Advertisement
ಕಾರ್ಕಳ ತಾಲೂಕಿನ ಮುಲ್ಲಡ್ಕ ಗ್ರಾಮದ ವಸಂತಿ, ಬ್ರಹ್ಮಾವರ ತಾಲೂಕಿನ ಹೇರಾಡಿ ಗ್ರಾಮದ ಕೃಷ್ಣ ನಾಯ್ಕ, ಆರೂರು ಗ್ರಾಮದ ರಾಧಾಬಾಯಿ, ವಡ್ಡರ್ಸೆ ಗ್ರಾಮದ ಜಯ ಪೂಜಾರ್ತಿ ಅವರ ಮನೆ ಮೇಲೆ ಮರಬಿದ್ದು ಹಾನಿ ಉಂಟಾಗಿದೆ.
Related Articles
Advertisement
ಕುಂದಾಪುರ: ಬೈಂದೂರು, ಕುಂದಾಪುರ ತಾಲೂಕಿನ ಎಲ್ಲೆಡೆ ಗುರುವಾರ ಬೆಳಗ್ಗೆಯಿಂದಲೇ ಭಾರೀ ಗಾಳಿ ಸಹಿತ ಮಳೆಯಾಗಿದ್ದು, ಹಲವೆಡೆ ಮನೆಗಳಿಗೆ ಹಾನಿಯಾಗಿದ್ದು, ತಗ್ಗು ಪ್ರದೇಶ, ಗದ್ದೆಗಳು ಜಲಾವೃತಗೊಂಡಿವೆ.
ಕುಂದಾಪುರ ತಾ|ನ ಉಪ್ಪಿನಕುದ್ರು ಗ್ರಾಮದ ಲಕ್ಷ್ಮೀ ಅವರ ವಾಸ್ತವ್ಯದ ಮನೆ, ಶಂಕರನಾರಾಯಣ ಗ್ರಾಮದ ಯೋಗೇಂದ್ರ ಬಳೆಗಾರ ಅವರ ಮನೆ, ವಕ್ವಾಡಿ ಗ್ರಾಮದ ವನಜಾಕ್ಷಿ ಶೆಟ್ಟಿಗಾರ್ ಅವರ ಮನೆ, ಗುಲ್ವಾಡಿ ಗ್ರಾಮದ ಸಾದು ದೇವಾಡಿಗ ಅವರ ಮನೆ, ಕೆದೂರು ಗ್ರಾಮದ ಪ್ರಕಾಶ್ ಅವರ ಜಾನುವಾರು ಕೊಟ್ಟಿಗೆ, ಉಳ್ಳೂರು ಗ್ರಾಮದ ನಾರಾಯಣ ಆಚಾರಿ ಅವರ ಮನೆ, ತಲ್ಲೂರು ಗ್ರಾಮದ ಯೋಗೀಶ್ ಆಚಾರ್ಯ ಅವರ ಮನೆಗಳಿಗೆ ಹಾನಿಯಾಗಿದ್ದು, ಅಂದಾಜು 1 ಲಕ್ಷ ರೂ.ಗೂ ಮಿಕ್ಕಿ ನಷ್ಟ ಉಂಟಾಗಿದೆ. ಕುಳಂಜೆ ಗ್ರಾಮದ ಶಂಕರ ನಾಯ್ಕ ಅವರ ಅಡಿಕೆ ತೋಟಕ್ಕೆ ಹಾನಿ ಸಂಭವಿಸಿದ್ದು, ಅಂದಾಜು 20 ಸಾವಿರ ರೂ. ನಷ್ಟ ಸಂಭವಿಸಿದೆ.
