಮಾರು 1,000 ಭದ್ರತಾ ಸಿಬಂದಿಗಳು ಭಾರತೀಯ ಸೇನೆ ಮತ್ತು ವಿಶೇಷ ಕಾರ್ಯಾಚರಣೆ ಸಮೂಹ (ಎಸ್‌ಓಜಿ)ಗೆ ಸೇರಿರುವುದಾಗಿ ತಿಳಿದುಬಂದಿದೆ.
ಪ್ರಕೃತ ಉಗ್ರರ ಪತ್ತೆಗಾಗಿ ಹಮ್ಮಿಕೊಳ್ಳಲಾಗಿರುವ ಶೋಧ ಕಾರ್ಯಾಚರಣೆಯು ಶೋಪಿಯಾನ್ ಜಿಲ್ಲೆಯ ಹೆಫ್ ಮತ್ತು ಶೀರ್ಮಾಲ್ ಗ್ರಾಮಗಳಿಗೆ ಸೀಮಿತವಾಗಿದೆ.
ಭದ್ರತಾ ಸಿಬಂದಿಗಳು ಈ ಎರಡು ಹಳ್ಳಿಗಳಲ್ಲಿ ಮನೆ ಮನೆ ಶೋಧದಲ್ಲಿ ತೊಡಗಿಕೊಂಡಿದ್ದು ಅಡಗಿ ಕೂತಿರುವ ಉಗ್ರರನ್ನು ಪತ್ತೆ ಹಚ್ಚಿ ಹೊರ ಹಾಕಲು ಮುಂದಾಗಿದ್ದಾರೆ.
ಗುಪ್ತಚರ ದಳದ ಮಾಹಿತಿಯ ಪ್ರಕಾರ ಪಾಕ್ ಪರ ಉಗ್ರ ಸಂಘಟನೆಯಾಗಿರುವ ಹಿಜ್‌ಬುಲ್ ಮುಜಾಹಿದೀನ್‌ಗೆ ಸೇರಿರುವ ಭಾರೀ ಶಸ್ತ್ರ ಸಜ್ಜಿತ ಸುಮಾರು 10 ಕಟ್ಟಾ ಉಗ್ರರು ಶೋಪಿಯಾನ್ ಜಿಲ್ಲೆಯ ದಟ್ಟಾರಣ್ಯದಲ್ಲಿ ಅಡಗಿ ಕೂತಿದ್ದಾರೆ.
ಕೇಂದ್ರ ರಕ್ಷಣಾ ಸಚಿವ ಅರುಣ್ ಜೇತ್ಲಿ ಮತ್ತು ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಅವರು ಜಮ್ಮು ಕಾಶ್ಮೀರದಲ್ಲಿನ ಭದ್ರತಾ ಪರಿಸ್ಥಿತಿಗಳನ್ನು ಅವಲೋಕಿಸಲು ಆಗಮಿಸಲಿರುವ ಹಿನ್ನೆಲೆಯಲ್ಲಿ ಈ ಕಾರ್ಯಾಚರಣೆ ಸಾಗಿರುವುದಾಗಿ ತಿಳಿದು ಬಂದಿದೆ.