ಪಿಯಾಂಗ್‌ಚಾಂಗ್ (ದಕ್ಷಿಣ ಕೊರಿಯಾ): ಸ್ವೀಡನ್‌ನ ಚಾರ್ಲೋಟ್ ಕಲ್ಲಾ ಅವರು ವಿಂಟರ್ ಒಲಿಂಪಿಕ್ಸ್ ಕ್ರೀಡಾಕೂಟದ ಮೊದಲ ಚಿನ್ನದ ಪದಕ ಗೆದ್ದಿದ್ದಾರೆ. ಮಹಿಳಾ ವಿಭಾಗದ ಸ್ಕೀಯತ್ಲಾನ್‌ನಲ್ಲಿ ಸ್ಪರ್ಧಿಸಿದ್ದ ಕಲ್ಲಾ, ಸ್ಕೀಯತ್ಲಾನ್ ಚಾಂಪಿಯನ್ ನಾರ್ವೆಯ ಮ್ಯಾರಿಟ್ ಬೋರ್ಗನ್ ಅವರನ್ನು 7.8 ಸೆಂಕೆಂಡ್ ಅಂತರದಲ್ಲಿ ಹಿಂದಿಕ್ಕಿ ಚಿನ್ನದ ನಗು ಬೀರಿದರು.
ಬೆಳ್ಳಿಗೆ ತೃಪ್ತಿಪಟ್ಟರೂ ಬೋರ್ಗನ್ ಎದುರಾಳಿಗೆ ಪ್ರಬಲ ಸ್ಪರ್ಧೆಯೊಡ್ಡಿದರು. ವಿಂಟರ್ ಒಲಿಂಪಿಕ್ಸ್‌ನ ಪ್ರಮುಖ ಆಕರ್ಷಣೆಯಾಗಿರುವ 37ರ ಹರೆಯದ ಬೋರ್ಗನ್ ಈವರೆಗೆ ಒಟ್ಟು 11 ಪದಕಗಳನ್ನು ಜಯಿಸಿದ್ದಾರೆ.
40 ನಿಮಿಷ 44.9 ಸೆಕೆಂಡ್‌ಗಳಲ್ಲಿ 15 ಕಿ.ಮೀ. ಸ್ಕೀಯಿಂಗ್ ರೇಸ್ ಪೂರ್ಣಗೊಳಿಸಿದ ಕಲ್ಲಾ 3ನೇ ಒಲಿಂಪಿಕ್ ಚಿನ್ನ ತನ್ನದಾಗಿಸಿಕೊಂಡರೆ, ಫಿನ್‌ಲಾÂಂಡಿನ ಕ್ರಿಸ್ಟ ಪರ್ಮಕೋಸ್ಕಿ ಕಂಚು ಗೆದ್ದರು.
“ದೀರ್ಘ ಕಾಲದಿಂದ ನಾನು ಒಲಿಂಪಿಕ್ಸ್‌ನತ್ತ ಚಿತ್ತ ನೆಟ್ಟಿದ್ದರೂ ಈ ದಿನ ಯಾಕೋ ಸ್ವಲ್ಪ ಮುಜುಗರಕ್ಕೊಳಗಾದೆ. ಅಂತಿಮ ಗೆರೆ ತಲುಪಿದಾಗಲೂ ನಾನು ಹಿಂತಿರುಗಿ ನೋಡದೆ ಸ್ವಲ್ಪ ದೂರ ಮುಂದುವರಿದೆ’ ಎಂದು ಚಾಂಪಿಯನ್ ಕಲ್ಲಾ ಪ್ರತಿಕ್ರಿಯಿಸಿದರು.
2014ರಲ್ಲಿ ಕಲ್ಲಾ, ಬೋರ್ಗನ್ ಮತ್ತು ನಾರ್ವೆಯ ಹೈದಿ ವೆಂಗ್ ಇದೇ ಸ್ಪರ್ಧೆಗಾಗಿ ವಿಜಯದ ವೇದಿಕೆ ಹಂಚಿಕೊಂಡಿದ್ದರು. ಆಗ ಈ ಮೂವರ ಮಧ್ಯೆ 3.3 ಸೆಂಕೆಂಡ್ ಅಂತರ ಮಾತ್ರ ಇತ್ತು. ಆದರೆ ಈ ಸಾರಿ ಕಲ್ಲಾ ಇದಕ್ಕೆ ಅವಕಾಶ ನೀಡಲಿಲ್ಲ. 12.5 ಕಿ.ಮೀ. ರೇಸ್ ಮುಗಿಯುವಾಗಲೇ ಪ್ರತಿಸ್ಪರ್ಧಿಯಿಂದ ಸುಮಾರು 10 ಸೆಕೆಂಡ್‌ಗಳ ಅಂತರ ಕಾಯ್ದುಕೊಂಡಿದ್ದರು.