ಬೈಂದೂರು ತಾಲೂಕಿನ ಕಂಬದಕೋಣೆಯ ಮೂಕಾಂಬು ಅವರ ಮನೆ, ಶಿರೂರು ಗ್ರಾಮದ ಮಹಮ್ಮದ್ ಗೌಸ್ ಅವರ ಮನೆ, ಲಕ್ಷ್ಮಣ ಮೊಗವೀರ ಅವರ ಮನೆ, ಹೇರಂಜಾಲಿನ ಸವಿತಾ ಅವರ ದನದ ಕೊಟ್ಟಿಗೆ, ಉಪ್ಪುಂದ ಗ್ರಾಮದ ಗೋವಿಂದ ಖಾರ್ವಿ ಅವರ ಮನೆಗೆ ಗಾಳಿ ಮಳೆಯಿಂದಾಗಿ ಹಾನಿಯಾಗಿದ್ದು, ಅಂದಾಜು ಒಂದೂವರೆ ಲಕ್ಷ ರೂ.ಗೂ ಮಿಕ್ಕಿ ನಷ್ಟ ಉಂಟಾಗಿದೆ.
ಭೋರ್ಗರೆಯುತ್ತಿದೆ ಕಡಲು:
ನಿರಂತರವಾಗಿ ಎಡೆಬಿಡದೇ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಕೋಡಿ, ಗಂಗೊಳ್ಳಿ, ಕಂಚುಗೋಡು, ತ್ರಾಸಿ, ಮರವಂತೆ, ನಾವುಂದ, ಉಪ್ಪುಂದ, ಕೊಡೇರಿ, ಶಿರೂರು ಸೇರಿದಂತೆ ಎಲ್ಲೆಡೆಗಳಲ್ಲಿ ಕಡಲಬ್ಬರ ಬಿರುಸಾಗಿದ್ದು, ಭಾರೀ ಗಾತ್ರದ ಅಲೆಗಳು ಬಂದು ದಡಕ್ಕೆ ಅಪ್ಪಳಿಸುತ್ತಿವೆ.
ಕಾಪು ತಾ|: ಗಾಳಿ-ಮಳೆಗೆ ಲಕ್ಷಾಂತರ ರೂ. ಮೌಲ್ಯದ ಸೊತ್ತು ಹಾನಿ :
ಕಾಪು: ಕಾಪು ತಾಲೂಕಿನಲ್ಲಿ ಕಳೆದ ಐದು ದಿನಗಳಿಂದ ನಿರಂತರ ಮಳೆಯಾಗುತ್ತಿದ್ದು, ಕೆಲ ತಗ್ಗು ಪ್ರದೇಶಗಳಲ್ಲಿ ನೆರೆಯ ಭೀತಿ ಎದುರಾಗಿದ್ದು ಗಾಳಿ ಮಳೆಯಿಂದ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಲಕ್ಷಾಂತರ ರೂ. ಆಸ್ತಿಪಾಸ್ತಿಗೆ ಹಾನಿ ಉಂಟಾಗಿದೆ.
ಕಾಪು ತಾಲೂಕಿನ ಮೂಡುಬೆಟ್ಟು ಗ್ರಾಮದ ಲೀಲಾ ಅವರ ಮನೆ ಗಾಳಿ ಮಳೆಗೆ ಭಾಗಶಃ ಹಾನಿಯಾಗಿ 20 ಸಾವಿರ ರೂಪಾಯಿ, ಶಿರ್ವ ಗ್ರಾಮದ ಎಂ.ಎಚ್. ಹುಸೇನ್ ಅವರ ವಾಸ್ತವ್ಯದ ಮನೆಗೆ ಮರ ಬಿದ್ದು, 1 ಲಕ್ಷ ರೂ., ಪಲಿಮಾರು ಗ್ರಾಮದ ಮಾಧವ ದೇವಾಡಿಗ ಮನೆಗೆ ಮರ ಬಿದ್ದು 20 ಸಾವಿರ ರೂ., ಎಲ್ಲೂರು ಗ್ರಾಮದ ಬರ್ಶೀ ಸಾಹೇಬ್ ಮನೆಗೆ ಭಾಗಶಃ ಹಾನಿಯಾಗಿ 10 ಸಾವಿರ ರೂ.ಹಾನಿಯಾಗಿದೆ ಎಂದು ತಹಶೀಲ್ದಾರ್ ಕಚೇರಿ ಪ್ರಕಟನೆ ತಿಳಿಸಿದೆ.
