Advertisement
ಚಳಿಗಾಲಕ್ಕೆ ಮನುಷ್ಯ ಬೇಗ ಮನಸೋಲುತ್ತಾನೆ. ಆ ಮಂಜು, ಇಬ್ಬನಿ, ತಂಗಾಳಿಯ ಸುಖದ ಆಹ್ಲಾದವೇ ಚೆಂದ. ಮಡಿಕೇರಿ, ಊಟಿಯಂಥ ಊರುಗಳಿಗೆ ಚಳಿಯ ಸುಖ ಅನುಭವಿಸಲು ಪ್ರವಾಸಿಗರು ಹೋಗುವುದೂ ಇದೇ ಕಾರಣಕ್ಕಾಗಿಯೇ. ಮನುಷ್ಯ ಮಾತ್ರ ಅಲ್ಲ, ಪಕ್ಷಿಗಳಿಗೂ ಚಳಿಗಾಲ ಅಂದ್ರೆ ಪಂಚಪ್ರಾಣ. ಚಳಿಗಾಲಕ್ಕೆ ಸಾಕ್ಷಿಯಾಗಲು, ಅವು ವಿದೇಶಗಳಿಂದ ಹಾರಿಬರಲೂ ರೆಡಿ. ಅವಿಭಜಿತ ಧಾರವಾಡ ಜಿಲ್ಲೆಯಲ್ಲಿ (ಗದಗ, ಹಾವೇರಿ ಹಾಗೂ ಧಾರವಾಡ) ಬಹುತೇಕ ಎಲ್ಲ ಕೆರೆಗಳೂ ಈಗ ಪಕ್ಷಿಕಾಶಿಯಾಗಿ ಮಾರ್ಪಟ್ಟಿವೆ. ಕಳೆದ ಎರಡು ತಿಂಗಳಿಂದ ಇಲ್ಲಿ ಎಲ್ಲಿ ನೋಡಿದರಲ್ಲಿ ಬರೀ ಹಕ್ಕಿಗಳು; ವಿದೇಶಿ ಬಾನಾಡಿಗಳು.
Related Articles
Advertisement
ಬಾಗಲಕೋಟೆ ಮತ್ತು ವಿಜಯಪುರ ಗಡಿಯಲ್ಲಿ ಕೃಷ್ಣಾ ನದಿಗೆ ಕಟ್ಟಲಾದ ಕೊರ್ತಿ ಮತ್ತು ಕೊಲ್ಹಾರದ ಸೇತುವೆ ಅಕ್ಕಪಕ್ಕ ಸ್ಮಾಲರ್ ಫ್ಲೆಮಿಂಗೋಗಳು ಮೀನು ಹೆಕ್ಕುವ ಪರಿಯೇ ಸಮ್ಮೊಹನಕಾರಿ. ಉತ್ತರ ಕನ್ನಡ ಜಿಲ್ಲೆ ಮುಂಡಗೋಡ ಬಳಿಯ ಅತ್ತಿವೇರಿ ಪಕ್ಷಿ ಧಾಮದಲ್ಲಿಯೂ ಈ ಬಾರಿ ಸ್ಥಳೀಯ ವಲಸೆ ಹಕ್ಕಿಗಳ ಕಲರವ ಗಮನ ಸೆಳೆಯುತ್ತಿದೆ. ಬಣ್ಣದ ಕೊಕ್ಕರೆ, ತೆರೆದ ಕೊಕ್ಕಿನ ಬಕ, ಬಿಳಿ ಬಣ್ಣದ ಕಪ್ಪು ಕತ್ತಿನ ಕೊಕ್ಕರೆ ಹಾಗೂ ಕಪ್ಪು ಬಣ್ಣದ ಕೆಂಪು ತುರಾಯಿಯ ಕೊಕ್ಕರೆ ಬ್ಲಾಕ್ ಐಬಿಸ್‌ಗಳು ಇಲ್ಲಿ ನೀರುಕಾಗೆಗಳೊಂದಿಗೆ ರೆಕ್ಕೆ ಬಿಚ್ಚಿ, “ಯಾರ ರೆಕ್ಕೆ, ಯಾರದ್ದಕ್ಕಿಂತ ದೊಡ್ಡದು?’ ಎಂಬ ಸ್ಪರ್ಧೆಗಿಳಿದಿವೆ.
