ಕಾಸರಗೋಡು: ಧಾರಾಕಾರ ಗಾಳಿ, ಮಳೆಗೆ ಕಾಸರಗೋಡು ಜಿಲ್ಲೆಯ ಬಹುತೇಕ ಹೊಳೆಗಳು ತುಂಬಿ ಹರಿಯುತ್ತಿದ್ದು, ವಿವಿಧೆಡೆಗಳಲ್ಲಿ ಮರ ಬಿದ್ದು ವಿದ್ಯುತ್ ಕಂಬಗಳು ಧರೆಗುರುಳಿವೆ. ಹಲವು ಮನೆಗಳಿಗೆ ಹಾನಿಯಾಗಿದೆ. ಜಿಲ್ಲೆಯ ವಿವಿಧೆಡೆ ಕಡಲ್ಕೊರೆತ ಮುಂದುವರಿದಿದೆ. ಬುಧವಾರ ಮಳೆಯ ಬಿರುಸು ಕಡಿಮೆಯಾಗಿದ್ದು, ಬಿಟ್ಟು ಬಿಟ್ಟು ಮಳೆ ಸುರಿದಿದೆ.
ಮಂಗಳವಾರ ಸಂಜೆಯಿಂದ ಸುರಿದ ಧಾರಾಕಾರ ಗಾಳಿ, ಮಳೆಗೆ ವಿವಿಧೆಡೆ ವ್ಯಾಪಕ ನಷ್ಟ ಸಂಭವಿಸಿದೆ. ನಾಟೆಕಲ್ಲಿನಲ್ಲಿರುವ ಬೆಳ್ಳೂರು ಸರಕಾರಿ ಹೈ. ಸೆ. ಶಾಲೆ ಪರಿಸರದಲ್ಲಿ ಮರ ಮುರಿದು ಬಿದ್ದ ಪರಿಣಾಮವಾಗಿ ಈ ಪ್ರದೇಶದ ಏಳು ವಿದ್ಯುತ್ ಕಂಬಗಳು ತುಂಡಾಗಿ ರಸ್ತೆಗೆ ಬಿದ್ದಿವೆ. ಬೆಳ್ಳೂರು ಬಳಿಯ ಅನೆಕ್ಕಳದಲ್ಲಿ ಮರ ಬಿದ್ದು ವಿದ್ಯುತ್ ಕಂಬ ಹಾನಿಗೀಡಾಗಿದೆ. ಪೆರ್ಲ ಬಳಿಯ ಅಡ್ಕಸ್ಥಳದಲ್ಲಿ ಮರ ಮುರಿದು ಬಿದ್ದು ಆನಂದ ನಾಯ್ಕ ಅವರ ಮನೆಗೆ ವ್ಯಾಪಕ ಹಾನಿಯಾಗಿದೆ. ಬದಿಯಡ್ಕ ಸಮೀಪದ ಬೀಜಂತ್ತಡ್ಕದಲ್ಲಿ ಮೊಹಮ್ಮದ್ ಕುಂಞಿ ಅವರ ಮನೆಗೆ ಮರ ಬಿದ್ದು ಹಾನಿಯಾಗಿದೆ.
ಮುಳ್ಳೇರಿಯ ಬಳಿಯ ಮುಂಡೋಳು ಅಡ್ಕದಲ್ಲಿ ಪುರುಷೋತ್ತಮ ಅವರ ಮನೆ ಬಳಿಯ ಕಾಂಪೌಂಡು ಮೇಲೆ ಗುಡ್ಡ ಜರಿದು ಬಿದ್ದಿದೆ. ಅಡ್ಕ-ಮುಂಡೋಳು ರಸ್ತೆಗೂ ಮಣ್ಣು ಬಿದ್ದಿದ್ದು ಇದರಿಂದ ಒಂದು ಗಂಟೆ ಕಾಲ ವಾಹನ ಸಂಚಾರ ಮೊಟಕುಗೊಂಡಿತು.
ಮುಳ್ಳೇರಿಯ – ಆದೂರು ರಸ್ತೆಯಲ್ಲಿ ಮಂಗಳ ವಾರ ರಾತ್ರಿ ಮರ ಬಿದ್ದು ಕೆಲವು ಹೊತ್ತು ಸಾರಿಗೆ ಅಡಚಣೆ ಉಂಟಾಯಿತು. ಅಡೂರು ಬೆಳ್ಳಿಪ್ಪಾಡಿ ಯಲ್ಲಿ ಚನಿಯ ಅವರ ಮನೆಗೆ ಸಿಡಿಲು ಬಡಿದು ಗೋಡೆ ಬಿರುಕುಬಿಟ್ಟಿದೆ. ವಿದ್ಯುತ್ ಮೈನ್ ಸ್ವಿಚ್, ಟಿ.ವಿ., ವಯರಿಂಗ್ ಮೊದಲಾದವು ಹಾನಿ ಗೀಡಾಗಿವೆ. ಮಾನ್ಯ ಲಕ್ಷಂವೀಡಿನಲ್ಲಿ ಅಶ್ರಫ್ ಅವರ ಮನೆಗೆ ಮರ ಬಿದ್ದು ನಾಶನಷ್ಟ ಉಂಟಾ ಗಿದೆ. ಬೆಳ್ಳೂರು ಬಳಿಯ ನಾಟೆಕಲ್ಲಿನಲ್ಲಿ ವಿದ್ಯುತ್ ಕಂಬಗಳು ರಸ್ತೆಗೆ ಬಿದ್ದ ಪರಿಣಾಮ ಮಂಗಳವಾರ ಸಂಜೆ ಕೆಲವು ಗಂಟೆಗಳ ಕಾಲ ವಾಹನ ಸಂಚಾರಕ್ಕೆ ಅಡಚಣೆ ಉಂಟಾಯಿತು. ವಿದ್ಯುತ್ ಮೊಟಕುಗೊಂಡಿತು.
ಸಿಡಿಲು ಬಡಿದು ಮನೆಗೆ ಹಾನಿ
ಧಾರಾಕಾರ ಮಳೆಯೊಂದಿಗೆ ಸಿಡಿಲು ಬಡಿದ ಪರಿಣಾಮವಾಗಿ ವರ್ಕಾಡಿ, ಮೀಂಜ ಗ್ರಾಮ ಪಂಚಾಯತ್ ಪ್ರದೇಶದಲ್ಲಿ ವ್ಯಾಪಕ ಹಾನಿಯುಂಟಾಗಿದೆ.
ಮೀಂಜ ಪಂಚಾಯತ್‌ನ ಕುಳಬೈಲಿನಲ್ಲಿ ಬಡುವನ್ ಕುಂಞಿ ಅವರ ಮನೆಗೆ ಸಿಡಿಲು ಬಡಿದು ಮನೆಯ ವಿದ್ಯುತ್ ವಯರಿಂಗ್ ಉರಿದು ನಾಶವಾಗಿದೆ.