ಶ್ರೀರಂಗಪಟ್ಟಣ: ಗಣ್ಯ ವ್ಯಕ್ತಿಗಳ ಅಸ್ಥಿ ವಿಸರ್ಜನೆ ಮಾಡುವ ಸ್ಥಳ ಈಗ ಅನಾಚಾರ ಹಾಗೂ ವಾಮಾಚಾರ ನಡೆಸುವ ಸ್ಥಳವಾಗಿ ಮಾರ್ಪಡುವಂತಾಗುತ್ತಿದ್ದರೂ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಜಾಣ ಕುರುಡು ಪ್ರದರ್ಶಿಸುತ್ತಿದ್ದಾರೆ.
ಮಹಾತ್ಮಗಾಂಧಿ, ಮಾಜಿ ಪ್ರಧಾನಿಗಳಾದ ಜವಲಾಲ್ ನೆಹರು, ಇಂದಿರಾಗಾಂಧಿ, ರಾಜೀವ್ ಗಾಂಧಿ, ವಾಜಪೇಯಿ, ಮೇಲ್ಪಟ್ಟಿರುವ ಹಲವು ಮುಖ್ಯ ಮಂತ್ರಿಗಳ ಅಸ್ಥಿಗಳನ್ನು ವಿವಿಧ ಭಾಗದಿಂದ ಬಂದು ವಿಸರ್ಜನೆ ಮಾಡಲಾಗಿದೆ. ಮುಖ್ಯವಾಗಿ ಮಹಾತ್ಮಗಾಂಧಿ ಅಸ್ಥಿ ಬಿಟ್ಟ ಸ್ಥಳವಾಗಿರುವುದರಿಂದ ಈ ಸ್ಥಳಲ್ಲಿ ಗಾಂಧಿ ಸ್ಮಾರಕ ನಿರ್ಮಿಸಲು ಹಿಂದಿನ ಸರ್ಕಾರ ಮುಂದಾಗಿತ್ತು. ಗಾಂಧಿ ಚಿತಾಭಸ್ಮ ಬಿಟ್ಟಿರುವುದರಿಂದ ಈಗ ಕಾವೇರಿ ನದಿ ಪಕ್ಕದಲ್ಲೇ ಕಲ್ಲಿನಿಂದ ಕೆತ್ತಿರುವ ಗುರುತಿಗೆ ಒಂದು ಸ್ಮಾರಕ ನೆಡಲಾಗಿದೆ. ಆದ್ದರಿಂದ ಈ ಸ್ಥಳದ ಬಗ್ಗೆ ಎಲ್ಲರಿಗೂ ವಿಶೇಷವಾಗಿ ಗೌರವಿದೆ.
ವಾಮಾಚಾರದ ಸ್ಥಳ: ಈಗ ಆ ಸ್ಥಳಲ್ಲಿ ಕೋಳಿ ಬಲಿಕೊಟ್ಟು ವಾಮಾಚಾರದ ಪೂಜೆಗಳನ್ನು ಮಾಡಲಾಗುತ್ತಿದೆ. ಅಸ್ಥಿ ಬಿಟ್ಟ ಸ್ಥಳಕ್ಕೆ ಜಾಗ ಮಾಡಿ ಕೊಟ್ಟ ನಂತರ ಆಸ್ಥಳವನ್ನು ಕೆಲವರು ಮರಗಳ ಮರೆಯಲ್ಲಿ ಸೀರೆಗಳಿಂದ ಸುತ್ತಲೂ ಚೌಕಾಕಾರದಲ್ಲಿ ತೆರೆ ಕಟ್ಟಿ ಅದರ ಒಳಗೆ ವಾಮಾಚಾರದ ಪೂಜೆಯೋ ಅಥವಾ ಅನಾಚಾರದ ಸ್ಥಳವನ್ನಾಗಿ ಪರಿವರ್ತಿನೆ ಮಾಡಿಕೊಂಡು ಬಂದ ಜನರಿಗೆ ಪೂಜೆ ಸೇರಿದಂತೆ ಅನೈತಿಕ ಚಟುವಟಿಕೆಗಳಿಗೆ ಬಳಕೆ ಮಾಡಿಕೊಳ್ಳುವಂತೆ ಆಗುತ್ತಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಸಂಬಂಧ ಪಟ್ಟ ಅಧಿಕಾರಿಗಳು ಎಚ್ಚೆತ್ತು ಅಭಿವೃದ್ಧಿಗೆ ಪೂರಕವಾಗಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಕಾಮಗಾರಿಗೆ ಚಾಲನೆ ನೀಡಿದ್ದ ಅಂದಿನ ಡೀಸಿ:2013-14 ಸಾಲಿನಲ್ಲಿ ಪಶ್ಚಿಮವಾಹಿನಿ ಅಭಿವೃದ್ಧಿಗೆ ಅಂದಿನ ಜಿಲ್ಲಾಧಿಕಾರಿ ಕೃಷ್ಣಯ್ಯ ಅವರು ಕೋಟಿ ರೂ. ಅನುದಾನ ನೀಡಿ ಗಾಂಧೀಜಿಯವರ ನೆನಪು ಕುರಿತಾದ ದಿನಗಳಲ್ಲಿ ಅಭಿವೃದ್ಧಿಪಡಿಸಲಾಗಿತ್ತು. ಸ್ಮಾರಕಕ್ಕೆ ವಿಶೇಷ ಪೂಜಾ ಕಾರ್ಯಗಳು ನಡೆಯುತ್ತಿರುತ್ತವೆ. ಪ್ರಸ್ತುತ ಗಾಂಧಿ ಸ್ಮಾರಕ ನಿರ್ಮಾಣದ ಜೊತೆಗೆ ಪಶ್ಚಿಮವಾಹಿನಿ ಅಭಿವೃದ್ಧಿಗೆ ಜಿಲ್ಲಾಧಿಕಾರಿಗಳ ಅನುದಾನದಲ್ಲಿ ಸ್ಮಾರಕದ ಪಕ್ಕದಲ್ಲಿ ಮಕ್ಕಳ ಪಾರ್ಕ್, ಮಕ್ಕಳು ಆಟವಾಡಲು ಆಟೋಟಗಳ ಪರಿಕರ ನಿರ್ಮಾಣ, ಗಾಂಧಿ ಸ್ಮಾರಕ, ಸುತ್ತಲೂ ಸಿಮೆಂಟ್‌ನಿಂದ ಸಮತಟ್ಟು ಮಾಡಿ ಬಂದ ಪ್ರವಾಸಿಗರಿಗೆ ಕುಳಿತುಕೊಳ್ಳಲು ಆಸನದ ವ್ಯವಸ್ಥೆ, ನದಿಯ ದಡದಲ್ಲಿ ಸಣ್ಣ ಸಣ್ಣ ಸೇತುವೆ ನಿರ್ಮಾಣ, ರಸ್ತೆ ಅಭಿವೃದ್ಧಿ ಹೀಗೆ ಈ ಸ್ಥಳವನ್ನು ಅಭಿವೃದ್ಧಿ ಪಡಿಸಲು ಕೋಟಿ ರೂ. ಅನುದಾನ ಬಳಕೆ ಮಾಡಕೊಳ್ಳಲು ಸ್ವತಃ ಅಂದಿನ ಜಿಲ್ಲಾಧಿಕಾರಿ ಕಾಮಗಾರಿಗೆ ಚಾಲನೆ ನೀಡಿದ್ದರು.
ಸ್ವಚ್ಛತೆ ಎನ್ನುವುದು ಇಲ್ಲಿ ಮರೀಚಿಕೆ: ಈ ಸ್ಥಳ ಪುರಸಭಾ ವ್ಯಾಪ್ತಿಯಲ್ಲಿರುವುದರಿಂದ ಪುರಸಭೆ ಕಚೇರಿಯಿಂದ ಇಲ್ಲಿ ಸ್ವಚ್ಛತೆ ಕಾಪಾಡಲು ಅಸ್ಥಿ ಬಿಡಲು ಬಂದವರಿಂದ 100 ರೂ. ವಸೂಲಿ ಮಾಡಲಾಗುತ್ತಿದೆ. ಹಣ ಪಡೆಯುತ್ತಾರೆ ಆದರೆಯಾವುದೇ ಸ್ವತ್ಛತೆ ಇಲ್ಲದೆ ಪೂಜಾಕಾರ್ಯಗಳನ್ನು ಮಾತ್ರ ಮಾಡಿಸಿಕೊಂಡು ಇಲ್ಲಿನ ಸ್ಥಳವನ್ನು ಹಾಳು ಮಾಡುತ್ತಿದ್ದಾರೆ.
ಪಟ್ಟಣ ಪುರಸಭೆ ವ್ಯಾಪ್ತಿಯಲ್ಲಿ ಇರುವ ಪಶ್ಚಿಮವಾಹಿನಿ ವಿವಿಧ ಭಾಗಗಳಿಂದ ಈ ಸ್ಥಳಕ್ಕೆ ಬರುವುದು ಅಸ್ಥಿ ಬಿಡುವುದಕ್ಕೆ ಹೆಸರುವಾಸಿಯಾಗಿದೆ. ಸ್ಮಾರಕದ ಬಳಿ ಇರುವ ಮರಗಳ ಮಧ್ಯೆ ಸೀರೆ ಬಟ್ಟೆಯಿಂದ ತೆರೆಗಳನ್ನು ಕಟ್ಟಿರುವ ಬಗ್ಗೆ ಮಾಹಿತಿ ಬಂದಿಲ್ಲ. ಹಾಗೇನಾದರೂ ವಾಮಾಚಾರ ಹಾಗೂ ಅನಾಚಾರಕ್ಕೆ ಇಂತಹ ಕಾರ್ಯವೆಸಗಿದ್ದರೆ ಅಂಥವರ ವಿರುದ್ಧ ಕ್ರಮವಹಿಸಲಾಗುವುದು. ಪ್ರಸ್ತುತ ನಮ್ಮ ಇಲಾಖೆಯ ಸಿಬ್ಬಂದಿಯನ್ನು ಪ್ರತಿದಿನ ಅಲ್ಲೇ ಇರಿಸಲಾಗಿದೆ. ಸೀರೆ ಕಟ್ಟಿರುವ ತೆರೆಯನ್ನು ಈ ತಕ್ಷಣವೇ ತೆಗೆಸಲಾಗುವುದು.
–ಕೃಷ್ಣ, ಪುರಸಭಾ ಮುಖ್ಯಾಧಿಕಾರಿ
-ಗಂಜಾಂ ಮಂಜು