ನವದೆಹಲಿ: ಭಾರತದಲ್ಲಿ ಕಳೆದ 24ಗಂಟೆಗಳಲ್ಲಿ ಮಾರಣಾಂತಿಕ ಕೋವಿಡ್ 2ನೇ ಅಲೆ ದಾಖಲೆಯ 3.14 ಲಕ್ಷ ಪ್ರಕರಣ ಪತ್ತೆಯಾಗಿದ್ದು, ಒಟ್ಟು ಕೋವಿಡ್ ಪ್ರಕರಣಗಳ ಸಂಖ್ಯೆ 1.59 ಕೋಟಿಗೆ ಏರಿಕೆಯಾಗಿದೆ. ಒಂದೇ ದಿನದಲ್ಲಿ 2,104 ಮಂದಿ ಸಾವನ್ನಪ್ಪಿರುವುದಾಗಿ ಕೇಂದ್ರ ಆರೋಗ್ಯ ಸಚಿವಾಲಯ ಗುರುವಾರ(ಏಪ್ರಿಲ್ 22) ಬಿಡುಗಡೆ ಮಾಡಿರುವ ಅಂಕಿಅಂಶದಲ್ಲಿ ತಿಳಿಸಿದೆ.
ಕೋವಿಡ್ ತೀವ್ರಗತಿಯಲ್ಲಿ ಹೆಚ್ಚಳವಾಗುತ್ತಿರುವ ನಡುವೆ ದೇಶದಲ್ಲಿ ಮೆಡಿಕಲ್ ಆಕ್ಸಿಜನ್, ಆಸ್ಪತ್ರೆಗಳಲ್ಲಿ ಬೆಡ್ ಸಮಸ್ಯೆಗಳು ತಲೆದೋರಿದೆ. ಜಗತ್ತಿನಾದ್ಯಂತ ಮತ್ತೆ ಕೋವಿಡ್ ಸೋಂಕು ಹರಡುತ್ತಿದ್ದು, ಈವರೆಗೆ ಜಗತ್ತಿನಾದ್ಯಂತ ಕೋವಿಡ್ ಗೆ 1.84 ಲಕ್ಷ ಮಂದಿ ಸಾವನ್ನಪ್ಪಿದ್ದಾರೆ ಎಂದು ರಾಯಿಟರ್ಸ್ ನ್ಯೂಸ್ ಏಜೆನ್ಸಿ ವರದಿ ಮಾಡಿದೆ.
ಬೇಡಿಕೆಗೆ ತಕ್ಕಂತೆ ಆಕ್ಸಿಜನ್ ಸರಬರಾಜು ಮಾಡಲು ನಿರಂತರವಾಗಿ ನಿಗಾ ಇಡಲಾಗಿದೆ ಎಂದು ಕೇಂದ್ರ ಸರ್ಕಾರ ಭರವಸೆ ನೀಡಿದೆ. ಅಲ್ಲದೇ ಮಹಾರಾಷ್ಟ್ರ, ಮಧ್ಯಪ್ರದೇಶ, ಹರ್ಯಾಣ, ಪಂಜಾಬ್, ಆಂಧ್ರಪ್ರದೇಶ, ಉತ್ತರಾಖಂಡ್ ಮತ್ತು ದೆಹಲಿಗೆ ನಿಗದಿಪಡಿಸಿದ್ದ ಆಕ್ಸಿಜನ್ ಕೋಟಾವನ್ನು ಹೆಚ್ಚಳ ಮಾಡಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷ್ ವರ್ಧನ್ ಟ್ವೀಟ್ ಮೂಲಕ ತಿಳಿಸಿದ್ದಾರೆ.
ಏಪ್ರಿಲ್ 15ರಿಂದ ಪ್ರತಿದಿನ ನಿರಂತರವಾಗಿ 2 ಲಕ್ಷಕ್ಕಿಂತಲೂ ಅಧಿಕ ಕೋವಿಡ್ ಪ್ರಕರಣಗಳು ವರದಿಯಾಗುತ್ತಿದೆ. ಇದೀಗ ಭಾರತದಲ್ಲಿ ಎರಡನೇ ಅಲೆ ತೀವ್ರಗತಿಯಲ್ಲಿ ಹೆಚ್ಚಳವಾಗುತ್ತಿರುವುದಾಗಿ ತಿಳಿಸಿರುವ ಕೇಂದ್ರ ಸರ್ಕಾರ, ಕೋವಿಡ್ ಪ್ರಕರಣಗಳ ಸಂಖ್ಯೆ ಯಾವಾಗ ಇಳಿಕೆಯಾಗಲಿದೆ ಎಂಬುದು ತಿಳಿದಿಲ್ಲ ಎಂದು ತಜ್ಞರು ತಿಳಿಸಿದ್ದಾರೆ.
ಕಳೆದ 24ಗಂಟೆಯಲ್ಲಿ ಮಹಾರಾಷ್ಟ್ರದಲ್ಲಿ 67,468, ಉತ್ತರಪ್ರದೇಶದಲ್ಲಿ 33,106, ದೆಹಲಿಯಲ್ಲಿ 24,638, ಕರ್ನಾಟಕದಲ್ಲಿ 23,558 ಮತ್ತು ಕೇರಳದಲ್ಲಿ 22,414 ಕೋವಿಡ್ ಪ್ರಕರಣಗಳು ಪತ್ತೆಯಾಗಿರುವುದಾಗಿ ವರದಿ ತಿಳಿಸಿದೆ.