ಮನುಷ್ಯನಿಗೆ ಕೆಲವು ಪ್ರಶ್ನೆಗಳು: ಈ ಹಕ್ಕಿಗಳು ಬಿಡಾರ ಹೂಡಿರುವ ಕೆರೆಯಂಗಳನ್ನು ನಾವು ಹೇಗೆ ಕಾಪಾಡಿಕೊಂಡಿದ್ದೇವೆ? ಕೆರೆಯ ಅಂಗಳಗಳನ್ನು ನಿವೇಶನಗಳನ್ನಾಗಿಸುವರಿಗೆ; ಕೆರೆ-ಕುಂಟೆ, ಕಾಲುವೆ- ಹರಿ- ತೊರೆಗಳನ್ನು ಕಸ, ತ್ಯಾಜ್ಯ, ಹೊಲಸಿನಿಂದ ತುಂಬಿ, ಧುಮ್ಮಸ್ ಬಡಿದು ಕಾರ್ಖಾನೆಗಳನ್ನು ಎಬ್ಬಿಸುವ ಉದ್ದಿಮೆದಾರರಿಗೆ; ವಿಷಯುಕ್ತ ರಾಸಾಯನಿಕಗಳನ್ನು ಸದ್ದಿಲ್ಲದೆ, ಕೆರೆಗಳಿಗೆ ಹರಿಸಿ ಕೈತೊಳೆದುಕೊಳ್ಳುವ ಫ್ಯಾಕ್ಟರಿಮಂದಿಗೆ; ಒತ್ತುವರಿಯ ಕನಸು ಕಾಣುವ ಸಿರಿವಂತರಿಗೆ, ಹಕ್ಕಿಗಳ ಈ ಸೌಂದರ್ಯವೇ ಕಾಣಿಸುತ್ತಿಲ್ಲ ಎನ್ನುವುದು ನಿಜಕ್ಕೂ ದುಃಖಕರ.
ರಂಗನತಿಟ್ಟು ಮೀನೂಟ: ಕೇವಲ ಉತ್ತರ ಕರ್ನಾಟಕ ಮಾತ್ರವೇ ಅಲ್ಲ. ಕಾವೇರಿ ನದಿ ತೀರದ ರಂಗನತಿಟ್ಟು ಪಕ್ಷಿಧಾಮದಲ್ಲೂ ವಲಸೆ ಹಕ್ಕಿಗಳು, ಚಳಿಗೆ ಮೈಯ್ಯೊಡ್ಡಿ ಕುಳಿತಿವೆ. ಸೈಬೀರಿಯಾ, ಲ್ಯಾಟಿನ್ ಅಮೆರಿಕದಿಂದಲೂ ಇಲ್ಲಿಗೆ ಸಹಸ್ರಾರು ಪಕ್ಷಿಗಳು ಬರುತ್ತವೆ. ತಂದೆ- ತಾಯಿ, ಮೂರು ಮರಿ ಇರುವ 2000 ಪಕ್ಷಿಗಳ ಕುಟುಂಬಕ್ಕೆ ದಿನವೊಂದಕ್ಕೆ ಇಲ್ಲಿ 40- 60 ಕ್ವಿಂಟಲ್‌ಗಟ್ಟಲೆ ಮೀನುಗಳು ಆಹಾರವಾಗಿ ಬೇಕು. ಬಣ್ಣದ ನೀರ್ಕೋಳಿಗಳ ಸಂಖ್ಯೆಯಂತೂ ಇಲ್ಲಿ ಅಧಿಕವಿದ್ದು, ಇವುಗಳಿಗೂ ಮೀನೇ ಆಹಾರ. ನೀವೇ ಊಹಿಸಿ, ಬಕ ಪಕ್ಷಿ, ಹೆಜ್ಜಾರ್ಲೆ,
