ಶಹಾಪುರ: ರಾಷ್ಟ್ರದಲ್ಲಿ ಸಹಸ್ರಾರು ಅಂಗನವಾಡಿ ಕಾರ್ಯಕರ್ತರು ಹಗಲಿರುಳು ಎನ್ನದೆ ಜೀವದ ಹಂಗು ತೊರೆದು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಸರ್ಕಾರ ಪ್ರತಿಯೊಂದು ಕ್ಷೇತ್ರಗಳಲ್ಲಿ ಅಂಗನವಾಡಿ ಕಾರ್ಯಕರ್ತರನ್ನು ಸಮರ್ಪಕ ಕಾರ್ಯಕ್ಕೆ ಬಳಸಿಕೊಳ್ಳುತ್ತಿದೆ. ಆದರೆ ಇದೇ ಕಾರ್ಯಕರ್ತರ ಬೇಡಿಕೆ ಈಡೇರಿಸುವಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮೀನ ಮೇಷ ಎಣಿಸುತ್ತಿವೆ ಎಂದು ಸಿಐಟಿಯು ತಾಲೂಕು ಅಧ್ಯಕ್ಷೆ ಬಸ್ಸಮ್ಮ ನಾಟೇಕಾರ ಆರೋಪಿಸಿದರು.
ತಾಲೂಕಿನ ಹತ್ತಿಗೂಡೂರ ಗ್ರಾಮದಲ್ಲಿ ನಡೆದ ವಲಯ ಮಟ್ಟದ ಅಂಗನವಾಡಿ ಕಾರ್ಯಕರ್ತರ ಸಮ್ಮೇಳನ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಅಂಗನವಾಡಿ ಕಾರ್ಯಕರ್ತರ ಮೇಲೆ ನಿರಂತರ ದೌರ್ಜನ್ಯಗಳು ನಡೆಯುತ್ತಿದ್ದರೂ ಸರ್ಕಾರ ಸೂಕ್ತ ಕ್ರಮಕ್ಕೆ ಮುಂದಾಗುತ್ತಿಲ್ಲ. ಅಲ್ಲದೆ ಅಂಗನವಾಡಿ ಕೇಂದ್ರಗಳಿಗೆ ನೀಡುವ ಅನುದಾನ ಕಡಿತಗೊಳಿಸಲಾಗುತ್ತಿದೆ. ಇದರಿಂದ ಕೇಂದ್ರದ ನಿರ್ವಹಣೆ ಕಷ್ಟವಾಗುತ್ತಿದೆ. ಆರೋಗ್ಯ ಇಲಾಖೆ ಪಲ್ಸ್ ಪೋಲಿಯೋ ಮತ್ತು ಕೊರೊನಾ ಮಹಾಮಾರಿ ವ್ಯಾಪಿಸಿದ ವೇಳೆ ಅಂಗನವಾಡಿ ಕಾರ್ಯಕರ್ತರು ಜೀವದ ಹಂಗು ತೊರೆದು ಕೆಲಸ ಮಾಡಿದ್ದಾರೆ. ಆದಾಗ್ಯು ಕೇಂದ್ರ, ರಾಜ್ಯ ಸರ್ಕಾರ ಕಾರ್ಯಕರ್ತರ ಉಪ ಜೀವನ ನಿರ್ವಹಣೆಗೂ ಸಹಾಯಧನ ನೀಡಲು ಮುಂದಾಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾರ್ಯಕರ್ತರೆಲ್ಲರೂ ಒಗ್ಗಟ್ಟಾಗಿ ಹೋರಾಟಗಳನ್ನು ಮಾಡಬೇಕು. ಒಗ್ಗಟ್ಟಿನಲ್ಲಿ ಬಲವಿದೆ ಎಂಬುದನ್ನು ಅರಿತು ಸಂಘಟನೆ ಮಾಡಬೇಕು. ಅಂದಾಗ ನಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಿದೆ ಎಂದರು.
ಶಾರದಾದೇವಿ ನಂದಳ್ಳಿ, ಕಾಸಿಂಬಿ ಹತ್ತಿಗೂಡೂರ, ಯಮನಮ್ಮ ದೋರನಳ್ಳಿ, ಮುಖಂಡರಾದ ಮಲ್ಲಯ್ಯ ಪೋಲಂಪಲ್ಲಿ, ನಿರ್ಮಲ, ದೇವಿಂದ್ರಮ್ಮ, ಶಶಿಕಲಾ, ರಾಧಿಕಾ, ರೇಣುಕಾ ಸೇರಿದಂತೆ ಅಂಗನವಾಡಿ ಕೇಂದ್ರದ ಕಾರ್ಯಕರ್ತರು, ಸಹಾಯಕರು, ಸಿಐಟಿಯೂ ಮುಖಂಡರು ಭಾಗವಹಿಸಿದ್ದರು.