ಬೆಳಗಾವಿ: ರಾಜ್ಯದಲ್ಲಿ ತೀವ್ರ ಬರ ಪರಿಸ್ಥಿತಿ ಕಾರಣಕ್ಕೆ ಬೆಳೆ ನಾಶದಿಂದ ಸಂಕಷ್ಟಕ್ಕೆ ಒಳಗಾಗಿರುವ ರೈತರಿಗೆ ಈಗಾಗಲೇ ಸರಕಾರ ಘೋಷಿಸಿರುವ 2 ಸಾವಿರ ರೂ. ವರೆಗಿನ ಮೊದಲ ಹಂತದ ಪರಿಹಾರವನ್ನು ಮುಂದಿನ ವಾರದೊಳಗೆ ವಿತರಿಸಲು ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚಿಸಿದರು.
ಸರಕಾರದ ಅಪರ ಮುಖ್ಯ ಕಾರ್ಯದರ್ಶಿಗಳು, ಪ್ರಧಾನ ಕಾರ್ಯದರ್ಶಿಗಳು ಹಾಗೂ ಕಾರ್ಯದರ್ಶಿಗಳ ಸಭೆ ನಡೆಸಿ ಎಲ್ಲರ ಕಾರ್ಯಕ್ಷಮತೆಯನ್ನು ಮೌಲ್ಯಮಾಪನ ಮಾಡಿ ಅಗತ್ಯ ಸಲಹೆ ಮತ್ತು ಸೂಚನೆಗಳನ್ನು ನೀಡಿದರು.
ರಾಜ್ಯದಲ್ಲಿ ತಲೆದೋರಿರುವ ತೀವ್ರ ಬರಪರಿಸ್ಥಿತಿಯಿಂದಾಗಿ ಅಧಿಕಾರಿಗಳು ಮತ್ತಷ್ಟು ಯುದ್ದೋಪಾದಿಯಲ್ಲಿ ಕೆಲಸ ಮುಂದುವರಿಸಬೇಕು.
ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಜಿಲ್ಲೆ ಗಳಿಗೆ ಭೇಟಿ ನೀಡಿರುವ, ಕುರಿತಾದ ಸಮಗ್ರ ಮಾಹಿತಿಯನ್ನು ಜಿಲ್ಲಾ ಉಸ್ತುವಾರಿ ಸಚಿವರಿಗೆ ಅಂಕಿ-ಅಂಶಗಳ ಸಹಿತ ಒದಗಿಸಬೇಕು ಎಂದು ಸೂಚನೆ ನೀಡಿದರು. ರೈತರಿಗೆ ಮೊದಲ ಹಂತದಲ್ಲಿ 2,000 ರೂ. ವರೆಗೆ ಪರಿಹಾರ ಘೋಷಿಸಲಾಗಿದ್ದು, ಇದನ್ನು ತ್ವರಿತವಾಗಿ ವಿತರಿಸಲು ಮಾರ್ಗಸೂಚಿಗಳನ್ನು ರೂಪಿಸಿ, ಡಿ.ಬಿ.ಟಿ. ಮಾಡಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.