ಕಟಪಾಡಿ ಗ್ರಾ.ಪಂ. ಲಕ್ಷಾಂತರ ರೂ. ನಷ್ಟ :
ಕಟಪಾಡಿ: ಬುಧವಾರ ರಾತ್ರಿ ಸುರಿದ ಮಳೆ ಮತ್ತು ಬೀಸಿದ ಬಲವಾದ ಗಾಳಿಯ ಪರಿಣಾಮ ಮರಗಳು ಉರುಳಿ ಬಿದ್ದು ಕೋಟೆ ಮತ್ತು ಕಟಪಾಡಿ ಗ್ರಾ.ಪಂ. ವ್ಯಾಪ್ತಿ ಯಲ್ಲಿ ಲಕ್ಷಾಂತರ ರೂ. ನಷ್ಟ ಸಂಭವಿಸಿದೆ.
ಕಟಪಾಡಿ ಹಳೆ ಎಂ.ಬಿ.ಸಿ. ರಸ್ತೆಯ ಶ್ರೀ ವಿಶ್ವನಾಥ ಕ್ಷೇತ್ರದ ಬಳಿ ಬೃಹತ್ ಗಾತ್ರದ ಹಾಳೆಯ ಮರವೊಂದು ಉರುಳಿ ಬಿದ್ದು ದೇಗುಲದ ಆವರಣ ಗೋಡೆಯು ಹಾನಿಗೀಡಾಗಿದೆ. 5 ವಿದ್ಯುತ್ ಕಂಬ ಮತ್ತು ವಿದ್ಯುತ್ ಟಿ.ಸಿ. ಧರಾಶಾಹಿಯಾಗಿದ್ದು, ಅಗ್ರಹಾರದಲ್ಲಿ ಬಿದ್ದ ವಿದ್ಯುತ್ ಕಂಬಗಳೂ ಸೇರಿದಂತೆ ಮೆಸ್ಕಾಂ ಇಲಾಖೆಗೆ ಒಟ್ಟು ಸುಮಾರು 2.3 ಲಕ್ಷ ರೂ ನಷ್ಟ ಸಂಭವಿಸಿದೆ ಎಂದು ಮೆಸ್ಕಾಂ ಕಟಪಾಡಿ ಶಾಖಾಧಿಕಾರಿ ರಾಜೇಶ್ ನಾಯಕ್ ಉದಯವಾಣಿಗೆ ತಿಳಿಸಿದ್ದಾರೆ.
ಬಸ್ರೂರು: ಮನೆ ಮೇಲೆ ಮರ ಬಿದ್ದು ಇಬ್ಬರಿಗೆ ಗಾಯ :
ಬಸ್ರೂರು: ಬಸ್ರೂರು ಗ್ರಾಮದ ಮಕ್ಕಿಮನೆ ಗಣಪಯ್ಯ ಗಾಣಿಗ ಅವರ ಮನೆ ಮೇಲೆ ಎರಡು ತೆಂಗಿನ ಮರ, ಒಂದು ಬೃಹತ್ ದೂಪದ ಮರ ಬಿದ್ದು, ಸಂಪೂರ್ಣ ಹಾನಿಗೊಂಡಿದೆ ಸುಮಾರು 3 ಲ.ರೂ.ಗೂ ಮಿಕ್ಕಿ ಹಾನಿಯಾಗಿದೆ. ಮನೆಯೊಳಗಿದ್ದ ವೆಂಕಮ್ಮ ಮತ್ತು ವಾರಿಜಾ ಅವರಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಕುಂದಾಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳೀಯ ಮುಖಂಡರಾದ ತಾ.ಪಂ. ಮಾಜಿ ಉಪಾಧ್ಯಕ್ಷ ಬಿ. ರಾಮ್‌ಕಿಶನ್ ಹೆಗ್ಡೆ ಮತ್ತಿತರರು ಸ್ಥಳದಲ್ಲಿದ್ದು ಪರ್ಯಾಯ ವ್ಯವಸ್ಥೆ ಮಾಡಿದ್ದರು. ಕುಂದಾಪುರ ತಹಶೀಲ್ದಾರ್ ಆನಂದಪ್ಪ ನಾಯ್ಕ ಅವರು ಗುರುವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಸ್ರೂರು ಪರಿಸರದ ಹಟ್ಟಿಕುದ್ರು,ಆನಗಳ್ಳಿ, ಕೋಣಿ, ಬಳ್ಕೂರು, ಗುಲ್ವಾಡಿ, ಕಂಡ್ಲೂರು, ಜಪ್ತಿ ಪ್ರದೇಶಗಳಲ್ಲಿ ಗುರುವಾರ ಭಾರೀ ಮಳೆ ಸುರಿದಿದೆ. ಸಾಂತಾವರ ಮತ್ತು ಕಂಡ್ಲೂರಿನಲ್ಲಿ ಮನೆ ಮೇಲೆ ಮರ ಬಿದ್ದು ಹಾನಿಯಾಗಿದೆ.
