Advertisement

ಗಾಳಿ ಮಳೆ: ಜಿಲ್ಲೆಯಲ್ಲಿ 217 ಹೆಕ್ಟೇರ್‌ ಬೆಳೆ ನಾಶ

09:44 PM May 14, 2019 | Lakshmi GovindaRaj |

ಚಾಮರಾಜನಗರ: ಜಿಲ್ಲೆಯಲ್ಲಿ ಇತ್ತೀಚೆಗೆ ಬಿದ್ದ ಮಳೆ ಹಾಗೂ ಗಾಳಿಯಿಂದ 217 ಹೆಕ್ಟೇರ್‌ ಪ್ರದೇಶದಲ್ಲಿ ತೋಟಗಾರಿಕಾ ಬೆಳೆಗಳು ನಷ್ಟಕ್ಕೀಡಾಗಿದ್ದು, ಇದರಲ್ಲಿ ಶೇ. 99ರಷ್ಟು ಬಾಳೆ ಬಾಳೆ ಹಾನಿಗೀಡಾಗಿದೆ.

Advertisement

ಧರೆಗುರುಳಿದ 40 ತೆಂಗಿನ ಮರ: ಹಾನಿಗೊಳಗಾದ ಫ‌ಸಲಿನಿಂದ ರೈತರಿಗೆ 6.90 ಕೋಟಿ ರೂ.ಗಳಷ್ಟು ನಷ್ಟವಾಗಿದೆ. ಬಾಳೆ ಬೆಳೆದ ರೈತರು ಇದರಿಂದ ಕಂಗಾಲಾಗಿದ್ದಾರೆ. ಬಾಳೆ ಹೊರತುಪಡಿಸಿದರೆ ಸುಮಾರು 15 ಎಕರೆಯಷ್ಟು ಪ್ರದೇಶದಲ್ಲಿ ಟೊಮೊಟೋ ಬೆಳೆ ನಷ್ಟವಾಗಿದ್ದು, 40 ತೆಂಗಿನಮರಗಳು ಉರುಳಿಬಿದ್ದಿವೆ.

ಚಾ.ನಗರ ತಾಲೂಕಿನಲ್ಲಿ ಹೆಚ್ಚು ಬೆಳೆ ಹಾನಿ: ಈ ಮಳೆ ಗಾಳಿಯಿಂದಾಗಿ ಚಾಮರಾಜನಗರ ತಾಲೂಕಿನಲ್ಲಿ ಹೆಚ್ಚು ಬೆಳೆ ನಷ್ಟವಾಗಿದೆ. ತಾಲೂಕಿನಲ್ಲಿ 146 ಹೆಕ್ಟೇರ್‌ನಷ್ಟು ಬೆಳೆ ನಷ್ಟವಾಗಿದ್ದರೆ, ಗುಂಡ್ಲುಪೇಟೆ ತಾಲೂಕಿನಲ್ಲಿ 63 ಹೆಕ್ಟೇರ್‌, ಕೊಳ್ಳೇಗಾಲ ತಾಲೂಕಿನಲ್ಲಿ 10 ಹೆಕ್ಟೇರ್‌, ಯಳಂದೂರು ತಾಲೂಕಿನಲ್ಲಿ 3 ಹೆಕ್ಟೇರ್‌ ನಷ್ಟು ಬೆಳೆ ನಷ್ಟವಾಗಿದೆ ಎಂದು ತೋಟಗಾರಿಕಾ ಮತ್ತು ಕಂದಾಯ ಇಲಾಖೆ ಮಾಡಿರುವ ಜಂಟಿ ಸಮೀಕ್ಷೆಯಲ್ಲಿ ಅಂದಾಜು ಮಾಡಲಾಗಿದೆ.

