ಬೆಂಗಳೂರು: ಕೋಲಾರದ ವಿಸ್ಟ್ರಾನ್ ಕಂಪನಿಯು ಇನ್ನು ಕೆಲವೇ ದಿನಗಳಲ್ಲಿ ಉತ್ಪಾದನಾ ಕಾರ್ಯವನ್ನು ಪುನರಾರಂಭಿಸಲಿರುವುದು ಸಂತಸದ ವಿಷಯ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ತಿಳಿಸಿದರು.
ವಿಧಾನಸೌಧದಲ್ಲಿಂದು ಸಚಿವರನ್ನು ಭೇಟಿ ಮಾಡಿದ ವಿಸ್ಟ್ರಾನ್ ಕಂಪನಿಯ ವ್ಯವಸ್ಥಾಪಕ ನಿರ್ದೇಶದ ಸುದಿಪ್ತೋ ಗುಪ್ತಾ ನೇತೃತ್ವದ ತಂಡ, ಸಂಕಷ್ಟದ ಸಮಯದಲ್ಲಿ ರಾಜ್ಯ ಸರಕಾರದ ಅದರಲ್ಲೂ ಕೈಗಾರಿಕಾ ಇಲಾಖೆಯ ವತಿಯಿಂದ ದೊರೆತ ಸಹಾಯಕ್ಕೆ ಧನ್ಯವಾದಗಳನ್ನು ತಿಳಿಸಿದರು. ಇದೇ ವೇಳೆ ವಿಸ್ಟ್ರಾನ್ ನಲ್ಲಿ ಮರು ನೇಮಕಾತಿಯನ್ನು ಪ್ರಾರಂಭಿಸಲಾಗಿದೆ. ಅಲ್ಲದೆ ಕಂಪನಿಯಲ್ಲಿ ಉತ್ಪಾದನೆಗೆ ಬೇಕಾಗಿರುವ ಎಲ್ಲಾ ರೀತಿಯ ತಯಾರಿಗಳು ನಡೆದಿದ್ದು, ಉತ್ಪಾದನಾ ಕಾರ್ಯ ಸದ್ಯದಲ್ಲೇ ಪುನರಾರಂಭವಾಗಲಿದೆ ಎಂದು ಹೇಳಿದರು.
ನಂತರ ಮಾತನಾಡಿದ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವರ ಜಗದೀಶ್ ಶೆಟ್ಟರ್, ಅಂತಹ ಘಟನೆ ನಡೆದಿದ್ದು ಬಹಳ ವಿಷಾಧನೀಯ. ಆದರೆ, ಕೈಗಾರಿಕಾ ಸ್ನೇಹೀ ರಾಜ್ಯವಾಗಿರುವ ಕರ್ನಾಟಕ ರಾಜ್ಯ ಮೊದಲಿನಿಂದಲೂ ಕೈಗಾರಿಕೆಗಳಿಗೆ ಪೂರಕ ವಾತಾವರಣವನ್ನು ನಿರ್ಮಿಸಲು ಶ್ರಮಿಸುತ್ತಿದೆ. ಆ ಘಟನೆಯ ನಂತರ ಮರು ನೇಮಕಾತಿ ಪ್ರಕ್ರಿಯೆಯನ್ನು ಪ್ರಾರಂಭಗೊಳಿಸಿರುವುದು ಹಾಗೂ ಉತ್ಪಾದನೆ ಪುನರಾರಂಭಕ್ಕೆ ಸಿದ್ದತೆ ನಡೆಸಿರುವುದು ಸಂತಸದ ವಿಷಯವಾಗಿದೆ. ರಾಜ್ಯ ಸರಕಾರ ಹಾಗೂ ಕೈಗಾರಿಕಾ ಇಲಾಖೆಯ ವತಿಯಿಂದ ಎಲ್ಲಾ ರೀತಿಯ ಸಹಕಾರವನ್ನು ಮುಂದುವರೆಸಲಾಗುವುದು ಎಂದರು. ಅಲ್ಲದೆ, ರಾಜ್ಯದ ಇತರೆ ಜಿಲ್ಲೆಗಳಲ್ಲೂ ಉದ್ಯೋಗ ನೇಮಕಾತಿ ಮಾಡಿಕೊಳ್ಳುವ ಸಲಹೆಯನ್ನು ನೀಡಿದರು.
ಇದನ್ನೂ ಓದಿ: ಕಲ್ಯಾಣ ಕರ್ನಾಟಕ ಭಾಗಕ್ಕೆ 10 ಸಾವಿರ ಶಿಕ್ಷಕರ ನೇಮಕಕ್ಕೆ ಪ್ರಸ್ತಾವನೆ: ಸುರೇಶ್ ಕುಮಾರ್
ಸಭೆಯಲ್ಲಿ ಸರಕಾರದ ಅಪರ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತಾ, ಕೈಗಾರಿಕಾಭಿವೃದ್ದಿ ಆಯುಕ್ತೆ ಶ್ರೀಮತಿ ಗುಂಜನ್ ಕೃಷ್ಣ ಹಾಗೂ ವಿಸ್ಟ್ರಾನ್ ಕಂಪನಿಯ ಅಧಿಕಾರಿಗಳು ಪಾಲ್ಗೊಂಡಿದ್ದರು.