Advertisement
ಬದಲಾದ ರಾಜಕೀಯ ಬೆಳವಣಿಗೆಯಲ್ಲಿ ರಾಜರಾಜೇಶ್ವರಿನಗರ ಕ್ಷೇತ್ರದಲ್ಲಿ ಮೈತ್ರಿ ಸರ್ಕಾರದ ಒಮ್ಮತದ ಅಭ್ಯರ್ಥಿ ಸ್ಪರ್ಧಿಸಬೇಕೇ ಅಥವಾ ಎರಡೂ ಪಕ್ಷಗಳ ಅಭ್ಯರ್ಥಿಗಳು ಗೆಲುವಿಗಾಗಿ ಪೈಪೋಟಿ ನಡೆಸಬೇಕೆ ಎಂಬ ಬಗ್ಗೆ ಉಭಯ ಪಕ್ಷಗಳ ಮುಖಂಡರಲ್ಲೇ ಇನ್ನೂ ಒಮ್ಮತ ಮೂಡಿಲ್ಲ. ಚುನಾವಣೆಯಲ್ಲಿ ತಟಸ್ಥರಾಗಬೇಕೆಂಬ ಮನವೊಲಿಕೆ ಮಾತುಗಳಿಗೆ ಕಾಂಗ್ರೆಸ್ ಅಭ್ಯರ್ಥಿ ಮುನಿರತ್ನ ಬಗ್ಗದ ಕಾರಣ ಮೈತ್ರಿ ಪಕ್ಷಗಳು ಸಂಕಟಕ್ಕೆ ಸಿಲುಕಿದಂತಾಗಿವೆ.
Related Articles
Advertisement
ಈನಡುವೆ ಒಮ್ಮೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿರುವ ರಾಮಚಂದ್ರ, ಆರ್.ಆರ್.ನಗರ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ತಟಸ್ಥವಾಗಿ ಉಳಿಯುವಂತೆ ಮಾಡುವ ನಿಟ್ಟಿನಲ್ಲಿ ಆ ಪಕ್ಷದ ಮುಖಂಡರ ಜತೆ ಚರ್ಚಿಸಲು ಮನವಿ ಕೂಡ ಮಾಡಿದ್ದಾರೆ. ಜತೆಗೆ ಎರಡೂ ಪಕ್ಷಗಳು ಒಮ್ಮತದ ಅಭ್ಯರ್ಥಿಯಾಗಿ ತಮ್ಮನ್ನೇ ಬೆಂಬಲಿಸುತ್ತಾರೆ ಎಂಬ ವಿಶ್ವಾಸದಲ್ಲಿ ರಾಮಚಂದ್ರ ಇದ್ದಾರೆ.
ಕಾಂಗ್ರೆಸ್, ಜೆಡಿಎಸ್ ಅಭ್ಯರ್ಥಿಗಳ ಸ್ಪರ್ಧೆ ಬಗ್ಗೆ ಅನಿಶ್ಚಿತತೆ ಮುಂದುವರಿದಿರುವ ಬೆನ್ನಲ್ಲೇ ಬಿಜೆಪಿಯು ಗೆಲುವಿಗೆ ತೀವ್ರ ಕಸರತ್ತು ನಡೆಸಿದ್ದು, ಬಿರುಸಿನ ಪ್ರಚಾರದಲ್ಲಿ ತೊಡಗಿದೆ. ಅಭ್ಯರ್ಥಿ ತುಳಸಿ ಮುನಿರಾಜುಗೌಡ ಮತದಾರರನ್ನು ಸೆಳೆಯುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಜತೆಗೆ ಬಿಜೆಪಿ ನಾಯಕರ ದಂಡು ಕೂಡ ಪ್ರಚಾರಕ್ಕಿಳಿದಿದೆ.
