ಮಂಗಳೂರು: ರಾಜ್ಯಕ್ಕೆ ಹಿಂಗಾರು ಪ್ರವೇಶಿಸಿ ಒಂದೂವರೆ ತಿಂಗಳು ಕಳೆಯುತ್ತಿದ್ದು, ಕರಾವಳಿ ಭಾಗದಲ್ಲಿ ನಿಧಾನವಾಗಿ ಆರಂಭ ಪಡೆದುಕೊಳ್ಳುತ್ತಿದೆ. ರಾಜ್ಯದ ಇತರ ಜಿಲ್ಲೆಗೆ ಹೋಲಿಸಿದಾಗ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಾತ್ರ ಸದ್ಯಕ್ಕೆ ಗರಿಷ್ಠ ಹಿಂಗಾರು ಮಳೆ ಸುರಿದಿದೆ.
ದಕ್ಷಿಣ ಒಳನಾಡಿನಲ್ಲಿ ಸದ್ಯ ಶೇ. 30, ಉತ್ತರ ಒಳನಾಡಿನಲ್ಲಿ ಶೇ. 74, ಮಲೆನಾಡಿನಲ್ಲಿ ಶೇ. 17ರಷ್ಟು ಮಳೆ ಕೊರತೆ ಇದೆ. ಆದರೆ ಕರಾವಳಿ ಭಾಗದಲ್ಲಿ ಶೇ. 6ರಷ್ಟು ವಾಡಿಕೆಗಿಂತ ಹೆಚ್ಚಿನ ಮಳೆಯಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಾತ್ರ ವಾಡಿಕೆಗಿಂತ ಶೇ. 46ರಷ್ಟು ಮಳೆ ಹೆಚ್ಚಾಗಿದೆ. ಉಡುಪಿಯಲ್ಲಿ ಶೇ. 1 ಮತ್ತು ಉತ್ತರ ಕನ್ನಡ ಜಿಲ್ಲೆಯಲ್ಲಿ ಶೇ. 29ರಷ್ಟು ಮಳೆ ಕೊರತೆ ಇದೆ. ಕರಾವಳಿಯಲ್ಲಿ ಒಟ್ಟು ಶೇ. 6ರಷ್ಟು ಮಳೆ ಏರಿಕೆಯಾಗಿದೆ.
ಕರಾವಳಿ ಭಾಗದಲ್ಲಿ ಈ ಬಾರಿ ಹಿಂಗಾರು ಆರಂಭ ಉತ್ತಮವಾಗಿರಲಿಲ್ಲ. ಮುಂಗಾರಿ ನಂತೆಯೇ ಕ್ಷೀಣಿಸಿತ್ತು. ಕೆಲ ವಾರಗಳ ಹಿಂದೆ ಅರಬಿ ಸಮುದ್ರದಲ್ಲಿ ನಿಮ್ನ ಇತ್ತಡ ನಿರ್ಮಾಣಗೊಂಡು ಉತ್ತಮ ಮಳೆ ಸುರಿದಿತ್ತು. ಮಳೆ ಪ್ರಮಾಣ ತುಸು ಏರಿಕೆಗೆ ಇದೇ ಕಾರಣ. ಬಳಿಕ ಮಳೆ ಕ್ಷೀಣಗೊಂಡಿದೆ. ಅಕ್ಟೋಬರ್ ಎರಡನೇ ವಾರದಲ್ಲಿ ಕರಾವಳಿಯಲ್ಲಿ ಹಿಂಗಾರು ಆರಂಭ ಪಡೆದುಕೊಂಡಿದ್ದು, ಈ ಬಾರಿ ಉತ್ತಮ ಮಳೆಯ ನಿರೀಕ್ಷೆ ಇದೆ.
ಮುಂಗಾರು ಅವಧಿಯಲ್ಲಿ ಮಳೆ ಸರಾಸರಿಗಿಂತ ಕಡಿಮೆ ಬಂದಾಗ ವಾತಾವರಣದಲ್ಲಿ, ಭೂಮಿಯಲ್ಲಿ ನೀರಿನ ಅಂಶ ಕಡಿಮೆ ಇರುತ್ತದೆ. ಆಗ ಉಷ್ಣಾಂಶ ತನ್ನಿಂತಾನೇ ಏರಿಕೆಯಾಗುತ್ತದೆ. ಆ ವೇಳೆ ವಾತಾವರಣದಲ್ಲಿ ಒತ್ತಡ ಕಡಿಮೆಯಾಗುತ್ತದೆ. ಆಗ ಸುತ್ತಲಿನ ಮೋಡ ಚಲನೆಯಿಂದಾಗಿ ಮಳೆಯಾಗುತ್ತದೆ. ಇದೇ ಕಾರಣಕ್ಕೆ ಮುಂಗಾರು ಕಡಿಮೆಯಾದ ವರ್ಷಗಳಲ್ಲಿ ಹಿಂಗಾರು ಜಾಸ್ತಿ ಇರುತ್ತದೆ. ಸದ್ಯ ಕರಾವಳಿಯಲ್ಲಿ ಸದ್ಯ ಬಿಸಿಲು, ಸೆಕೆ ಮತ್ತು ಬೆಳಗ್ಗೆ ಚಳಿಯ ವಾತಾವರಣ ಇದೆ. ಮುಂದಿನ ದಿನಗಳಲ್ಲಿ ಮಳೆಯಾಗುವ ನಿರೀಕ್ಷೆಯಲ್ಲಿ ಕರಾವಳಿಗರು ಇದ್ದಾರೆ.
261 ಮಿ.ಮೀ. ವಾಡಿಕೆ ಮಳೆ
ಕರಾವಳಿ ಭಾದಲ್ಲಿ ಹಿಂಗಾರು ಅವಧಿಯಲ್ಲಿ 261 ಮಿ.ಮೀ. ವಾಡಿಕೆ ಮಳೆಯಾಗಬೇಕು. ಆದರೆ ಕಳೆದ ವರ್ಷ ವಾಡಿಕೆಗಿಂತ ಕಡಿಮೆಯಿತ್ತು. 2016ರಲ್ಲಿ ಶೇ. -57, 2017ರಲ್ಲಿ ಶೇ. -25, 2018ರಲ್ಲಿ ಶೇ. -28, 2019ರಲ್ಲಿ ಶೇ. 124. 2020ರಲ್ಲಿ ಶೇ. 27, 2021ರಲ್ಲಿ ಶೇ. 122 ಮತ್ತು 2022 ಶೇ. -14 ರಷ್ಟು ಮಳೆಯಾಗಿತ್ತು.