ಮೈಸೂರು: ದಸರೆಯ ಸಂಭ್ರಮ ಹೆಚ್ಚಿಸುವ ಉದ್ದೇಶದಿಂದ ಆಯೋಜಿಸಿದ್ದ ಗಾಳಿಪಟ ಉತ್ಸವ ಎರಡನೇ ದಿನವೂ ಸಾರ್ವಜನಿಕರನ್ನು ಆಕರ್ಷಿಸುವಲ್ಲಿ ಯಶಸ್ವಿಯಾದರೂ ಗಾಳಿಪಟಗಳ ಹಾರಾಟಕ್ಕೆ ಗಾಳಿಯ ವೇಗದಲ್ಲಿ ಸ್ಥಿರತೆ ಕಾಣಿಸದ ಪರಿಣಾಮ ದೊಡ್ಡ ಗಾಳಿಪಟಗಳ ಹಾರಾಟ ಸಾಧ್ಯವಾಗದೆ ನಿರಾಸೆ ಮೂಡಿಸಿತು.
ನಗರದ ಲಲಿತ್‌ಮಹಲ್ ಹೆಲಿಪ್ಯಾಡ್‌ನಲ್ಲಿ ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ ಆಯೋಜಿಸಿದ್ದ ದಸರಾ ಮಹೋತ್ಸವ ಪ್ರಯುಕ್ತ ಎರಡು ದಿನಗಳ ಗಾಳಿಪಟ ಉತ್ಸವಕ್ಕೆ ಭಾನುವಾರ ಪ್ರೇಕ್ಷಕರಿಂದ ಉತ್ತಮ ಸ್ಪಂದನೆ ದೊರೆಯಿತು. ಗಾಳಿಪಟ ಉತ್ಸವದಲ್ಲಿ ವಿವಿಧ ವಿನ್ಯಾಸದ ಆಕರ್ಷಕ ಗಾಳಿಪಟಗಳ ಹಾರಾಟ ಕಣ್ತುಂಬಿಕೊಳ್ಳಲು ನೂರಾರು ಮಂದಿ ಮಕ್ಕಳೊಂದಿಗೆ ಆಗಮಿಸಿದ್ದರು.
ಆದರೆ ಮೊದಲ ದಿನದಂತೆ ಎರಡನೇ ದಿನವೂ ಗಾಳಿಯ ಕೊರತೆ ಕಂಡುಬಂದ ಪರಿಣಾಮ ಗಾಳಿಪಟ ಉತ್ಸವದ ಸಂಭ್ರಮಕ್ಕೆ ಕೊಂಚ ಅಡ್ಡಿಯುಂಟು ಮಾಡಿತು. ಗಾಳಿಪಟ ಉತ್ಸವದ ಅಂಗವಾಗಿ ನಡೆದ ಕಾರ್ಯಗಾರದಲ್ಲಿ ಮಂಗಳೂರಿನ ಪ್ರಶಾಂತ್ ಹಾಗೂ ಮುಂಬೈನ ಅಶೋಕ್ ಷಾ, ಮಕ್ಕಳನ್ನು ಸಂತೋಷಪಡಿಸುವ ಹಾಗೂ ಅವರ ಕುತೂಹಲ ಕೆರಳಿಸುವ ನಿಟ್ಟಿನಲ್ಲಿ ವಿವಿಧ ಆಕಾರದ,
ಬಣ್ಣಬಣ್ಣದ ಗಾಳಿಪಟಗಳನ್ನು ಮಕ್ಕಳೆದುರೆ ತಯಾರಿಸಿದರು. ಈ ಸಂದರ್ಭದಲ್ಲಿ ಬಾಲಂಗೋಚಿ ಎಲ್ಲಾ ಗಾಳಿಪಟಕ್ಕೂ ಬೇಕಾ, ಎಷ್ಟು ದೂರ ಹಾರುತ್ತವೆ, ಏಕೆ ದೊಡ್ಡ ಗಾಳಿಪಟಗಳು ಹಾರುತ್ತಿಲ್ಲ, ಹೀಗೆ ಮಕ್ಕಳ ಮುಗ್ಧ ಪ್ರಶ್ನೆಗೆ ಪ್ಲೆ„ಯರ್ಸ್ ಉತ್ತರ ನೀಡಿದರು. ಇನ್ನು ಗಾಳಿಪಟ ಉತ್ಸವಕ್ಕೆ ಆಗಮಿಸಿದ್ದ ಪ್ರೇಕ್ಷಕರು ಡಿಜೆ ಸಂಗೀತಕ್ಕೆ ಹೆಜ್ಜೆಹಾಕಿ ಸಂಭ್ರಮಿಸಿದರು.
ಗಜಪಡೆಗೆ ಸಿಡಿಮದ್ದು ಸಿಡಿಸುವ ತಾಲೀಮು: ನಾಡಹಬ್ಬ ದಸರೆಯ ಜಂಬೂಸವಾರಿಯಲ್ಲಿ ಪಾಲ್ಗೊಳ್ಳುವ ಗಜಪಡೆ, ಅಶ್ವರೋಹಿ ಪಡೆಗೆ ಎರಡನೇ ಬಾರಿಗೆ ಸಿಡಿಮದ್ದು ಸಿಡಿಸುವ ತಾಲೀಮ ನಡೆಸಲಾಯಿತು. ಅರಮನೆಯ ಮಾರಮ್ಮನ ದೇವಸ್ಥಾನದ ಆವರಣದಲ್ಲಿ ಚಿನ್ನದ ಅಂಬಾರಿ ಹೊರಲಿರುವ ಅರ್ಜುನ ನೇತೃತ್ವದ ಗಜಪಡೆಯ 12 ಆನೆಗಳು, 22 ಕುದುರೆಗಳನ್ನು ನಿಲ್ಲಿಸಿ ನಾಲ್ಕು ಸುತ್ತುಗಳಲ್ಲಿ 21 ಕೂಶಲ ಕೂಶಲು ತೋಪು ಸಿಡಲಾಯಿತು.
ಮೈಸೂರು ನಗರದ ಸಿಎಆರ್‌ನ ನುರಿತ 30 ಸಿಬ್ಬಂದಿ ಏಕಕಾಲದಲ್ಲಿ ಫಿರಂಗಿಗಳಿಂದ ಸಿಡಿಮದ್ದು ಸಿಡಿಸಿದರು. ಮೊದಲ ಬಾರಿಯ ತಾಲೀಮಿನಲ್ಲಿ ಸಿಡಿಮದ್ದಿನ ಶಬ್ದಕ್ಕೆ ಬೆಚ್ಚಿದ್ದ ಧನಂಜಯ, ದ್ರೋಣ, ಚೈತ್ರ ಆನೆಗಳು ಹೆಚ್ಚಾಗಿ ವಿಚಲಿತಗೊಳ್ಳಲಿಲ್ಲ.