Advertisement

Politics: ಹಿಂದೂತ್ವಕ್ಕಾಗಿ ಹೋರಾಡುವವರನ್ನೇ ಶಾಸಕರಾಗಿ ಗೆಲ್ಲಿಸಿ: ಈಶ್ವರಪ್ಪ

11:26 PM Jan 07, 2024 | Team Udayavani |

ಬೆಳಗಾವಿ: ಹಿಂದೂತ್ವಕ್ಕಾಗಿ ಹೋರಾಡುವವರನ್ನೇ ಶಾಸಕರನ್ನಾಗಿ ಆಯ್ಕೆ ಮಾಡಬೇಕು. ಹಿಂದೂ ಧರ್ಮದ ಬಗ್ಗೆ ಎಲ್ಲೆಡೆ ಜಾಗೃತಿ ಮೂಡಿಸುವ ಕಾರ್ಯ ಮಾಡಬೇಕು. ಹಿಂದೂ ರಾಷ್ಟ್ರ ನಿರ್ಮಾಣವೇ ನಮ್ಮೆಲ್ಲರ ಧ್ಯೇಯವಾಗಲಿ ಎಂದು ಮಾಜಿ ಡಿಸಿಎಂ, ಬಿಜೆಪಿ ವರಿಷ್ಠ ಕೆ.ಎಸ್‌. ಈಶ್ವರಪ್ಪ ಹೇಳಿದರು.

Advertisement

ಉಚಗಾವಿಯಲ್ಲಿ ಭಾನುವಾರ ಬೆಳಗಾವಿ ಗ್ರಾಮೀಣ ಬಿಜೆಪಿ ಮಂಡಲ ಅಧ್ಯಕ್ಷ ಧನಂಜಯ ಜಾಧವ ಮಿತ್ರ ಪರಿವಾರ ಹಮ್ಮಿಕೊಂಡಿದ್ದ 27ನೇ ಹಿಂದೂ ಕಾರ್ಯಕರ್ತರ ಸಮಾವೇಶದಲ್ಲಿ ಅವರು ಮಾತನಾಡಿದರು.

ಹಿಂದೂರಾಷ್ಟ್ರ ಮಾಡುವ ಜನಗಳು ಶಾಸಕರಾಗಿ ಆಯ್ಕೆ ಆಗಬೇಕು. ಸ್ವಾಮಿ ವಿವೇಕಾನಂದರ ಮಾತಿನಿಂದ ಎಲ್ಲರೂ ಅವರನ್ನು ಗೌರವದಿಂದ ಕಾಣಲು ಶುರು ಮಾಡಿದರು. ಅಂತಹ ಧರ್ಮ, ಅಂತಹ ಸಂಸ್ಕೃತಿ ನಮ್ಮದು ಎಂದರು.

ಹಿಂದೂ ಧರ್ಮದ ಬಗ್ಗೆ ಜಾಗೃತಿ ಮೂಡಿಸುವ ಆಸೆ ಕಾಂಗ್ರೆಸ್‌ ನಾಯಕರಿಗೂ ಇದೆ. ಆದರೆ ಮುಸ್ಲಿಮರ ಮತಗಳು ಕೈ ತಪ್ಪುತ್ತವೆ ಎಂಬ ಭಯ ಇದೆ ಎಂದು ಹೇಳಿದರು.

ನಾವು ಈಗ ರಾಮಮಂದಿರ ಕಟ್ಟಿದ್ದೇವೆ ಅಂತ ರಾಮರಾಜ್ಯ ಯಾವಾಗ ಆಗುತ್ತದೆ ಎಂಬುದಾಗಿ ಕಾಂಗ್ರೆಸ್‌ನವರು ಪ್ರಶ್ನಿಸುತ್ತಾರೆ. ಕಾಂಗ್ರೆಸ್‌ನವರು ದೇಶವನ್ನು ಒಡೆದು ಪಾಕಿಸ್ತಾನ ಮಾಡಿದ್ದಾರೆ. ದೆಹಲಿಗೆ ಹೋಗಿ ಗಾಂಧಿ ಸಮಾಧಿ ನೋಡಲಿ. ಅಲ್ಲಿ ಹೇ ಯೇಸು, ಹೇ ಅಲ್ಲಾ ಅಂತ ಬರೆದಿಲ್ಲ. ಹೇ ರಾಮ್‌ ಅಂತ ಬರೆಯಲಾಗಿದೆ ಎಂದು ಈಶ್ವರಪ್ಪ ಹೇಳಿದರು.

Advertisement

ಬಿಜೆಪಿ ವಕ್ತಾರ ಹರಿಪ್ರಕಾಶ ಕೋಣೆಮನೆ ಮಾತನಾಡಿ, ಅಯೋಧ್ಯೆಯಲ್ಲಿ ಶ್ರೀ ರಾಮ ಮಂದಿರ ನಿರ್ಮಾಣ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಾಗ ಮಾತನಾಡುತ್ತಾರೆ. ಅಯೋಧ್ಯೆಯಲ್ಲಿ ರಾಮಮಂದಿರ ಏಕೆ ಬೇಕು, ನಮ್ಮ ಊರಿನಲ್ಲಿಯೇ ರಾಮ ಮಂದಿರಕ್ಕೆ ನಾವು ದೇಣಿಗೆ ನೀಡುತ್ತೇವೆ ಎಂದು ಹೇಳಿಕೆ ನೀಡುತ್ತಾರೆ. ಹಾಗಾದರೆ ವಿದೇಶದಲ್ಲಿರುವ ಯಾತ್ರಾ ಸ್ಥಳಗಳಿಗೆ ಹೋಗುವವರನ್ನು ನೀವು ಇದೇ ರೀತಿಯಾಗಿ ಕೇಳುತ್ತೀರಾ? ಆ ರಾಮ, ಈ ರಾಮ ಎಂದು ಭೇದ ಭಾವ ಮಾಡಿ ಜನರಲ್ಲಿ ತಪ್ಪು ಸಂದೇಶ ಏಕೆ ನೀಡುತ್ತೀರಿ ಎಂದು ಪ್ರಶ್ನಿಸಿದರು.

ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲ ಮಾತನಾಡಿ, ಹಿಂದೂ ಕಾರ್ಯರ್ತರನ್ನು ಗುರಿಯಾಗಿಸಿ ಪ್ರಕರಣ ದಾಖಲಿಸಲಾಗುತ್ತಿದೆ. ಕಾಂಗ್ರೆಸ್‌ ಕಾರ್ಯಕರ್ತರನ್ನು ಸುಮ್ಮನೆ ಬಿಡುತ್ತಾರೆ. ಇಂಥ ದ್ವೇಷದ ರಾಜಕಾರಣವನ್ನು ಸಹಿಸುವುದಿಲ್ಲ ಎಂದರು.

ಬಿಜೆಪಿ ಮುಖಂಡ ಮಹಾಂತೇಶ ಕವಟಗಿಮಠ ಮಾತನಾಡಿ, ಗ್ಯಾರಂಟಿ ಯೋಜನೆಗಳಿಂದ ಕರ್ನಾಟಕ ಆರ್ಥಿಕ ದಿವಾಳಿ ಅಂಚಿನಲ್ಲಿದೆ. ಬರಗಾಲ ಇದ್ದರೂ ಇನ್ನೂ ಪರಿಹಾರ ನೀಡಿಲ್ಲ. ಅಭಿವೃದ್ಧಿ ಕೆಲಸಗಳಿಗೆ ಅನುದಾನ ಇಲ್ಲವಾಗಿದೆ. ಕಾಂಗ್ರೆಸ್‌ ಗೆಲ್ಲಿಸಿ ಜನ ತಪ್ಪು ಮಾಡಿದ್ದಾರೆ. ಈಗ ಎಲ್ಲರಿಗೂ ಅರಿವಾಗುತ್ತಿದೆ ಎಂದರು.

ಬೆಳಗಾವಿ ಗ್ರಾಮೀಣ ಮಂಡಲ ಅಧ್ಯಕ್ಷ ಧನಂಜಯ ಜಾಧವ ಮಾತನಾಡಿ, 27 ವರ್ಷದಿಂದ ಹಿಂದೂ ಕಾರ್ಯಕರ್ತರನ್ನು ಕೂಡಿಸಿ ಸಮಾವೇಶ ನಡೆಸಿಕೊಂಡು ಬಂದಿದ್ದೇವೆ. ಹಿಂದೂಗಳು ಒಂದಾದರೆ ಹಿಂದೂರಾಷ್ಟ್ರ ನಿರ್ಮಾಣ ಸುಲಭವಾಗಲಿದೆ. ಮುಂದಿನ ದಿನಗಳಲ್ಲಿ ಹಿಂದೂರಾಷ್ಟ್ರದ ಕನಸು ಸಾಕಾರವಾಗಲಿದೆ ಎಂದರು.

ಮುಖಂಡ ಸಂಜಯ ಕುಬಲ್‌ ಮಾತನಾಡಿದರು. ಮೇಯರ್‌ ಶೋಭಾ ಸೋಮನಾಚೆ, ಉಪಮೇಯರ್‌ ರೇಶ್ಮಾ ಪಾಟೀಲ, ಮುಖಂಡರಾದ ಧನಶ್ರೀ ಸರದೇಸಾಯಿ, ಪ್ರಮೋದ ಕೊಚೇರಿ, ಪಂಕಜ ಘಾಡಿ, ಮಲ್ಲಿಕಾರ್ಜುನ ಮಾದಮ್ಮನವರ, ರಾಜು ಭಾತಖಾಂಡೆ, ನಾರಾಯಣ ಪಾಟೀಲ, ಪ್ರದೀಪ ಪಾಟೀಲ, ಭುಜನ್‌ ಸಾಲವಡೆ, ಅನಿಲ್‌ ಪಾಟೀಲ ಸೇರಿದಂತೆ ಇತರರು ಇದ್ದರು.

ಹೇ ರಾಮ್‌’ ಎಂದಿದೆ..
ನಾವು ಈಗ ರಾಮಮಂದಿರ ಕಟ್ಟಿದ್ದೇವೆ ಅಂತ ರಾಮರಾಜ್ಯ ಯಾವಾಗ ಆಗುತ್ತದೆ ಎಂಬುದಾಗಿ ಕಾಂಗ್ರೆಸ್‌ನವರು ಪ್ರಶ್ನಿಸುತ್ತಾರೆ. ಕಾಂಗ್ರೆಸ್‌ನವರು ದೇಶವನ್ನು ಒಡೆದು ಪಾಕಿಸ್ತಾನ ಮಾಡಿದ್ದಾರೆ. ದೆಹಲಿಗೆ ಹೋಗಿ ಗಾಂ ಧಿ ಸಮಾ ಧಿ ನೋಡಲಿ. ಅಲ್ಲಿ ಹೇ ಯೇಸು, ಹೇ ಅಲ್ಲಾ ಅಂತ ಬರೆದಿಲ್ಲ. ಹೇ ರಾಮ್‌ ಅಂತ ಬರೆಯಲಾಗಿದೆ ಎಂದು ಬಿಜೆಪಿ ಮುಖಂಡ ಕೆ.ಎಸ್‌. ಈಶ್ವರಪ್ಪ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next