ಬಾಳೆ ನಾಶವೇ ಹೆಚ್ಚು: ಮುಂಗಾರು ಪೂರ್ವ ಮಳೆಯಲ್ಲಿ ಮಳೆಗಿಂತ ಹೆಚ್ಚಾಗಿ ಗಾಳಿ ಬೀಸುವಿಕೆ ಇರುವುದರಿಂದ ಬಾಳೆ ಬೆಳೆ ಹೆಚ್ಚು ಪ್ರಮಾಣದಲ್ಲಿ ಹಾನಿಗೊಳಗಾಗಿದೆ. 1 ಹೆಕ್ಟೇರ್‌ ಪ್ರದೇಶದಲ್ಲಿ 2500 ಬಾಳೆ ಗಿಡಗಳಿರುತ್ತವೆ. ಚಾಮರಾಜನಗರ ತಾಲೂಕಿನ ಕೊತ್ತಲವಾಡಿ, ಕಿಲಗೆರೆ, ಮಾದಲವಾಡಿ, ಕಟ್ನವಾಡಿ, ಚಿಕ್ಕಹೊಳೆ ಜಲಾಶಯ ಸುತ್ತಮುತ್ತ, ಸಿದ್ದಯ್ಯನಪುರ, ಅಟ್ಟುಗುಳಿಪುರ, ವಿ.ಸಿ.ಹೊಸೂರು, ವೆಂಕಟಯ್ಯನ ಛತ್ರ, ಬಂದಿಗೌಡನಹಳ್ಳಿ, ಚನ್ನಪ್ಪನಪುರ, ಯಾನಗಹಳ್ಳಿ, ಕೋಡಿಉಗನೆ, ಬದನಗುಪ್ಪೆ, ಸಂತೆಮರಹಳ್ಳಿ ಸಮೀಪದ ಕಮರವಾಡಿ, ಹೆಗ್ಗವಾಡಿಪುರ, ಗುಂಡ್ಲುಪೇಟೆ ತಾಲೂಕಿನ ಮಾಯನಾಯಕನಹಳ್ಳಿ, ಬೇಲಕುಪ್ಪೆ ಮತ್ತಿತರ ಗ್ರಾಮಗಳಲ್ಲಿ ಬಾಳೆ ಬೆಳೆ ಹಾನಿಗೀಡಾಗಿದೆ.

ಟೊಮೊಟೋ ಬೆಳೆ ನಾಶ: ಕೊಳ್ಳೇಗಾಲ ತಾಲೂಕಿನ ಟಗರಪುರ ಮೋಳೆ, ಮೊಳಗನಕಟ್ಟೆ, ತೆಳ್ಳನೂರು, ಚಿಕ್ಕಲ್ಲೂರು, ಇಕ್ಕಡಹಳ್ಳಿ, ಹನೂರು ತಾಲೂಕಿನ ಕೂಡೂರು, ಹೂಗ್ಯಂ ಗ್ರಾಮಗಳ ಸುತ್ತಮುತ್ತ ಬೆಳೆ ನಷ್ಟವಾಗಿದೆ. ಏಪ್ರಿಲ್‌ ಕೊನೆಯ ವಾರ ಮತ್ತು ಮೇ ಮೊದಲ ವಾರ ಚಾಮರಾಜನಗರ ತಾಲೂಕಿನ ಹಲವು ಗ್ರಾಮಗಳಲ್ಲಿ ಗಾಳಿ ಸಹಿತ ಮಳೆ ಸುರಿಯಿತು. ಈ ವೇಳೆ ಹೆಚ್ಚಿನ ಬೆಳೆ ಹಾನಿಗೊಳಗಾಗಿದೆ. ಬಾಳೆ ಅಲ್ಲದೇ ಟೊಮೊಟೋ ಬೆಳೆ ನಾಶವಾಗಿದೆ.