ಬಿಜೆಪಿಯಲ್ಲಿ ಅತೃಪ್ತಿ: ಜಯನಗರ ಕ್ಷೇತ್ರದಲ್ಲಿ ತಮ್ಮಲ್ಲೇ ಒಬ್ಬರಿಗೆ ಟಿಕೆಟ್ ನೀಡಿದರೆ ಎಲ್ಲರೂ ಸಂಘಟಿತರಾಗಿ ಗೆಲುವಿಗೆ ಶ್ರಮಿಸುವುದಾಗಿ ಪಾಲಿಕೆ ಸದಸ್ಯ ಎನ್.ನಾಗರಾಜ್, ಮಾಜಿ ಮೇಯರ್ ಎಸ್.ಕೆ.ನಟರಾಜ್, ಪಾಲಿಕೆ ಮಾಜಿ ಸದಸ್ಯ ಸಿ.ಕೆ.ರಾಮಮೂರ್ತಿ ಪಕ್ಷದ ನಾಯಕರಲ್ಲಿ ಮನವಿ ಮಾಡಿದ್ದರು. ಆದರೆ ಬಿಜೆಪಿಯು ಪ್ರಹ್ಲಾದ್‌ಬಾಬು ಅವರನ್ನು ಕಣಕ್ಕಿಳಿಸಿದೆ. ಇದರಿಂದ ಮೂರು ಮಂದಿ ತೀವ್ರ ಅಸಮಾಧಾನಗೊಂಡಿದ್ದು, ಎರಡು ದಿನಗಳಿಂದ ಪಕ್ಷದ ಸಂಪರ್ಕಕ್ಕೂ ಸಿಗದೆ ಪಕ್ಷದ ಚಟುವಟಿಕೆಗಳಿಂದ ದೂರ ಉಳಿದಿದ್ದಾರೆ.
ಇದು ಬಿಜೆಪಿ ನಾಯಕರಿಗೆ ತಲೆಬಿಸಿ ತಂದಿದೆ. ಎರಡು ದಿನಗಳಿಂದ ಪ್ರಹ್ಲಾದ್‌ಬಾಬು ಅವರು ಉದ್ಯಾನ, ಸಾರ್ವಜನಿಕ ಸ್ಥಳ ಸೇರಿದಂತೆ ಇತರೆಡೆ ಮತ ಯಾಚನೆ ಆರಂಭಿಸಿದ್ದಾರೆ. ಶುಕ್ರವಾರ ಬಿಜೆಪಿ ನಾಯಕರೊಂದಿಗೆ ತೆರಳಿ ನಾಮಪತ್ರ ಸಲ್ಲಿಸಲಿದ್ದಾರೆ. ಜಯನಗರ ಕ್ಷೇತ್ರದ ಚುನಾವಣೆಯ ಉಸ್ತುವಾರಿಯನ್ನು ಕೇಂದ್ರ ಸಚಿವ ಅನಂತ ಕುಮಾರ್ ಅವರಿಗೆ ಪಕ್ಷ ವಹಿಸಿದೆ. ಹಾಗಾಗಿ ಸದ್ಯದಲ್ಲೇ ಅನಂತಕುಮಾರ್ ಅವರು ಅತೃಪ್ತ ಮುಖಂಡರೊಂದಿಗೆ ಚರ್ಚಿಸಿ ಪ್ರಚಾರ ಕಾರ್ಯಕ್ಕೆ ಕರೆ ತರುತ್ತಾರೆ ಎಂಬ ವಿಶ್ವಾಸದಲ್ಲಿ ಕಾರ್ಯಕರ್ತರಿದ್ದಾರೆ.
ಒಟ್ಟಾರೆ ಸಂಖ್ಯಾಬಲದ ಆಧಾರದ ಮೇಲೆಯೇ ರಚನೆಯಾಗಿರುವ ಸಮ್ಮಿಶ್ರ ಸರ್ಕಾರದ ಪಕ್ಷಗಳು ಹಾಗೂ ಅಗತ್ಯ ಸದಸ್ಯ ಬಲದ ಕೊರತೆ ಕಾರಣಕ್ಕೆ ಸರ್ಕಾರ ಉಳಿಸಿಕೊಳ್ಳಲಾಗದ ಬಿಜೆಪಿಗೂ ಈ ಎರಡೂ ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವುದು ಮುಖ್ಯವಾಗಿದೆ. ಹಾಗಾಗಿ ಎರಡೂ ಕಡೆ ಚುನಾವಣಾ ಕಣ ರಂಗೇರುತ್ತಿದೆ.
