ಇಂದಿನ ಈ ಸಮಾಜದಲ್ಲಿ ಗಾಳಿ ಸುದ್ದಿಗಳಿಂದ ಮುಕ್ತಿ ಪಡೆಯುವುದು ಹೇಗೆ? ಅಂದ ಹಾಗೆ ಗಾಳಿ ಸುದ್ದಿಗಳು ಹುಟ್ಟಿಕೊಳ್ಳುವುದು ಎಲ್ಲಿ? ಹೇಗೆ? ಎನ್ನುವುದು ದೊಡ್ಡ ಪ್ರಶ್ನೆಯಾಗಿದೆ. ಗಾಳಿಸುದ್ದಿಗಳ ಪರಿಣಾಮದಿಂದ ಏನೆಲ್ಲಾ ಅನಾಹುತಗಳಿವೆ ಎನ್ನುವುದು ಈ ಗಾಳಿ ಸುದ್ದಿ ಹುಟ್ಟಿಸುವವರಿಗೆ ತಿಳಿದಿರಬೇಕು.
ಯಾರ ಮನೆಯಲ್ಲಿ ಹೆಣ್ಣುಮಕ್ಕಳು ಮದುವೆಯ ವಯಸ್ಸಿಗೆ ಬಂದಿರುತ್ತಾರೊ ಅವರಿಗೆ ಇದು ತಪ್ಪಿದ್ದಲ್ಲ. ಎಲ್ಲಿಯವರೆಗೆ ಎಂದರೆ ದಾರಿಯಲ್ಲಿ ನಿಂತು ಪರಿಚಯಸ್ಥರ ಬಳಿ ಮಾತನಾಡಿದರೂ ಜನರಿಗೆ ಅನುಮಾನ. ರಾತ್ರಿಯ ವೇಳೆಯಲ್ಲಿ ದಾರಿಯಲ್ಲಿ ಹೋಗುವ ಬದಲಾಗಿ ಬೇಲಿ ಹಾರಿ ಯಾರದೋ ಮನೆಗೆ ಹೋಗುವವರು ಎಲ್ಲಿಗೆ ಹೋದ್ರೂ ಯಾರು ಹೋದದ್ದು ಅಂತ ಪ್ರಶ್ನೆ ಬಂದರೆ, “ಅವರ ಮನೇಲಿ ಹುಡುಗಿ ಇದ್ದಾಳೆ. ಅವಳತ್ರ ಮಾತಾಡೋಕೆ ಇರಬಹುದು’ ಅಂತ ಸುಳ್ಳು ಸುದ್ದಿಗಳನ್ನು ಹಬ್ಬಿಸುವವರಿಗೆ ತನ್ನ ಮನೆಯಲ್ಲಿ ಇರುವ ಹುಡುಗಿಯರಿದ್ದರೂ ಅವರ ಬಗ್ಗೆ ಇಲ್ಲದ ಆತಂಕ ಇನ್ನೊಬ್ಬರ ಬಗ್ಗೆ.
ಯಾರದೋ ಅಂಗಡಿಯ ಬಳಿ ಯಾರಾದರೂ ಹುಡುಗ ನಿಂತರೂ ಟೆನ್‌ಷನ್ ಊರವರಿಗೆ. “ಆ ಹುಡುಗಿ ಕಾಲೇಜಿಗೆ ಹೋಗಿ ಬರುವ ಸಮಯವಾಗಿದೆ, ಅದಕ್ಕೆ ನಿಂತಿರಬೇಕು’ ಎನ್ನುವ ಸುಳ್ಳು ಸುದ್ದಿ ಹಬ್ಬುತ್ತದೆ. ಯಾವುದಾದರೂ ಹುಡುಗಿ ಮೊಬೈಲ್ ಬಳಕೆ ಜಾಸ್ತಿ ಮಾಡಿದರೆ, “ಅವಳಿಗೆ ಲವ್ ಇರಬೇಕೇನೋ ಅದಕ್ಕೆ ಯಾವಾಗಲೂ ಮೊಬೈಲ್ ಹಿಡ್ಕೊಳ್ತಾಳೆ’ ಅಂತ ಊರಲ್ಲಿದ್ದ ಹುಡುಗೀರ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸುವ ಜನರಿಗೆ ತನ್ನ ಮನೆಯಲ್ಲಿನ ಹುಡುಗಿಯರು ಏನ್ ಮಾಡ್ತಾರೆ ಅಂತ ಗೊತ್ತಿರುವುದಿಲ್ಲ. ಯಾರ¨ªೋ ಮನೆಯಲ್ಲಿ ಚಿಕ್ಕಪುಟ್ಟ ಮಾಮೂಲಿ ಮನೆ ವಿಷಯಗಳಿಗೆ ಜಗಳವಾದರೂ ಮನೆಯವರಿಗಿಂತ ತಲೆಬಿಸಿ ಈ ಜನರಿಗೆ. “ಯಾಕೆ ಜಗಳವಾಗಿರಬಹುದು?’ ಅಂತ ಗುಸುಗುಸು ಮಾತು ಶುರು.