Advertisement

ಸೂಕ್ತ ಪರಿಹಾಕ್ಕೆ ಒತ್ತಾಯ: ಇಷ್ಟು ದಿನ ಬರದಿಂದ ಕಂಗೆಟ್ಟಿದ್ದ ಜಿಲ್ಲೆಯ ಹಲವು ರೈತರು ಈಗ ಬಿರುಗಾಳಿ ಸಹಿತ ಮಳೆಯಿಂದಾಗಿ ಬೆಳೆ ಕಳೆದುಕೊಂಡು ನಷ್ಟಕ್ಕೆ ಒಳಗಾಗಿದ್ದಾರೆ. ಕಷ್ಟಪಟ್ಟು ಬೆಳೆದಿದ್ದ ಬೆಳೆ ಕೈ ಸೇರುವ ಸಮಯದಲ್ಲಿ ನೆಲೆ ಕಚ್ಚಿರುವುದರಿಂದ ನೊಂದ ರೈತರು ಮುಂದೇನು ಎಂಬ ಚಿಂತೆಯಲ್ಲಿದ್ದಾರೆ. ನಷ್ಟಕ್ಕೆ ಒಳಗಾಗಿರುವ ರೈತರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ರೈತ ಮುಖಂಡರು ಒತ್ತಾಯಿಸಿದ್ದಾರೆ.

ಕಂಗಾಲಾದ ರೈತರು: ಜಿಲ್ಲೆಯಲ್ಲಿ ಒಂದೆಡೆ ಬರ, ಇನ್ನೊಂದೆಡೆ ಮುಂಗಾರು ಪೂರ್ವ ಗಾಳಿ ಮಳೆಯಿಂದ ತೋಟಗಾರಿಕಾ ಬೆಳೆಗಳು ನಾಶ. ಬಾಳೆ ಬೆಳೆ ಕೈಗೆ ಸಿಕ್ಕಿದರೆ ಜೀವನ ನಿರ್ವಹಣೆಗೆ ಒಂದಷ್ಟು ದಾರಿಯಾಗುತ್ತದೆ ಎಂಬ ಆಶಾಭಾವನೆಯಿಂದಿದ್ದ ರೈತರು, ಇದರಿಂದ ಕಂಗಾಲಾಗಿದ್ದಾರೆ.

ಪರಿಹಾರ ಹೆಚ್ಚು ನೀಡಿ: ಸರ್ಕಾರದಿಂದ ಬೆಳೆಹಾನಿಗೆ ನೀಡುವ ಪರಿಹಾರ ಬಹಳ ಕಡಿಮೆಯಿದೆ. ಇದರಿಂದ ಏನೂ ಪ್ರಯೋಜನವಾಗುವುದಿಲ್ಲ. ನಮ್ಮ ಫ‌ಸಲು ಮಾರಾಟ ಮಾಡಿದಾಗ ದೊರಕುತ್ತಿದ್ದ ದರವನ್ನು ಅನುಸರಿಸಿ ಪರಿಹಾರ ನೀಡಬೇಕು ಎಂಬುದು ರೈತರ ಒತ್ತಾಯವಾಗಿದೆ.

ಪರಿಹಾರ ನೀಡಲು ವಿಳಂಬ: ಬೆಳೆ ಹಾನಿ ಪರಿಹಾರವನ್ನು ಶೀಘ್ರವೇ ಹಾಗೂ ಸರಿಯಾದ ಪ್ರಮಾಣದಲ್ಲಿ ವಿತರಿಸಬೇಕು. ಅಧಿಕಾರಿಗಳು, ಸಿಬ್ಬಂದಿ ಬೆಳೆ ಹಾನಿ ಸಮೀಕ್ಷೆ ನಡೆಸಿ ಹೋಗುತ್ತಾರೆ. ಆದರೆ ನಂತರ ಒಂದಷ್ಟು ಪರಿಹಾರ ದೊರಕುತ್ತದೆ. ಆದರೆ ಆ ಪರಿಹಾರದ ಹಣ ನೀಡಲು ಬಹಳ ವಿಳಂಬ ಮಾಡಲಾಗುತ್ತದೆ. ಇದರಿಂದ ಬೆಳೆ ಕಳೆದುಕೊಂಡ ರೈತರಿಗೆ ಇನ್ನಷ್ಟು ಕಷ್ಟವಾಗುತ್ತದೆ ಎಂಬುದು ರೈತರ ಆರೋಪ.