ಮೈತ್ರಿ ಸರ್ಕಾರಕ್ಕೆ ಪ್ರತಿಷ್ಠೆ: ಮೈತ್ರಿ ಸರ್ಕಾರಕ್ಕೆ ಪ್ರತಿಷ್ಠೆಯಾಗಿರುವ ರಾಜರಾಜೇಶ್ವರಿನಗರ ಕ್ಷೇತ್ರದ ಚುನಾವಣೆಯಲ್ಲಿ ಒಮ್ಮತದ ಒಬ್ಬ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಸಂಬಂಧ ಸ್ವತಃ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅಧ್ಯಕ್ಷತೆಯಲ್ಲಿ ಗುರುವಾರ ಸಂಜೆ ಗೃಹ ಕಚೇರಿ “ಕೃಷ್ಣಾ’ದಲ್ಲಿ ನಡೆದ ಸಂಧಾನ ಸಭೆಯೂ ವಿಫಲವಾಗಿದೆ.
ಡಿ.ಕೆ.ಶಿವಕುಮಾರ್, ಡಿ.ಕೆ.ಸುರೇಶ್, ಮುನಿರತ್ನ, ಜೆಡಿಎಸ್ ಅಭ್ಯರ್ಥಿ ರಾಮಚಂದ್ರ, ಜೆಡಿಎಸ್ ನಗರ ಘಟಕದ ಅಧ್ಯಕ್ಷ ಆರ್.ಪ್ರಕಾಶ್ ಇತರರು ಚರ್ಚೆ ನಡೆಸಿದರೂ ಪ್ರಯೋಜನವಾಗಲಿಲ್ಲ. ಸಭೆಯ ಬಳಿಕ ಪ್ರತಿಕ್ರಿಯಿಸಿದ ಎಚ್.ಡಿ.ಕುಮಾರಸ್ವಾಮಿ, ಜೆಡಿಎಸ್, ಕಾಂಗ್ರೆಸ್ ಅಭ್ಯರ್ಥಿಗಳ ಅಭಿಪ್ರಾಯ ಪಡೆಯಲಾಗಿದ್ದು, ಶುಕ್ರವಾರ ವಿಶ್ವಾಸಮತ ಯಾಚನೆ ಪ್ರಕ್ರಿಯೆ ಮುಗಿದ ಬಳಿಕ ಸೂಕ್ತ ನಿರ್ಧಾರ ಕೈಗೊಳ್ಳುತ್ತೇನೆ ಎಂದು ಹೇಳಿದ್ದಾರೆ.
ಇನ್ನೊಂದೆಡೆ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಒಮ್ಮತದ ಒಬ್ಬ ಅಭ್ಯರ್ಥಿ ಸ್ಪರ್ಧಿಸುವ ಬಗ್ಗೆ ಚರ್ಚೆ ನಡೆದಿದೆ. ಮತದಾನದ ದಿನ ಸಮೀಪದಲ್ಲಿರುವುದರಿಂದ ಈ ಹಂತದಲ್ಲಿ ಯಾವುದೇ ಪಕ್ಷದ ಅಭ್ಯರ್ಥಿ ತಟಸ್ಥರಾಗುವುದಕ್ಕಿಂತ ಪರಸ್ಪರ ಸ್ಪರ್ಧಿಸುವುದೇ ಸೂಕ್ತ ಎಂಬ ಅಭಿಪ್ರಾಯವನ್ನೂ ವ್ಯಕ್ತಪಡಿಸಿದ್ದೇನೆ. ಶುಕ್ರವಾರ ಮತ್ತೂಮ್ಮೆ ಮುಖ್ಯಮಂತ್ರಿಗಳ ಸಮ್ಮುಖದಲ್ಲಿ ಚರ್ಚಿಸಿ ನಿರ್ಧರಿಸಲಾಗುವುದು ಎಂದು ತಿಳಿಸಿದ್ದಾರೆ.