Advertisement
ಆಡಳಿತಾರೂಢ ಕಾಂಗ್ರೆಸ್‌ಗೆ ಈ ಚುನಾವಣೆ ಅತ್ಯಂತ ಪ್ರತಿಷ್ಠೆ ಮಾತ್ರವಲ್ಲದೆ ಸವಾಲು ಕೂಡ ಆಗಿದೆ. ಕಳೆದ ಲೋಕಸಭಾ ಚುನಾವಣೆ ಸಂದರ್ಭ ದಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರಕಾರ ವಿದ್ದರೂ ತಲಾ ಒಂದೊಂದು ಕ್ಷೇತ್ರಗಳಲ್ಲಿ ಮಾತ್ರ ಗೆಲ್ಲಲು ಸಾಧ್ಯವಾಯಿತು. ಉಳಿ ದಂತೆ ಮಂಡ್ಯದಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಬಿಟ್ಟರೆ ಉಳಿದೆಲ್ಲ 25 ಕ್ಷೇತ್ರಗಳು ಬಿಜೆಪಿ ಪಾಲಾಗಿದ್ದವು. ಆದರೆ ಈ ಬಾರಿ ಪೂರ್ಣ ಪ್ರಮಾಣದಲ್ಲಿ ಕಾಂಗ್ರೆಸ್ ಸರಕಾರವೇ ಇರುವುದರಿಂದ ಕನಿಷ್ಠ 20 ಕ್ಷೇತ್ರ ಗಳಲ್ಲಿ ಗೆಲ್ಲಲೇ ಬೇಕೆಂಬ ಲೆಕ್ಕಾಚಾರದಲ್ಲಿ ಹಲವು ಬಗೆಯ ಸವಾಲು ಸ್ವೀಕರಿಸಿ ಸಚಿವರ ಬೇಡಿಕೆಗಳಿಗೆ ಮನ್ನಣೆ ನೀಡಿರುವ ಹೈಕಮಾಂಡ್, ಗೆದ್ದುಕೊಂಡು ಬರ ಬೇಕೆಂಬ ಗುರಿ ನೀಡಿದೆ. ಹೀಗಾಗಿ ಸಚಿವರು “ಮಾಡು ಇಲ್ಲವೇ ಮಡಿ’ ಎಂಬ ಸ್ಥಿತಿಯಲ್ಲಿದ್ದಾರೆ. ಗೆದ್ದರೆ ಮಕ್ಕಳು ಲೋಕಸಭೆ ಪ್ರವೇಶಿಸುತ್ತಾರೆ, ಸೋತರೆ ಅಪ್ಪಂದಿರು ಮನೆಗೆ ಹೋಗುತ್ತಾರೆ ಎಂಬ ಚರ್ಚೆ ಆರಂಭವಾಗಿದೆ.
ರಾಜ್ಯದ 28 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಇದು ವರೆಗೆ ಪ್ರಕಟಿಸಿರುವ 24 ಕ್ಷೇತ್ರಗಳ ಅಭ್ಯರ್ಥಿ ಗಳ ಪೈಕಿ 14 ಕ್ಷೇತ್ರಗಳ ಟಿಕೆಟ್‌ಗಳು ಸಚಿವರ ಪುತ್ರರು, ಪುತ್ರಿಯರು, ಪತ್ನಿ ಹಾಗೂ ಸಹೋದರರ ಪಾಲಾಗಿವೆ. ಚುನಾವಣೆಯನ್ನು ಗೆಲ್ಲಲೇಬೇಕೆಂಬ ದೃಷ್ಟಿಯಿಂದ ಅಭ್ಯರ್ಥಿ ಆಯ್ಕೆ, ಚುನಾವಣೆ ನಿರ್ವಹಣೆ ಎಲ್ಲವನ್ನೂ ಪಕ್ಷ ಜಿಲ್ಲಾ ಉಸ್ತುವಾರಿ ಸಚಿವರಿಗೆ ವಹಿಸಿದ್ದರಿಂದ “ತನು-ಮನ-ಧನ’ ಎಲ್ಲವನ್ನೂ ಖರ್ಚು ಮಾಡಿ ಯಾರನ್ನೋ ಗೆಲ್ಲಿಸುವ ಬದಲು ತಮ್ಮವರನ್ನೇ ಗೆಲ್ಲಿಸುವುದು ಸೂಕ್ತ ಎಂಬ ತೀರ್ಮಾನಕ್ಕೆ ಬಂದ ಸಚಿವರು, ಕುಟುಂಬ ಸದಸ್ಯರಿಗೆ ಟಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಈಗ ಅವರ ಮುಂದೆ ದೊಡ್ಡ ಸವಾಲು ಇದೆ. ತಮ್ಮವರನ್ನು ಗೆಲ್ಲಿಸಿಕೊಂಡು ಬಾರದಿದ್ದರೆ ಫಲಿತಾಂಶದ ಬಳಿಕ ನೈತಿಕ ಹೊಣೆ ಹೊತ್ತು ಯಾವುದೇ ಸಬೂಬು ಹೇಳದೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಗುತ್ತದೆ. ಇಂತಹ ಒಂದು ಸಂದೇಶವನ್ನು ಕಾಂಗ್ರೆಸ್ ವರಿಷ್ಠರು ಟಿಕೆಟ್ ಗಿಟ್ಟಿಸಿರುವ ಸಚಿವರಿಗೆ ನೀಡಿದ್ದಾರೆ ಎಂದು ಪಕ್ಷದ ಉನ್ನತ ಮೂಲಗಳು ತಿಳಿಸಿವೆ. ಫಲಿತಾಂಶ ಬಳಿಕ ಪುನಾರಚನೆ ಗ್ಯಾರಂಟಿ
ಚುನಾವಣೆ ಫಲಿತಾಂಶ ಜೂ. 4ರಂದು ಹೊರಬೀಳಲಿದ್ದು, ಅನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಚಿವ ಸಂಪುಟ ಪುನಾರಚನೆ ಖಚಿತ ಎಂಬ ಮಾತು ಈಗ ಕಾಂಗ್ರೆಸ್ ಪಕ್ಷದೊಳಗೆ ಹರಿದಾಡುತ್ತಿದೆ. ಈ ನಡುವೆ ಹೈಕಮಾಂಡ್ ಸಚಿವರಿಗೆ ಕೊಟ್ಟಿರುವ ಹೊಣೆ ನೋಡಿದ ಮೇಲಂತೂ ಪುನಾರಚನೆಯಲ್ಲಿ ತಮಗೆ ಸಚಿವ ಸ್ಥಾನ ಕೂಡ ಖಚಿತ ಎಂಬ ನಿರೀಕ್ಷೆಯಲ್ಲಿ ಸಚಿವಾಕಾಂಕ್ಷಿಗಳಿದ್ದಾರೆ.