ಜಿಲ್ಲಾಧಿಕಾರಿ ಪರಿಶೀಲನೆ: ಜಿಲ್ಲೆಯ ಬೆಳೆ ಹಾನಿಗೊಳಗಾದ ಎಲ್ಲ ತಾಲೂಕುಗಳಿಗೂ ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ ಅವರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಬೆಳೆ ಹಾನಿಯ ಕುರಿತು ಸರ್ಕಾರಕ್ಕೆ ಸಮಗ್ರ ವರದಿ ಸಲ್ಲಿಸಲಾಗುವುದು. ಸೂಕ್ತ ಹಾಗೂ ಸಮರ್ಪಕ ಪರಿಹಾರಕ್ಕಾಗಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು. ಬೆಳೆ ಹಾನಿ ಕುರಿತ ಪರಿಹಾರವನ್ನು ವಿಳಂಬ ಮಾಡದೇ ವಿತರಿಸಲಾಗುವುದು ಜಿಲ್ಲಾಧಿಕಾರಿ ತಿಳಿಸಿದರು.

ಸಾವಿರಾರು ರೂಪಾಯಿ ಸಾಲ ಸೋಲ ಮಾಡಿಕೊಂಡು, ಬಾಳೆ ಬೆಳೆದಿದ್ದೆವು. ಪಂಪ್‌ಸೆಟ್‌ನಲ್ಲಿ ನೀರಿನ ಕೊರತೆಯಿದ್ದರೂ, ಸಂಭಾಳಿಸಿಕೊಂಡು ರಾತ್ರಿ ವೇಳೆಯೆಲ್ಲಾ ಎಚ್ಚರವಾಗಿದ್ದು ನೀರು ಕಟ್ಟಿದ್ದೆವು. ಸಾಲ ಮಾಡಿ ರಸಗೊಬ್ಬರ ಹಾಕಿ, ಕೀಟನಾಶಕ ಸಿಂಪಡಿಸಿದ್ದೆವು. ಬೆಳೆದ ಬೆಳೆಯು ಇನ್ನೊಂದು ತಿಂಗಳಲ್ಲಿ ಕೈ ಸೇರಬೇಕಿತ್ತು. ಈ ಹಂತದಲ್ಲಿ ಗಾಳಿ ಮಳೆಯಿಂದ ನಾವು ಬೆಳೆದ ಬೆಳೆ ನಾಶವಾಗಿದೆ. ಈಗೇನು ಮಾಡಬೇಕೆಂದು ತಿಳಿಯದಾಗಿದೆ.
-ಬಿ.ಪಿ. ನಾಗರಾಜಮೂರ್ತಿ, ನಷ್ಟಕ್ಕೀಡಾದ ರೈತ, ಬದನಗುಪ್ಪೆ.

ಬೆಳೆ ಹಾನಿಗೊಳಗಾದ ಪ್ರದೇಶಗಳಲ್ಲಿ ಕಂದಾಯ ಮತ್ತು ತೋಟಗಾರಿಕಾ ಇಲಾಖೆಯಿಂದ ಜಂಟಿ ಸಮೀಕ್ಷೆ ನಡೆಸಲಾಗಿದೆ. ದಾಖಲಾತಿ ಸಹ ಮುಗಿದಿದೆ. ಕಂದಾಯ ಇಲಾಖೆಯಿಂದ ರೈತರಿಗೆ ಹೆಕ್ಟೇರ್‌ಗೆ 13500 ರೂ.ನಂತೆ ಪರಿಹಾರ ನೀಡಲಾಗುವುದು.
-ಶಿವಪ್ರಸಾದ್‌, ಉಪನಿರ್ದೇಶಕ, ತೋಟಗಾರಿಕಾ ಇಲಾಖೆ.

* ಕೆ.ಎಸ್‌. ಬನಶಂಕರ ಆರಾಧ್ಯ

Advertisement

Udayavani is now on Telegram. Click here to join our channel and stay updated with the latest news.

Next