ಮನೆಗೆ ಯಾರಾದರೂ ಹೊರಗಿನವರು ಬಂದರೂ ಕಷ್ಟ . ಯಾಕೆ ಬಂದರು ಅಂತ? ಹಾಗೆ ಎಲ್ಲರ ಮನೆಗೂ ನೆಂಟರು ಹೇಳಿ ಕೇಳಿ ಬರುತ್ತಾರಾ? ಯಾವುದಾದರು ಒಬ್ಬಳು ಹುಡುಗಿ ತನ್ನ ಅಣ್ಣನ, ತಮ್ಮನ, ಮಾವನ, ಬಾವನ ಜೊತೆ ಬೈಕಿನಲ್ಲಿ ಹೋದರೆ ಕೊಳಕಾಗಿ ಮಾತಾಡುವ ಜನರು ಅವರ ಅಣ್ಣ, ತಮ್ಮ, ಅಕ್ಕ, ತಂಗಿಯರನ್ನು ಇದೇ ಥರ ಟ್ರೀಟ್ ಮಾಡ್ತಾರಾ ಅಂತ ಅನಿಸಿಬಿಡುತ್ತದೆ. ಸರ್ವೇಸಾಮಾನ್ಯವಾಗಿ ಈ ಗಾಳಿಸುದ್ದಿಗಳು ಹೆಣ್ಣುಮಕ್ಕಳ ಬದುಕಿನಲ್ಲಿ ಇದ್ದೇ ಇರುತ್ತದೆ. ಇದರಿಂದ ಬೇಸತ್ತ ಎಷ್ಟೋ ಹೆಣ್ಣುಮಕ್ಕಳು ಆತ್ಮಹತ್ಯೆ ಮಾಡಿಕೊಂಡದ್ದು ಕೂಡ ಉಂಟು.
ಬದುಕಿನಲ್ಲಿ ಎಷ್ಟೇ ಕಷ್ಟ ಬಂದರೂ ಅಂತಹ ತಪ್ಪು ನಿರ್ಧಾರವನ್ನು ಯಾವತ್ತೂ ತೆಗೆದುಕೊಳ್ಳಬಾರದು. ಅಂಥ ಸುದ್ದಿಗಳನ್ನು ಕೇಳಿ ಒಂದೇ ಸಮನೆ, “ಅಯ್ಯೋ ನಾನು ಸಾಯುತ್ತೇನೆ’ ಅಂತ ಹೊರಟ್ರೆ ಏನು ಪ್ರಯೋಜನ! ಸತ್ತ ಮೇಲೆ ಆ ಗಾಳಿಸುದ್ದಿಗಳು ದೂರವಾಗುತ್ತವೆಯೆ?
ಯಾರೋ ಕೆಲಸವಿಲ್ಲದ ಜನರ ಮಾತಿಗೆ ಬೆಲೆ ಕೊಟ್ಟು ಬದುಕಿನ ಮೇಲೆ ನಿರಾಶೆಯನ್ನು ಹೊಂದುವುದು ಸರಿಯಲ್ಲ. ಬಾಲ್ಯದಿಂದ ಸಾಕಿ, ಸಲಹಿದ ಹಾಲುಣಿಸಿ ಒಂಬತ್ತು ತಿಂಗಳು ತನ್ನ ಗರ್ಭದಲ್ಲಿ ಆಶ್ರಯ ನೀಡಿ, ಪ್ರತಿ ಕಷ್ಟದಲ್ಲೂ ಸ್ಪಂದಿಸಿದ ತಾಯಿಯನ್ನು ಮರೆಯಲುಂಟೆ? ಹಗಲುರಾತ್ರಿಯೆನ್ನದೆ ಬೆವರು ಸುರಿಸಿ ಕಷ್ಟಪಟ್ಟು ತಾನು ಎಷ್ಟು ಕಷ್ಟದಲ್ಲಿದ್ದರೂ ತನ್ನ ಕಷ್ಟವನ್ನ ನಮ್ಮೆದುರು ಹೇಳದೆ, ಕೆಲಸವಿಲ್ಲದಿದ್ದರೂ ಎಲ್ಲಿಯಾದ್ರೂ ಸಾಲ ಮಾಡಿ ಕಷ್ಟಪಟ್ಟು ಹೊಟ್ಟೆ ತುಂಬಿಸಿದ ತಂದೆಯಿಂದ ದೂರವಾಗುವುದುಂಟೆ?
ಯುವಜನರು ಗಾಳಿಸುದ್ದಿಗೆ ತಲೆಕೆಡಿಸಿಕೊಳ್ಳುವ ಅಗತ್ಯವೇ ಇಲ್ಲ. ತಮ್ಮ ಆತ್ಮಸಾಕ್ಷಿಗೆ ಸರಿಯಾಗಿ ನಡೆದುಕೊಂಡರೆ ಸಾಕು.
ಖಾಜಿ ಶಹನಾಜ್ ಭಂಡಾರ್ಕಾರ್ಸ್ ಕಾಲೇಜು, ಕುಂದಾಪುರ