ಹೊಸದಿಲ್ಲಿ: ಸಂಸತ್ತಿನ ಚಳಿಗಾಲದ ಅಧಿವೇಶನ ಬುಧವಾರ ಆರಂಭವಾಗಲಿದ್ದು, 17 ದಿನಗಳ ಕಾಲ ನಡೆಯಲಿದೆ. ಅಧಿವೇಶನದಲ್ಲಿ 16 ಹೊಸ ಮಸೂದೆಗಳು ಮತ್ತು ಹಳೆಯ 25 ಮಸೂದೆಗಳಿಗೆ ಒಪ್ಪಿಗೆ ಪಡೆಯುವ ಇರಾದೆಯನ್ನು ಕೇಂದ್ರ ಸರಕಾರ ಇರಿಸಿಕೊಂಡಿದೆ.
ಅಧಿವೇಶನದ ಹಿನ್ನೆಲೆಯಲ್ಲಿ ಮಂಗಳವಾರ ರಕ್ಷಣ ಸಚಿವ ರಾಜನಾಥ್ ಸಿಂಗ್ ನೇತೃತ್ವದಲ್ಲಿ ಸರ್ವಪಕ್ಷಗಳ ಸಭೆ ನಡೆಸಲಾಗಿದೆ. ಅಧಿವೇಶನ ಸಂದರ್ಭ ಚೀನದ ಗಡಿ ಕಿತಾಪತಿ, ಬೆಲೆ ಏರಿಕೆ ಬಗ್ಗೆ ಚರ್ಚೆಗೆ ಅವಕಾಶ ಮಾಡಿಕೊಡಬೇಕು ಎಂದು ವಿಪಕ್ಷಗಳು ಆಗ್ರಹಿಸಿವೆ.
ಮಹಿಳಾ ಮಸೂದೆಗೆ ಅನುಮೋದನೆ ಪಡೆಯುವಂತೆ ಬಿಜೆಡಿಯು, ಜನಸಂಖ್ಯಾ ನಿಯಂತ್ರಣ ಮಸೂದೆ ಜಾರಿಗೆ ತರುವಂತೆ ಶಿವಸೇನೆಯ ಶಿಂಧೆ ಬಣ ಆಗ್ರಹಿಸಿವೆ. ಇದಕ್ಕೆ ಉತ್ತರಿಸಿರುವ ಸರಕಾರ, ಸದನದ ನೀತಿಯಂತೆ ಕಲಾಪ ನಡೆಸಿಕೊಂಡು ಹೋಗಲಾಗುವುದು ಎಂದಿದೆ.
ಸದನವನ್ನು ಸುಸೂತ್ರವಾಗಿ ನಡೆಸಿಕೊಂಡು ಹೋಗಲು ಎಲ್ಲರೂ ಸಹಕಾರ ನೀಡಬೇಕು ಎಂದು ಸಭೆಯಲ್ಲಿ ರಾಜನಾಥ್ ಸಿಂಗ್ ಮನವಿ ಮಾಡಿದರು. ಸಭೆಯಲ್ಲಿ 30 ಪಕ್ಷಗಳ ನಾಯಕರು ಭಾಗಿಯಾಗಿದ್ದರು.