ಕಾರ್ಕಳ: ಧಾರಾಕಾರ ಮಳೆ,ಹೆದ್ದಾರಿಗೆ ಬಿದ್ದ ಮರ ತೆರವು :
ಕಾರ್ಕಳ: ತಾಲೂಕಿನಲ್ಲಿ ಗುರುವಾರ ಉತ್ತಮ ಮಳೆಯಾಗಿದೆ. ಬೆಳಗ್ಗಿನಿಂದಲೇ ಧಾರಾಕಾರ ಮಳೆ ಸುರಿದಿದೆ. ವ್ಯಾಪಕ ಮಳೆಗೆ ಧರ್ಮಸ್ಥಳ, ಶೃಂಗೇರಿ, ಕುದುರೆಮುಖ ಸಂಪರ್ಕ ಮುಖ್ಯ ಹೆದ್ದಾರಿ ಕರಿಯಕಲ್ಲು ಬಳಿ ಬೃಹದಾಕಾರದ ಮರ ಮುಖ್ಯ ರಸ್ತೆಗೆ ಬಿದ್ದಿದ್ದರಿಂದ ಎರಡು ತಾಸು ಗಳಷ್ಟು ಕಾಲ ಸಂಚಾರದಲ್ಲಿ ವ್ಯತ್ಯಯ ಉಂಟಾಯಿತು. ಸ್ಥಳಿಯ ಪುರಸಭೆ ಮಾಜಿ ಸದಸ್ಯ ಪ್ರಕಾಶ್ ರಾವ್ ಸೇರಿದಂತೆ ಸ್ಥಳಿಯ ಸಾರ್ವಜನಿಕರ ಸಹಕಾರದಲ್ಲಿ ಪುರಸಭೆ, ಮೆಸ್ಕಾಂ, ಅರಣ್ಯ ಇಲಾಖೆಯವರ ಸಹಕಾರದಲ್ಲಿ ಮರವನ್ನು ರಸ್ತೆಯಿಂದ ತೆರವುಗೊಳಿಸಲಾಯಿತು. ಬಳಿಕ ವಾಹನ ಸಂಚಾರ ಸುಗಮಗೊಂಡಿತು.
ಬುಧವಾರ ರಾತ್ರಿ, ಗುರುವಾರ ಸಂಜೆ ಧಾರಾಕಾರ ಮಳೆಯಾಗಿದೆ. ಮಾಳ, ಬಜಗೋಳಿ, ಮಿಯ್ನಾರು. ಇರ್ವತ್ತೂರು, ಆನೆಕರೆ, ನಕ್ರೆ, ಕುಕ್ಕುಂದೂರು, ಜೋಡು ರಸ್ತೆ, ಪಳ್ಳಿ, ಬೈಲೂರು, ಪತ್ತೂಂಕಿಕಟ್ಟೆ, ದುರ್ಗ, ಸಾಣೂರು, ಮುಳಿಕ್ಕಾರು ಮೊದಲಾದೆಡೆ ಉತ್ತಮ ಮಳೆಯಾಗಿದೆ.