ಬೆಳ್ಳಕ್ಕಿ, ಫ್ಲೆಮಿಂಗೋಗಳ ಜತೆಗೆ ಗ್ರೇಟ್ ಸ್ಟೋನ್ ಪ್ಲೋವರ್‌ನಂಥ ವಿದೇಶಿ ಹಕ್ಕಿಗಳು- ಹೀಗೆ ಎಲ್ಲವಕ್ಕೂ ಒಟ್ಟು ಲೆಕ್ಕ ಹಾಕಿದರೆ, ಮೀನಿನ ಪ್ರಮಾಣ 500 ಕ್ವಿಂಟಲ್‌ಗಳಿಗಿಂತಲೂ ಹೆಚ್ಚು! ಒಂದು ಕಾಲದಲ್ಲಿ ಪಕ್ಷಿಗಳ ಈ ದೈನಂದಿನ ಬೇಡಿಕೆಯನ್ನು ಪೂರೈಸುವಷ್ಟು ನಮ್ಮ ಕೆರೆಗಳು ಸಮೃದ್ಧವಾಗಿದ್ದವು! ಭೀಮೇಶ್ವರ, ಮುತ್ತತ್ತಿ ಮತ್ತು ಸಂಗಮಗಳಿಗೆ ಅಮೆರಿಕ, ಬ್ರಿಟನ್, ಸ್ವೀಡನ್, ಸಿಂಗಾಪುರ, ಸ್ಕಾಟ್ಲೆಂಡ್, ಜಪಾನ್, ಜರ್ಮನಿ ಮುಂತಾದ ದೇಶಗಳಿಂದ ವರ್ಷವರ್ಷವೂ ತಂಡೋಪತಂಡವಾಗಿ ಹಕ್ಕಿಗಳು ಬಂದು ಬಿಡಾರ ಹೂಡುತ್ತವೆ. ಈ ಬಾರಿಯೂ ಬಂದಿಳಿದಿವೆ. ಹೀಗೆ ಬಂದ ಮೀನುಗಳಿಗೆ ಇಲ್ಲಿನ ಆಹಾರ, ಮಶೀರ್ ಮೀನುಗಳು.
ನಾವು, ನಮ್ಮ ಬಟ್ಟೆ- ವಾಹನಗಳನ್ನು ಶುದ್ಧವಾಗಿಟ್ಟುಕೊಳ್ಳಲು ಸುತ್ತಲಿನ ಪರಿಸರವನ್ನೇ ರಾಡಿ ಎಬ್ಬಿಸುತ್ತಿದ್ದೇವೆ. 40ಕ್ಕೂ ಹೆಚ್ಚು ಪ್ರಜಾತಿಯ ವಲಸೆ ಹಕ್ಕಿಗಳು ಬಂದಿಳಿಯುತ್ತಿದ್ದ ನವಿಲೂರು, ಕೆಲಗೇರಿ ಕೆರೆಯ ತರಿಭೂಮಿ ಇಂದು ಅಕ್ಷರಶಃ ನರಕವೇ ಆಗಿದೆ. ನಮಗಿಂತ ಮೊದಲೇ ಈ ಭೂಮಿಗೆ ಬಂದ ಅನೇಕ ಜೀವಿಗಳು ತಮ್ಮ ಪರಿಸರವನ್ನು ಶುಚಿಯಾಗಿಟ್ಟುಕೊಳ್ಳುತ್ತವೆ. ಆದರೆ, ಮನುಷ್ಯನಿಗೆ ಮಾತ್ರ ಅವುಗಳ ಬುದ್ಧಿ ಬಂದಿಲ್ಲ.-ಪ್ರೊ. ಗಂಗಾಧರ ಕಲ್ಲೂರ, ಪರಿಸರವಾದಿ, ಪಕ್ಷಿ ತಜ್ಞ * ಹರ್ಷವರ್ಧನ್ ವಿ. ಶೀಲವಂತ