ನವದೆಹಲಿ: ಕೃಷ್ಣ-ಗೋದಾವರಿ ಜಲಾನಯನ ಪ್ರದೇಶದಲ್ಲಿ ಸರ್ಕಾರಿ ಸ್ವಾಮ್ಯದ ಒಎನ್ ಜಿಸಿಯ ಆಳ ಸಮುದ್ರದ ಯೋಜನೆಯಲ್ಲಿ ಭಾರತ ತನ್ನ ಮೊದಲ ತೈಲ ಆವಿಷ್ಕಾರಕ್ಕೆ ಹೆಜ್ಜೆ ಇಡುವುದಾಗಿ ಘೋಷಿಸಿತ್ತು. ಈ ಹಿನ್ನೆಲೆಯಲ್ಲಿ ಜೂನ್ ಅಂತ್ಯದೊಳಗೆ ನಾಲ್ಕು ಆಳ ಸಮುದ್ರದ ಬಾವಿಗಳ ಕಾರ್ಯಾಚರಣೆ ಮೂಲಕ ಪ್ರತಿ ದಿನ 45,000 ಬ್ಯಾರೆಲ್ಸ್ ಗಳ ಗುರಿ ಹಾಕಿಕೊಳ್ಳಲಾಗಿದೆ. ಈ ಯೋಜನೆಯಿಂದ ಭಾರತದ ಕಚ್ಛಾ ತೈಲ ಮತ್ತು ಅನಿಲ ಉತ್ಪಾದನೆಗೆ ಶೇ.7ರಷ್ಟು ಕೊಡುಗೆ ನೀಡಲಿದೆ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ:Arjuna Award: ಭಾರತದ ವೇಗಿ ಮೊಹಮ್ಮದ್ ಶಮಿ ಸೇರಿದಂತೆ 26 ಆಟಗಾರರಿಗೆ ಅರ್ಜುನ ಪ್ರಶಸ್ತಿ
2016-17ರಲ್ಲಿ ಈ ಮಹತ್ವದ ಯೋಜನೆ ಆರಂಭಗೊಂಡಿದ್ದು, ಕೋವಿಡ್ ಸಂದರ್ಭದಲ್ಲಿ ಕಾಮಗಾರಿ ವಿಳಂಬವಾಗಿತ್ತು. ಇದೀಗ ಒಟ್ಟು 26 ಬಾವಿಗಳಲ್ಲಿ, ನಾಲ್ಕು ಬಾವಿಗಳು ಕಾರ್ಯನಿರ್ವಹಿಸುತ್ತಿದೆ. ಮೇ ಅಥವಾ ಜೂನ್ ಅಂತ್ಯದ ವೇಳೆಗೆ ಪ್ರತಿದಿನ 45,000 ಬ್ಯಾರೆಲ್ಸ್ ಉತ್ಪಾದಿಸಲು ಸಾಧ್ಯವಾಗಬಹುದು ಎಂಬುದು ನಮ್ಮ ನಿರೀಕ್ಷೆಯಾಗಿದೆ ಎಂದು ಕೇಂದ್ರ ಪೆಟ್ರೋಲಿಯಂ ಖಾತೆ ಸಚಿವ ಹರ್ದೀಪ್ ಪುರಿ ತಿಳಿಸಿದ್ದಾರೆ.
ನೈಸರ್ಗಿಕ ಸಂಪತ್ತುಗಳಾದ ಡೀಸೆಲ್, ಪೆಟ್ರೋಲ್, ಕೆರೋಸಿನ್ ಹಾಗೂ ಗ್ಯಾಸ್ (ನೈಸರ್ಗಿಕ ಅನಿಲ) ಕೃಷ್ಣಾ ಕಣಿವೆಯಲ್ಲಿ ಹೇರಳವಾಗಿದೆ ಎಂದು ಕೇಂದ್ರ ಸರ್ಕಾರ ಶೋಧನೆಗೆ ಮುಂದಾಗಿತ್ತು. 2024ರ 2024ರ ಜನವರಿ 7ರಂದು ಕೃಷ್ಣ-ಗೋದಾವರಿ ಆಳ ಸಮುದ್ರ ಬ್ಲಾಕ್ (98/2)(ಬಂಗಾಳ ಕೊಲ್ಲಿ)ನಿಂದ ಒಎನ್ ಜಿಸಿ ತನ್ನ ಎಫ್ ಪಿಎಸ್ ಒ ಗೆ ಮೊದಲ ತೈಲ ಹರಿವನ್ನು ಆರಂಭಿಸಿದ್ದು, 2ನೇ ಹಂತ ಶೀಘ್ರದಲ್ಲೇ ಪೂರ್ಣಗೊಳ್ಳುವ ಹಂತದಲ್ಲಿದೆ. ಅದೇ ರೀತಿ ತೈಲ ಮತ್ತು ಅನಿಲ ಉತ್ಪಾದನೆಯ 3ನೇ ಹಂತ ಕೂಡ ಪ್ರಗತಿಯಲ್ಲಿದ್ದು, 2024ರ ಜೂನ್ ನಲ್ಲಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ. 98/2 ಯೋಜನೆಯಿಂದ ಒಎನ್ ಜಿಸಿಯ ತೈಲ ಉತ್ಪಾದನೆಯಲ್ಲಿ ಶೇ.11ರಷ್ಟು ಮತ್ತು ಅನಿಲ ಉತ್ಪಾದನೆಯಲ್ಲಿ ಶೇ.15ರಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು ಒಎನ್ ಜಿಸಿ ತನ್ನ ಎಕ್ಸ್ ಪೋಸ್ಟ್ ನಲ್ಲಿ ತಿಳಿಸಿದೆ.