ಬೆಳಗಾವಿ : ನಾಳೆಯಿಂದ (ಡಿಸೆಂಬರ್ 13) ಸುವರ್ಣ ಸೌಧದಲ್ಲಿ ಚಳಿಗಾಲದ ಅಧಿವೇಶನ ಆರಂಭವಾಗಲಿದ್ದು, ಎಲ್ಲ ಶಾಸಕರು ಸಕ್ರಿಯವಾಗಿ ಚರ್ಚೆಯಲ್ಲಿ ಪಾಲ್ಗೊಳ್ಳಬೇಕೆಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಮನವಿ ಮಾಡಿಕೊಂಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿ, ಎಲ್ಲಾ ರೀತಿಯ ಸಿದ್ದತೆಗಳನ್ನ ಮಾಡಿಕೊಳ್ಳಲಾಗಿದೆ. ನಾಳೆ ಬೆಳಗ್ಗೆ 10.30 ಗೆ ಬಿಎಸ್ ಇ ಮೀಟಿಂಗ್ ನಡೆಯಲಿದ್ದು, ಎಲ್ಲಾ ಪಕ್ಷದ ಸದಸ್ಯರು ಭಾಗವಹಿಸಲಿದ್ದಾರೆ. ಸಭೆಯಲ್ಲಿ ಎಲ್ಲಾ ದಿನದ ಕಾರ್ಯ ಕಲಾಪದ ವಿವರಗಳನ್ನ ಚರ್ಚೆ ಚರ್ಚೆ ಮಾಡಿ ಕಾರ್ಯಕಲಾಪದ ವಿವರ ಪಡೆಯಲಾಗುತ್ತದೆ ಎಂದರು.
ಸರ್ಕಾರ ಇದುವರೆಗೂ ಯಾವ ಯಾವ ಬಿಲ್ ಮಂಡಿಸಲಿದೆ ಅನ್ನುವುದನ್ನು ಕಳುಹಿಸಿಲ್ಲ,ಬಿಲ್ ಕಳುಹಿಸುತ್ತೇವೆ ಅಂತ ಹೇಳಿದ್ದಾರೆ, ಇದುವರೆಗೂ ಬಂದಿಲ್ಲ,ನಾಳೆಯೊಳಗೆ ಕಳುಹಿಸುತ್ತೇವೆ ಅಂತ ಮೌಖಿಕವಾಗಿ ತಿಳಿಸಿದ್ದಾರೆ ಎಂದರು.
ಈ ಅಧಿವೇಶನದಲ್ಲಿ ಎರಡು ದಿನವಾದರೂ ಉತ್ತರ ಕರ್ನಾಟಕ ಭಾಗದ ವಿಷಯ ಚರ್ಚೆ ಮಾಡಬೇಕು ಅಂತ ಸಲಹೆಗಳು ಬಂದಿದೆ. ಬಿಎಸ್ ಇ ಮೀಟಿಂಗ್ ನಲ್ಲಿ ಇದರ ಬಗ್ಗೆ ಚರ್ಚೆ ಮಾಡುತ್ತೇವೆ. ಕೋವಿಡ್ ಹಿನ್ನೆಲೆಯಲ್ಲಿ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ತಗೆದುಕೊಂಡಿದ್ದೇವೆ.ಕಲಾಪ ಚನ್ನಾಗಿ ನಡೆಯುವ ಅಗತ್ಯತೆ ಇದೆ.ಇಷ್ಟೆಲ್ಲ ವ್ಯವಸ್ಥೆ ಮಾಡಿ ಕಲಾಪ ಚನ್ನಾಗಿ ನಡೆಯಲಿಲ್ಲ ಅಂದರೆ ಹೇಗೆ ? ಹೀಗಾಗಿ, ಸಕ್ರಿಯವಾಗಿ ಚರ್ಚೆಯಲ್ಲಿ ಪಾಲ್ಗೊಳ್ಳಿ ಎಂದು ಎಲ್ಲಾ ಶಾಸಕರಿಗೂ ನಾನು ಮನವಿ ಮಾಡಿಕೊಳ್ಳುತ್ತೇನೆ ಎಂದರು.
ನಿಯಮಾನುಸಾರ ಎಲ್ಲರಿಗೆ ಚರ್ಚೆಗೆ ಅವಕಾಶ ಮಾಡಿಕೊಡುತ್ತೇನೆ.ಬೆಳಗಾವಿಯಲ್ಲಿ ಅಧಿವೇಶನ ನಡೆಯುತ್ತೆ ಅಂತ ಗೈರಾಗುವುದು ಸರಿಯಲ್ಲ.ಬೆಳಗಾವಿ ಅಧಿವೇಶನದಲ್ಲಿ ಎಲ್ಲಾ ಶಾಸಕರು ಪಾಲ್ಗೊಳ್ಳಿ ಎಂದು ಮನವಿ ಮಾಡಿದರು.