ಕುಷ್ಟಗಿ: ಪೂರ್ವ ಯುರೋಫ್, ಮಧ್ಯ ಏಷ್ಯಾದ ಪರ್ವತ ಪ್ರದೇಶದ ಕೇಸರಿ ಮೈನಾ (ಕಬ್ಬಕ್ಕಿ) ಹಕ್ಕಿಗಳು ತಾಲೂಕಿಗೆ ವಲಸೆ ಬಂದಿವೆ. ಗ್ರಾಮೀಣ ಪ್ರದೇಶದಲ್ಲಿ ಕಬ್ಬಕ್ಕಿ ಎಂದು ಕರೆಯುವ ವಿದೇಶಿ ಹಕ್ಕಿಗಳ ಕಲರವ, ಹಾರಾಟ ಮನಮೋಹಕವೆನಿಸುತ್ತಿದೆ. ಈ ಹಕ್ಕಿಗಳ ಸಮೂಹ ಕುಷ್ಟಗಿ ತಾಲೂಕಿನ ಹೊಲಗಳಲ್ಲಿ ಬೆಳಗ್ಗೆ ಹಾಗೂ ಸಂಜೆ ಕಂಡುಬರುತ್ತದೆ. ಈ ವಿದೇಶಿ ಹಕ್ಕಿಗಳು ಬಾನಂಗಳದಲ್ಲಿ ಹಾರುತ್ತಿರುವ ದೃಶ್ಯ ಪಕ್ಷಿ ಪ್ರಿಯರನ್ನು ಸೆಳೆಯುತ್ತಿದೆ.
ಕೇಸರಿ ಮೈನಾ, ಗುಲಾಬಿ ಕಬ್ಬಕ್ಕಿ, ರೋಜಿ ಸ್ಟ್ರಾಲಿಂಗ್, ರೋಜಿ ಸ್ಪ್ರಾಲಿಂಗ್ ಎಂದು ಕರೆಯಲಾಗುವ ವಿದೇಶಿ ಹಕ್ಕಿ ದೇಶಿಯ ಗೊರವಂಕ ಹಕ್ಕಿಯನ್ನು ಹೋಲುತ್ತದೆ. 23 ಸೆಂ.ಮೀ. ಇವಿರುವ ಈ ಹಕ್ಕಿ ಎದೆ, ಬೆನ್ನು ಕೇಸರಿ ಬಣ್ಣ, ರೆಕ್ಕೆ ಬಾಲ, ತಲೆ ಹೊಳೆಯುವ ನೀಲಿಗಪ್ಪಿನ ಬಣ್ಣ ಹೊಂದಿರುತ್ತದೆ. ತಲೆ ಮೇಲೆ ಹಿಂದಕ್ಕೆ ಬಾಗಿರುವ ನೀಳ ಕರಿ ಜುಟ್ಟು ಇದೆ. ಹೆಣ್ಣು ಮತ್ತು ಗಂಡು ನೋಡಲು ಒಂದೇ ತರ ಇರುತ್ತವೆ. ಅತ್ತಿ, ಆಲ, ಗೋಣಿ ಮರಗಳು ಮತ್ತು ಲಂಟನಾ ಹಣ್ಣುಗಳನ್ನು ತಿನ್ನುತ್ತವೆ. ಹೂವಿನ ಮಕರಂಧ ಹೀರುವುದರಿಂದ ಪರಾಗ ಸ್ಪರ್ಶಕ್ಕೂ ಸಹಾಯ ಮಾಡುತ್ತವೆ. ಈ ಹಕ್ಕಿ ದಕ್ಷಿಣ ಭಾರತದಲ್ಲಿ ಕಂಡುಬರುವುದು ಕಡಿಮೆ. ಭಾರತಕ್ಕೆ ಚಳಿಗಾಲದ ಪ್ರಾಂಭಕ್ಕೆ ಬಂದು ಜನವರಿ, ಫೆಬ್ರವರಿ ವರೆಗೂ ಇರುತ್ತವೆ.
ಪೂರ್ವ ಯುರೋಪಿನ ಫ್ರಾನ್ಸ್, ಐರ್ಲ್ಯಾಂಡ್, ಇಂಗ್ಲೆಂಡ್ ಮತ್ತು ಮದ್ಯ ಏಷ್ಯಾದ ಪರ್ವತ ತಪ್ಪಲುಗಳಲ್ಲಿ ಗೂಡು ಕಟ್ಟಿ ಮರಿ ಮಾಡುತ್ತವೆ. ಚಳಿಗಾದಲ್ಲಿ ಭಾರತ ಮತ್ತು ಪಾಕಿಸ್ತಾನಕ್ಕೆ ಬರುವ ಗುಲಾಬಿ ಕಬ್ಬಕ್ಕಿ, ಬೇಸಿಗೆಯನ್ನು ಅಪಘಾನಿಸ್ತಾದಲ್ಲಿ ಕಳೆಯುತ್ತವೆ. ಕಬ್ಬಕ್ಕಿ ಗಲಾಟೆ ಸ್ವಭಾವದ ಹಕ್ಕಿಗಳಾಗಿದ್ದು, ಸಮೂಹವಾಗಿ ವಾಸಿಸುವ ಇವು ಐನೂರಕ್ಕೂ ಅಧಿ ಕ ಸಂಖ್ಯೆಯಲ್ಲಿ ಹಿಂಡು ಹಿಂಡಾಗಿ ಹಾರುತ್ತವೆ. ಗಿಡದಲ್ಲಿ ಕುಳಿತಾಗ ಸದಾ ಕೂಗುತ್ತವೆ. ಇವು ಪೈರಿನ ಮೇಲೆ ದಾಳಿ ಇಡುತ್ತಿವೆ. ತೆನೆಯಲ್ಲಿ ಕಾಳು ತಿನ್ನುವ ಜೊತೆಗೆ ಕೀಟಗಳನ್ನು ತಿನ್ನುವುದರಿಂದ ರೈತರು ಇದರಿಂದಾಗುವ ಹಾನಿ ಸಹಿಸಿಕೊಳ್ಳುವುದುಂಟು.
-ಮಂಜುನಾಥ ಮಹಾಲಿಂಗಪುರ